ಜೈಲು, ಬೇಲುಗಳ ತೊಳಲಾಟಕ್ಕೆ ಸಿಲುಕಿದ ಸಚಿವರು, ಮಾಜಿ ಸಚಿವರು, ಶಾಸಕರು, ಚಿತ್ರನಟರು, ಗಣ್ಯರು: ಕರಾಳ ವರ್ಷವಾಗಿ ಕಾಡಿದ 2024

ನಂಜುಂಡಪ್ಪ.ವಿ.

ರಾಜ್ಯದ ರಾಜಕೀಯ ಇತಿಹಾಸದಲ್ಲಿ ರಾಜಕಾರಣಿಗಳು, ಗಣ್ಯರು, ಚಿತ್ರನಟರಿಗೆ 2024 ಕರಾಳ ವರ್ಷವಾಗಿ ಮಾರ್ಪಟ್ಟಿದೆ. ಜೈಲು, ಬೇಲುಗಳ ತೊಳಲಾಟಗಳಿಗೆ ಈ ವರ್ಷ ಸಾಕ್ಷಿಯಾಯಿತು.

ನ್ಯಾಯಾಲಯ, ಜಾಮೀನು, ಸೆರೆಮನೆಗಳ ಅಲೆದಾಟದಲ್ಲೇ ವರ್ಷ ಕಳೆದುಹೋಯಿತು. ಹಲವು ಪ್ರಭಾವಿ ರಾಜಕಾರಣಿಗಳು, ಚಿತ್ರನಟರು ವಿವಿಧ ಪ್ರಕರಣಗಳಲ್ಲಿ ಸೆರೆಮನೆ ವಾಸ ಅನುಭವಿಸಿದ ಪ್ರಸಂಗಗಳಿಗೆ ಈ ವರ್ಷ ಸಾಕ್ಷಿಯಾಯಿತು. ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಈ ವರ್ಷ ರಾಜಕಾರಣಿಗಳು ಅಲೆದಾಡಿದರು.

ಸಚಿವರಾಗಿದ್ದ ಬಿ. ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲುವಾಸ ಅನುಭವಿಸುವ ಪರಿಸ್ಥಿತಿ ಎದುರಾಯಿತು. ಎಚ್.ಡಿ. ರೇವಣ್ಣ ಕುಟುಂಬ, ಮುನಿರತ್ನ, ಶಾಸಕ ಸತೀಶ್ ಸೈಲ್ ಸೆರೆವಾಸ ಅನುಭವಿಸಿದಂತಾಯಿತು. ಮತ್ತೊರ್ವ ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಪೊಲೀಸರು ಬಂಧಿಸಿದ ವರ್ಷ ಕೂಡ ಇದಾಗಿದೆ. ಚಿತ್ರನಟ ದರ್ಶನ್ ಅಂಡ್ ಗ್ಯಾಂಗ್ ಪ್ರಕರಣ ಬ್ಲಾಕ್ ಬ್ಲಸ್ಟರ್ ಚಲನಚಿತ್ರ ಮೀರಿಸುವಂತಹ, ಅತ್ಯಂತ ಭೀಭತ್ಸತೆಯ ಪ್ರಕಣವಾಗಿ ದಾಖಲಾಗಿದ್ದು ಮತ್ತೊಂದು ವೈಶಿಷ್ಟ್ಯವಾಗಿದೆ.

ರಾಜ್ಯ ರಾಜಕೀಯ ಪಿತಾಮಹ ಎಂದೇ ಗುರುತಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೆ ಸಿಂಹಸ್ವಪ್ನವಾಗಿ ಕಾಡಿದ ವರ್ಷ. ಗೌಡರ ಪುತ್ರ, ಇಬ್ಬರು ಮೊಮ್ಮಕ್ಕಳು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿದರು. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಪುನರ್ಜನ್ಮ ನೀಡಿದ ವರ್ಷವೂ ಆಗಿದೆ. ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಭಾರೀ ಕೈಗಾರಿಕೆ ಸಚಿವರಾಗಿ ಪುನರ್ಜನ್ಮ ಪಡೆದು ಪುಟಿದೆದ್ದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಸೆರೆವಾಸ ಅನುಭವಿಸಿದರು. ಭವಾನಿ ರೇವಣ್ಣ ಅವರು ನ್ಯಾಯಾಲಯದಿಂದ ಜಾಮೀನು ಪಡೆದ ಕಾರಣ ಹೆಚ್ಚಿನ ತೊಂದರೆ ಎದುರಾಗಲಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ಜಲ್ ರೇವಣ್ಣ ಅವರಿಗೆ ಇನ್ನೂ ಸೆರೆಮನೆವಾಸ ತಪ್ಪಿಲ್ಲ.

ಎಚ್.ಡಿ. ರೇವಣ್ಣ ಅವರನ್ನು ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಬಂಧಿಸಿ, ಬೆಂಗಳೂರಿನ 17ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದರು. ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲಿನ ದೌರ್ಜನ್ಯ ನಡೆಸಿದ್ದಾರೆಂಬ ಪ್ರಕರಣ ದಾಖಲಾಯಿತು. ಹಲವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದ ಗುರುತರ ಆರೋಪವೂ ಅವರ ಮೇಲಿದೆ. ಮೇ 26 ರಂದು ಹಾಸನ ಲೋಕಸಭೆ ಚುನಾವಣೆಗೆ ಮತದಾನ ಪೂರ್ಣಗೊಂಡ ನಂತರ ಪ್ರಜ್ಜಲ್ ರೇವಣ್ಣ ವಿದೇಶಕ್ಕೆ ಹಾರಿದರು. ಪ್ರಜ್ವಲ್ ಅವರನ್ನು ಮೇ 30 ರಂದು ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್.ಐ.ಟಿ ಮಹಿಳಾ ಪೊಲೀಸರ ತಂಡ ಬಂಧಿಸಿತು.

ಜೂನ್ 1 ರಂದು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಜ್ವಲ್ ರೇವಣ್ಣ ಕ್ಷಮಿಸಲಾರದಂತಹ ಅಪರಾಧ ಮಾಡಿದ್ದು, ಅವರ ಕ್ರಮ ಹೇಸಿಗೆ ತರಿಸುತ್ತದೆ ಎಂದರು.

ಪಕ್ಷದ ಕಾರ್ಯಕರ್ತರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸೂರಜ್ ರೇವಣ್ಣ ಸಹ ಸೆರೆವಾಸ ಅನುಭವಿಸಿದರು. ಜುಲೈ 22 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದಲ್ಲದೇ ಬಂಧನಕ್ಕೊಳಗಾದರು. ಅಕ್ಟೋಬರ್ 14 ರಂದು ಬಿ.ನಾಗೇಂದ್ರಗೆ ಷರತ್ತುಬದ್ಧ ಜಾಮೀನು ದೊರೆಯಿತು. 187 ಕೋಟಿ ರೂಪಾಯಿ ಹಗರಣ ಸಂಬಂಧ 4ಸಾವಿರದ 970 ಪುಟಗಳ ಆರೋಪಪಟ್ಟಿ ಸಲ್ಲಿಕೆ ಮಾಡಲಾಯಿತು. ನಾಗೇಂದ್ರ ಎ1 ಆರೋಪಿಯಾಗಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್, ನಟಿ ಪವಿತ್ರಾಗೌಡ ಸೇರಿ 19 ಮಂದಿಯನ್ನು ಜೂನ್ 11 ರಂದು ಪೊಲೀಸರು ಬಂಧಿಸಿದರು. ಬಂಧಿತರನ್ನು ಎಸ್.ಐ.ಟಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವರ್ಷ ಪ್ರಮುಖ ಸುದ್ದಿಯಾಗಿದೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರೆ ಆರೋಪಿಗಳಾದ ವಿನಯ್, ಪ್ರದೋಷ್, ಧನರಾಜ್‌ ಸೇರಿ ಎಲ್ಲಾ ಆರೋಪಿಗಳು ಆರು ತಿಂಗಳ ಕಾಲ ಸೆರೆವಾಸ ಅನುಭವಿಸಿದರು.

ನಟ ದರ್ಶನ್ ಅವರಿಗೆ ಆರೋಗ್ಯ ಕಾರಣಗಳಿಗಾಗಿ ಆರು ವಾರಗಳ ಕಾಲ ನ್ಯಾಯಾಲಯ ಜಾಮೀನು ನೀಡಿತ್ತು. ಅಂತಿಮವಾಗಿ ಡಿಸೆಂಬರ್ 13 ರಂದು ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್ ಜಗದೀಶ್, ಪ್ರದೋಷ್ ರಾವ್ ಅವರಿಗೆ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿತು. ನ್ಯಾಯಮೂರ್ತಿ ಎಸ್ ವಿಶ್ವಜಿತ್ಶೆಟ್ಟಿ ಅವರ ಏಕಸದಸ್ಯ ಪೀಠ ತೀರ್ಪು ಪ್ರಕಟಿಸಿತು.

ಗುತ್ತಿಗೆ ದಾರರೊಬ್ಬರಿಗೆ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಮುನಿರತ್ನ ಅವರನ್ನು ಕೋಲಾರ ಸಮೀಪ ಸೆಪ್ಟೆಂಬರ್ 14 ರಂದು ಬೆಂಗಳೂರಿನ ವಯ್ಯಾಲಿಕಾವಲ್ ಪೊಲಿಸರು ಬಂಧಿಸಿದರು.

ಇದಾದ ಬಳಿಕ ಮುನಿರತ್ನ ವಿರುದ್ಧ ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ತಮ್ಮ ಮೇಲೆ ಮುನಿರತ್ನ ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಕರಣ ದಾಖಲಿಸಿದರು. ಪ್ರಕರಣದಲ್ಲಿ 20 ದಿನ ಸೆರೆವಾದಲ್ಲಿದ್ದ ಮುನಿರತ್ನ ನವೆಂಬರ್ 25 ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುನಿರತ್ನರಿಗೆ ಶರತ್ತುಬದ್ಧ ಜಾಮೀನು ನೀಡಿತು.

ಮುನಿರತ್ನ ಪ್ರಕರಣ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತ್ತು. ಮುನಿರತ್ನ ಬೆಳಗಾವಿ ಅಧಿವೇಶನಕ್ಕೆ ತೆರಳಿದಾಗ ಹಲವು ಕಾಂಗ್ರೆಸ್ ಘಟಾನುಘಟಿಗಳ ಬಗ್ಗೆ ಸಿಡಿಗುಂಡುಗಳನ್ನು ಸಹ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಆದರೆ ಸಿಡಿಸಲು ಅವರಿಗೆ ಅವಕಾಶ ದೊರೆಯಲಿಲ್ಲ.

ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ಕಳವು ಮತ್ತು ಅಕ್ರಮ ರಫ್ತು ಮಾಡಿದ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಗೆ ಜನಪ್ರತಿನಿಧಿಗಳ ನ್ಯಾಯಾಲಯ ಅಕ್ಟೋಬರ್ 24 ರಂದು ಗರಿಷ್ಠ 7 ವರ್ಷಗಳ ಶಿಕ್ಷೆ, ಒಟ್ಟು ಆರು ಪ್ರಕರಣಗಳಲ್ಲಿ ಭಾರೀ ದಂಡ ವಿಧಿಸಿ ತೀರ್ಪು ನೀಡಿದ್ದು ವಿಶೇಷವಾಗಿದೆ. ನಂತರ ಹೈಕೋರ್ಟ್ ನವೆಂಬರ್ 13 ರಂದು ಸತೀಶ್ ಸೈಲ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತು. ಸತೀಶ್ ಸೈಲ್ ಗೆ ವಿಧಿಸಿದ್ದ ಜೈಲು ಶಿಕ್ಷೆಯನ್ನು ರಾಜ್ಯ ಹೈಕೋರ್ಟ್ ಡಿಸೆಂಬರ್ 22 ರಂದು ಅಮಾನತುಗೊಳಿಸಿ ಆದೇಶ ನೀಡಿತು.

ಡಿಸೆಂಬರ್ 19 ರಂದು ವಿಧಾನಮಂಡಲ ಅಧಿವೇಶನ ಪೂರ್ಣಗೊಂಡ ನಂತರ ವಿಧಾನಪರಿಷತ್ ಕಲಾಪ ಮುಂದೂಡಿದ ನಂತರ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಸದಸ್ಯ ಸಿ.ಟಿ. ರವಿ ಅವಹೇಳನಕಾರಿ ಪದ ಬಳಿಸಿದ್ದಾರೆ ಎಂಬ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಸಿ.ಟಿ. ರವಿ ಅವರ ಮೇಲೆ ಸುರ್ವಣ ಸೌಧದಲ್ಲಿ ದೂಂಡಾವರ್ತನೆ ತೋರಿದ ಆರೋಪ ಸಹ ಕೇಳಿ ಬಂತು. ತಮ್ಮ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ ಸಿ.ಟಿ. ರವಿ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿದ ಪೊಲೀಸರು ಇಡೀ ರಾತ್ರಿ ಸಿ.ಟಿ. ರವಿ ಅವರನ್ನು ಬೆಳಗಾವಿ ಸುತ್ತಮುತ್ತ ಸುತ್ತಾಡಿಸಿದರು.

ಮರು ದಿನ ಸಿ.ಟಿ. ಅವರನ್ನು ಬೆಳಗಾವಿಯ ಐದನೇ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಜಾಮೀನು ಮನವಿ ಸಲ್ಲಿಸಿದರು. ಆರಂಭಿಕ ವಾದ ಆಲಿಸಿದ ನ್ಯಾಯಪೀಠ, ನಂತರ ಈ ಪ್ರಕರಣವು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಆದೇಶ ನೀಡಿರುವ ಅವರು ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಿದರು.

ನಂತರ ಸಿ.ಟಿ. ರವಿ ಅವರು ಹೈಕೋರ್ಟ್ ಮೊರೆ ಹೋದರು. ಸಿ.ಟಿ. ರವಿ ಅವರು ತಕ್ಷಣ ಬಿಡುಗಡೆ ಸಂಬಂಧಿತ ಮಧ್ಯಂತರ ಕೋರಿಕೆಗೆ ಅರ್ಹರಾಗಿದ್ದಾರೆ. ಹೀಗಾಗಿ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು” ಎಂದು ನ್ಯಾಯಾಲಯ ಆದೇಶಿಸಿತು.

ಮತ್ತೊಂದೆಡೆ ಸಿ.ಟಿ. ರವಿ ಬಳಸಿರುವ ಭಾಷೆಯ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವರ್ಷಾಂತ್ಯದಲ್ಲಿ ಈ ಪ್ರಕರಣ ಆರೋಪ – ಪ್ರತ್ಯಾರೋಪಗಳಲ್ಲಿ ಮುಳುಗೇಳುವಂತಾಯಿತು.

More News