ಬೆಂಗಳೂರು : 2024 ವರ್ಷ ಅಂತ್ಯವಾಗಿ,
2025 ಹೊಸ ವರ್ಷದ ಹೊಸ್ತಿಲಲ್ಲಿ ಇದ್ದೇವೆ. 2024ರ ವರ್ಷ ಹಲವು ಮಹತ್ವದ ರಾಜಕೀಯ ಬೆಳವಣಿಗೆಗೆ ರಾಜ್ಯ ಸಾಕ್ಷಿಯಾಯಿತು. ಕರ್ನಾಟಕ ಲೋಕಸಭೆ ಚುನಾವಣೆಯಿಂದ ಹಿಡಿದು ಉಪಸಮರದ ವರೆಗೆ ಮಹತ್ವದ ರಾಜಕೀಯ ಅಚ್ಚರಿ, ಮೇಲಾಟಗಳನ್ನು ಕಂಡಿದೆ. ಅದರ ಒಂದು ವರ್ಷಾಂತ್ಯದ ಮೆಲುಕು ಇಲ್ಲಿದೆ.
2024 ವರ್ಷ ಕೊನೆಯಲ್ಲಿದ್ದು, ಹೊಸ ವರ್ಷದ ಸ್ವಾಗತಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. 2024ರ ವರ್ಷ ಕರ್ನಾಟಕದಲ್ಲಿ ಹಲವು ರಾಜಕೀಯ ವಿದ್ಯಾಮಾನಗಳಿಗೆ ಸಾಕ್ಷಿಯಾಯಿತು. ಹಲವು ಮಹತ್ವದ ರಾಜಕೀಯ ಮೇಲಾಟ, ಅಚ್ಚರಿ, ಘಟನೆಗಳಿಗೆ ರಾಜ್ಯ ರಾಜಕೀಯ ತೆರೆದುಕೊಂಡಿತು. ಲೋಕಸಮರ ಕದನ ಕುತೂಹಲ, ಅಚ್ಚರಿಯ ಪಕ್ಷಾಂತರ, ಮೈತ್ರಿ ರಾಜಕೀಯ, ಉಪಸಮರದ ಅಚ್ಚರಿ, ಬಣ ಬಡಿದಾಟ, ಬಂಡಾಯ ಬಾವುಟ ಹೀಗೆ ಹತ್ತು ಹಲವು ರಾಜಕೀಯ ಮೇಲಾಟಗಳಿಗೆ ರಾಜ್ಯ ಸಾಕ್ಷಿಗಳು. ಅದರ ಒಂದು ಇಯರ್ ಎಂಡ್ ರೌಂಡ್ ಅಪ್ ಇಲ್ಲಿದೆ.
ಲೋಕಸಮರದ ಕದನ ಕತೂಹಲ:
2024 ರಾಜ್ಯ ಲೋಕಸಭೆ ಚುನಾವಣೆಯ ಪ್ರಜಾಪ್ರಭುತ್ವದ ಉತ್ಸವಕ್ಕೆ ಸಾಕ್ಷಿಯಾಯಿತು. ಲೋಕಸಮರದ ಕದನ ಕುತೂಹಲ ರಾಜ್ಯ ರಾಜಕೀಯದಲ್ಲಿ ಹಲವು ವಿದ್ಯಮಾನಗಳಿಗೆ ಕಾರಣವಾಯಿತು. ವಿಧಾನಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಆಡಳಿತಾರೂಢ ಕಾಂಗ್ರೆಸ್ ವರ್ಷದ ಬಳಿಕ ನಡೆದ ಲೋಕಸಮರದಲ್ಲಿ ಹಿನ್ನಡೆ ಅನುಭವಿಸಿತು. ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಕಳೆದ ಲೋಕಸಮರಗಿಂತ ಕಡಿಮೆ ಗೆಲುವು ಕಂಡಿತು. ಇತ್ತ ಜೆಡಿಎಸ್ 2 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಗೆಲುವು ಕಂಡಿತು. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ತನ್ನ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಿತ್ತು. ಆದರೆ, ವಿಧಾನಸಭೆ ಚುನಾವಣೆಯ ಯಶಸ್ಸುನ್ನು ಪುನಾರಾವರ್ತಿಸಲು ಸಾಧ್ಯವಾಗಿಲ್ಲ. ಲೋಕಸಮರದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕದನ ಕುತೂಹಲ ಕೆರಳಿಸಿತ್ತು. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸೋಲುವ ಮೂಲಕ ಅಚ್ಚರಿಯ ಫಲಿತಾಂಶ ಬಂದಿತ್ತು. ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್ ಡಿ.ಕೆ.ಸುರೇಶ್ ರನ್ನು ಸೋಲಿಸಿ ಕಾಂಗ್ರೆಸ್ ಗೆ ದೊಡ್ಡ ಶಾಕ್ ನೀಡಿದ್ದರು. ಇತ್ತ ರಾಜ್ಯ ಲೋಕಸಮರದ ಮತ್ತೊಂದು ಹೈ ಪ್ರೊಫೈಲ್ ಕ್ಷೇತ್ರ ಮಂಡ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗೆದ್ದು ಬೀಗಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ರಾಜಕೀಯ:
2024ರ ಲೋಕಸಮರದ ಮುನ್ನ ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯ ರಾಜಕೀಯದ ದೊಡ್ಡ ವಿದ್ಯಾಮಾನವಾಗಿದೆ. ಲೋಕಸಮರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿತ್ತು. ಆ ಮೂಲಕ ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಗೆ ಪ್ರಬಲ ಪೈಪೋಟಿ ನೀಡಿತು. 2019ರ ಲೋಕಸಮರದಲ್ಲಿ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರೆ, ಈ ಬಾರಿಯ ಲೋಕಸಮರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಾಜಕೀಯ ತಿರುವು ನೀಡಿತು. ದೀರ್ಘ ಕಾಲೀಕ ಮೈತ್ರಿಯ ಉದ್ದೇಶದೊಂದಿಗೆ ಜೆಡಿಎಸ್ ಹಾಗೂ ಬಿಜೆಪಿ ರಾಜ್ಯದಲ್ಲಿ ದೋಸ್ತಿ ಮಾಡಿಕೊಂಡಿದೆ. ಈ ಮೈತ್ರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗೆ ಉತ್ತಮ ಫಲಿತಾಂಶ ನೀಡಿತು. ಗ್ಯಾರಂಟಿ ಜನಪ್ರಿಯತೆ ಮಧ್ಯೆ ಆಡಳೊತಾರೂಢ ಕಾಂಗ್ರೆಸ್ ನ್ನು ರಾಜ್ಯದಲ್ಲಿ ಒಂದಂಕಿಗೆ ಕಟ್ಟಿಹಾಕಲು ಮೈತ್ರಿ ಯಶಕಂಡಿತು. ಆ ಮೂಲಕ 2024ರಲ್ಲಿ ರಾಜ್ಯದಲ್ಲಿ ಮೈತ್ರಿ ರಾಜಕೀಯ ಮತ್ತೆ ಆರಂಭವಾಯಿತು.
ಅಚ್ಚರಿ ಪಕ್ಷಾಂತರಗಳಿಗೆ ಕಾರಣವಾದ ವರ್ಷ
2024 ರಾಜ್ಯದಲ್ಲಿ ಅಚ್ಚರಿಯ ಪಕ್ಷಾಂತರಗಳಿಗೆ ಸಾಕ್ಷಿಯಾಯಿತು. 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಸಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಾಂತರವಾಗಿದ್ದ ಜಗದೀಶ್ ಶೆಟ್ಟರ್, ಲೋಕಸಮರದ ಹಿನ್ನೆಲೆ 2024ರಲ್ಲಿ ಮತ್ತೆ ಮಾತೃಪಕ್ಷ ಬಿಜೆಪಿಗೆ ಮರಳಿ, ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಗೆದ್ದು ಬೀಗಿದರು. ಇತ್ತ ತುಮಕೂರು ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ್ದರಿಂದ ಮುದ್ದಹನುಮೇಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಆದರೆ, ಲೋಕಸಮರದಲ್ಲಿ ಕ್ಷೇತ್ರದ ಜನರು ಮಾತ್ರ ಅವರ ಕೈ ಹಿಡಿಯಲಿಲ್ಲ. ಇತ್ತ ಕೊಪ್ಪಳದ ಮಾಜಿ ಸಂಸದ ಕರಡಿ ಸಂಗಣ್ಣಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣ ಕಾಂಗ್ರೆಸ್ ಗೆ ಪಕ್ಷಾಂತರವಾದರು. ಅದೇ ರೀತಿ ಜಯಪ್ರಕಾಶ್ ಹೆಗ್ಡೆ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇತ್ತೀಚೆಗೆ ಸಿ.ಪಿ.ಯೋಗೇಶ್ಚರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದು ದೊಡ್ಡ ಅಚ್ಚರಿ ಮೂಡಿಸಿತು. ಚನ್ನಪಟ್ಟಣ ಉಪಸಮರದಲ್ಲಿ ಬಿಜೆಪಿ ಟಿಕೆಟ್ ಸಿಗದ ಕಾರಣ ಅನ್ಯ ಮಾರ್ಗವಿಲ್ಲದೆ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದು ರಾಜಕೀಯ ಪಡಸಾಲೆಯಲ್ಲಿ ಅಚ್ಚರಿ ಮೂಡಿಸಿತು.
ಕೆ.ಎಸ್.ಈಶ್ವರಪ್ಪ ಬಂಡಾಯ,ಉಚ್ಛಾಟನೆ:
ಕೆ.ಎಸ್.ಈಶ್ವರಪ್ಪ ಬಿಜೆಪಿ ಪಕ್ಷದ ಹಿರಿಯ ನಾಯಕ. ತಮ್ಮ ಮಗನಿಗೆ ಲೋಕಸಮರದಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯ ಬಾವುಟ ಹಾರಿಸಿದ್ದರು. ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಅಚ್ಚರಿಯ ಬೆಳವಣಿಗೆಯಾಗಿತ್ತು. ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಕಣಕ್ಕಿಳಿದ ಕೆ.ಎಸ್.ಈಶ್ವರಪ್ಪ ಚುನಾವಣೆಯಲ್ಲಿ ಹೀನಾಯ ಸೋಲು ಕಾಣಬೇಕಾಯಿತು. ಬಂಡಾಯದ ಬಾವುಟ ಹಾರಿಸಿದ ಕಾರಣ ಕೆ.ಎಸ್.ಈಶ್ವರಪ್ಪರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಯಿತು. ಆ ಮೂಲಕ ಬಿಜೆಪಿಯ ಕಟ್ಟಾಳುವಾಗಿದ್ದ ಕೆ.ಎಸ್.ಈಶ್ವರಪ್ಪರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಸದ್ದು ಮಾಡಿತು. ಯಡಿಯೂರಪ್ಪರ ಕುಟುಂಬ ರಾಜಕಾರಣದ ವಿರುದ್ಧ ಬಂಡಾಯ ಎದ್ದು ಪಕ್ಷೇತರರಾಗಿ ಸ್ಪರ್ಧಿಸಿರುವುದು ಬಹುತೇಕರ ಹುಬ್ಬೇರಿಸುವಂತೆ ಮಾಡಿತ್ತು.
ಬಣ ರಾಜಕೀಯದ ಮುಸುಕಿನ ಗುದ್ದಾಟ:
2024 ಬಣ ರಾಜಕೀಯದ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಯಿತು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಬಣ ರಾಜಕೀಯದ ಮೇಲಾಟ ಕಂಡು ಬಂತು. ಬಿಜೆಪಿಯಲ್ಲಿ ವಿಜಯೇಂದ್ರ ಟೀಂ ಹಾಗೂ ಯತ್ನಾಳ್ ಟೀಂ ಮಧ್ಯೆ ಬಹಿರಂಗ ಬಣ ಗುದ್ದಾಟವಾಯಿತು. ಕುಟುಂಬ ರಾಜಕಾರಣದ ವಿರುದ್ದ ಸೆಟೆದು ನಿಂತ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿ ನಿಂತರು. ಯತ್ನಾಳ್ ಬಂಡಾಯದ ಟೀಂಗೆ ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಹರೀಶ್, ಅರವಿಂದ ಲಿಂಬಾವಳಿ ಸೇರಿಕೊಂಡರು. ಇತ್ತ ಬಿ.ವೈ.ವಿಜಯೇಂದ್ರ ಪರ ಮಾಜಿ ಶಾಸಕ ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಬಿ.ಸಿ.ಪಾಟೀಲ್ ಸೇರಿದಂತೆ ಕೆಲ ಮುಖಂಡರು ಬೆನ್ನಿಗೆ ನಿಂತರು.
ಇನ್ನು ಕಾಂಗ್ರೆಸ್ ನಲ್ಲೂ ಬಣ ರಾಜಕೀಯದ ಮುಸುಕಿನ ಗುದ್ದಾಟ ಜೋರಾಗೇ ಸದ್ದು ಮಾಡಿತು. ನಾಯಕತ್ವ ಬದಲಾವಣೆಯ ಕೂಗಿನ ಮಧ್ಯೆ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಮುಸುಕಿನ ಗುದ್ದಾಟ ಆಗಾಗ್ಗೆ ಮುನ್ನೆಲೆಗೆ ಬರುತ್ತಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ ತಂಡ ಪ್ರತ್ಯೇಕ ಸಭೆಗಳನ್ನು ನಡೆಸಿ ಕಾಂಗ್ರೆಸ್ ಗುಂಪುಗಾರಿಕೆ ಸುದ್ದಿ ಮಾಡಿತು. ಡಿಸಿಎಂ ಡಿಕೆಶಿ ಬಣವೂ ಸೈಲೆಂಟಾಗಿ ಬಣ ರಾಜಕೀಯ ನಡೆಸಿತು. ಹೈ ಕಮಾಂಡ್ ತಪರಾಕಿ ಬಳಿಕ ಸದ್ಯ ಬಣಗಳು ಮೌನಕ್ಕೆ ಶರಣಾಗಿದೆ. ಇತ್ತ ಜೆಡಿಎಸ್ ಪಕ್ಷದಲ್ಲೂ ಬಣ ರಾಜಕೀಯ ಜೋರಾಗೇ ಸದ್ದು ಮಾಡಿತು. ಜಿ.ಟಿ.ದೇವೇಗೌಡರು ಬಹಿರಂಗವಾಗಿ ಪಕ್ಷದ ನಾಯಕತ್ವದ ಮೇಲೆ ತಮ್ಮ ಅಸಮಾಧಾನ ಹೊರಹಾಕಿದರು. ಪಕ್ಷದ ಪ್ರಮುಖ ತೀರ್ಮಾನಗಳಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಅತೃಪ್ತಿ ಹೊರಹಾಕಿದ್ದರು. ಮೂರೂ ಪಕ್ಷಗಳಲ್ಲೂ ಬಣ ರಾಜಕೀಯದ ಮುಸುಕಿನ ಗುದ್ದಾಟ ಮುನ್ನೆಲೆಗೆ ಬರುತ್ತಿದೆ.
ಉಪಸಮರದ ಅಚ್ಚರಿ ಫಲಿತಾಂಶ:
ಇನ್ನು ಮೊನ್ನೆ ನಡೆದ ರಾಜ್ಯ ಮೂರು ಕ್ಷೇತ್ರಗಳ ಉಪಸಮರದಲ್ಲಿನ ಅಚ್ಚರಿ ಫಲಿತಾಂಶ ಆಡಳಿತಾರೂಢ ಕಾಂಗ್ರೆಸ್ ಗೆ ಆತ್ಮಸ್ತೈರ್ಯ ನೀಡಿದೆ. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಮೂರು ಕ್ಷೇತ್ರಗಳನ್ನು ಕೈ ವಶ ಮಾಡಿ ಕಾಂಗ್ರೆಸ್ ಗೆದ್ದು ಬೀಗಿದೆ. ಇತ್ತ ಮೈತ್ರಿ ಬಿಜೆಪಿ-ಜೆಡಿಎಸ್ ಸೋಲುವ ಮೂಲಕ ಮುಖಭಂಗ ಅನುಭವಿಸಿತು. ವಿಶೇಷವಾಗಿ ಕದನಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ಉಪಸಮರದಲ್ಲಿ ಕೊನೆ ಕ್ಷಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡು ಸಿ.ಪಿ.ಯೋಗೇಶ್ವರ್ ಗೆಲುವಿನ ನಗೆ ಬೀರಿದರು. ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದರು.
ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆಶಿಯ ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ತಂತ್ರಗಾರಿಕೆ ಫಲ ನೀಡಿತು. ಸಿ.ಪಿ.ಯೋಗೇಶ್ವರ್ ರನ್ನು ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಸೆಳೆದು ಟಿಕೆಟ್ ನೀಡಿ ಚನ್ನಪಟ್ಟಣವನ್ನು ಕೈ ವಶ ಮಾಡಿಸುವಲ್ಲಿ ಯಶಕಂಡರು. ಇತ್ತ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅಖಾಡ ಶಿಗ್ಗಾಂವಿ ಉಪಸಮರದಲ್ಲಿ ಅವರ ಪುತ್ರ ಭರತ್ ಬೊಮ್ಮಾಯಿರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಅಚ್ಚರಿ ಮೂಡಿಸಿತು. ಸಂಡೂರಲ್ಲೂ ಸಂಸದ ತುಕಾರಾಂ ಪತ್ನಿ ಗೆಲುವು ಸಾಧಿಸುವ ಮೂಲಕ ಮೂರು ಕ್ಷೇತ್ರಗಳ ಉಪಸಮರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿತು. ಉಪಸಮರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ತಂತ್ರಗಾರಿಕೆ ಮೈತ್ರಿಗೆ ಅನಿರೀಕ್ಷಿತ ಸೋಲಿನ ಕಹಿ ನೀಡಿತು.




