ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ: ಭ್ರಷ್ಟಾಚಾರ ಕಡಿಮೆಯಾಗಿದೆ ನಿಂತಿಲ್ಲ : ಬಿಜೆಪಿ ಶಾಸಕ ಯತ್ನಾಳ್ ಆರೋಪ

ಬೆಳಗಾವಿ : ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಂದಾಗಿದೆ, ಇನ್ನು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಆರಂಭವಾಗಲಿದೆ. ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆಯಾಗಲಿದೆ ಆದರೆ, ಸಿಎಂ ಬದಲಾವಣೆ ಬಗ್ಗೆ ಮಾಹಿತಿಯಿಲ್ಲ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿ ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಮಕ್ಕಳು, ಮರಿ ಮಕ್ಕಳ ಪಾರ್ಟಿ ಆಗಿಬಿಟ್ರೆ ಬೇರೆಯವರು ಏನು ಮಾಡಬೇಕು, ವಂಶ ಪಾರಂಪರ್ಯ ರಾಜಕೀಯ ಬಿಜೆಪಿಯಲ್ಲಿ ನಡೆಯಲ್ಲ ಎಂದು ಹೇಳಿದ ಅವರು, ಕುಟುಂಬದವರೆಲ್ಲಾ ಎಂಎಲ್ ಎ, ಎಂಪಿ ಆದ್ರೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಫ್ಯಾಮಿಲಿ ಪಾರ್ಟಿ ರೀತಿ ಆಗುತ್ತದೆ ಎಂದು ಲೇವಡಿ ಮಾಡಿದರು.
ಇನ್ನು ಸಿಎಂ ಬದಲಾವಣೆ ಮಾಡಲಾಗುತ್ತೆ ಎನ್ನುವುದು ಕಾಂಗ್ರೆಸ್ ಹರಡಿಸಿರೋ ಸುದ್ದಿ, ಬೊಮ್ಮಾಯಿ ಸಿಎಂ ಆಗಿ ಇನ್ನೂ ೧೦೦ ದಿನ ಆಗಿದೆ, ಮುಂಬರುವ ದಿನಗಳಲ್ಲಿ ಅವರ ಮೇಲೆ ತೃಪ್ತಿ ಇದೆಯಾ ಅತೃಪ್ತಿ ಆಗಿದೆಯಾ ಅನ್ನೋದು ಬಹಿರಂಗಗೊಳ್ಳಲಿದೆ ಎಂದು ಹೇಳಿದರು. ಕೇವಲ ನಾಲ್ಕು ಸಚಿವ ಸ್ಥಾನ ಬದಲಾವಣೆಯಲ್ಲ, ನಿಷ್ಕ್ರೀಯ ಸಚಿವರನ್ನೆಲ್ಲಾ ಬದಲಾವಣೆ ಮಾಡಬೇಕು ಎಂದು ಯತ್ನಾಳ್ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಭ್ರಷ್ಟಾಚಾರ ಇನ್ನೂ ನಿಂತಿಲ್ಲ ಯತ್ನಾಳ್
ರಾಜ್ಯದಲ್ಲಿ ಸೂಪರ್ ಸಿಎಂ ಇದ್ದಾಗ ಭ್ರಷ್ಟಾಚಾರ ನಡೆಯುತ್ತಿತ್ತು, ಈಗ ಎಲ್ಲಾ ಕಡಿಮೆ ಆಗ್ತಿದೆ ಎಂದು ತಿಳಿಸಿದ ಯತ್ನಾಳ್, ಸಂಪೂರ್ಣವಾಗಿ ನಿಂತಿದೆ ಎಂದು ಹೇಳಲ್ಲ, ಪ್ರಮಾಣ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟರು. 40% ಕಮಿಷನ್ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಕಂಟ್ರಾಕ್ಟ್ಸ್ ಪಿಎಂಗೆ ಪತ್ರ ಬರೆದಾಗ ಯಾರು ಸಿಎಂ ಆಗಿದ್ರು, ಈಗ ಯಾರಾದ್ರೂ ಪತ್ರ ಬರೆದಿದ್ದಾರಾ ಎಂದು ಮರುಪ್ರಶ್ನಿಸಿದರು


ಸಿಎಂ ಬೊಮ್ಮಾಯಿ ಆಡಳಿತದಲ್ಲಿ ಶಾಸಕರು ತೃಪ್ತಿಯಿಂದ ಇದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತೃಪ್ತಿ ಅತೃಪ್ತಿ ಇನ್ನು ಮುಂದೆ ಗೊತ್ತಾಗುತ್ತದೆ, ಭ್ರಷ್ಟಾಚಾರದ ಜನಕ ಹೋಗಿದ್ದಾರೆ, ಇವಾಗ ಭ್ರಷ್ಟಾಚಾರ ಕಡಿಮೆ ಆಗುತ್ತಿದೆ, ಸೂಪರ್ ಸಿಎಂ ಇದ್ದಾಗ ಇದ್ದ ಪ್ರಮಾಣ ಈಗಿಲ್ಲ ಎಂದರು.

More News