ಯಾರಿಗೆ ಎಷ್ಟು ಧಮ್ ಇದೆ ತಿಳಿದಿದೆ: CM ಸ್ಥಾನವನ್ನೇ ಉಳಿಸಲು ಸಾಧ್ಯವಾಗದವರು ಧಮ್ ಬಗ್ಗೆ ಮಾತು: ಸಿಎಂ ವ್ಯಂಗ್ಯ

ಬೆಳಗಾವಿ: ಯಾರಿಗೆ ಎಷ್ಟು ಧಮ್ ಎನ್ನುವುದು ತಿಳಿದಿದೆ, ಮುಖ್ಯಮಂತ್ರಿಯಾದವರು ತಮ್ಮ ಕ್ಷೇತ್ರವನ್ನೇ ಉಳಿಸಿಕೊಳ್ಳಲು ಸಾಧ್ಯವಾಗದ ಅವರು ಧಮ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಕಾಶಿಯಿಂದ ನೇರವಾಗಿ ಬೆಳಗಾವಿಗೆ ಆಗಮಿಸಿದ ಅವರು, ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆಲ ಮಾತಾಡಿದ ಅವರು, ಮುಖ್ಯಮಂತ್ರಿಯಾದವರು ಇಂತಹ ಮಾತುಗಳನ್ನು ಆಡುವುದು ಸರಿಯಲ್ಲ ಎಂದರು. ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸಿದ್ದರಾಮಯ್ಯ ಅವರು ಬಿಜೆಪಿಗೆ ಓಪನ್ ಚಾಲೆಂಜ್ ಮಾಡಿದ್ದರು.


ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿ ತಮ್ಮ ಸಹೋದರನ ಗೆಲುವಿಗೆ ಕಾರಣರಾದ ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮಕೈಗೊಳ್ಳಲು ಧಮ್ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಅವರು ಖಾರವಾಗಿಯೇ ಉತ್ತರಿಸಿದ್ದಾರೆ.

ಯಾರ ವಿರುದ್ಧವೂ ಯಾವುದೇ ಅವಸರದ ಕ್ರಮ ಇಲ್ಲ, ಬೆಳಗಾವಿ, ಮೈಸೂರು ವಿಚಾರವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುವುದು, ಎಲ್ಲವನ್ನೂ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು, ಎಲ್ಲಾ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪರಿಷತ್ ಉತ್ತಮ ಫಲಿತಾಂಶ ಎಂದ ಸಿಎಂ
ರಾಜ್ಯದ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಹದಿಮೂರರಿಂದ ಹದಿನೈದು ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು ಆದರೆ, ಎರಡು ಕಡೆ ಅಲ್ಪ ಮತಗಳ ಹಿನ್ನಡೆ ಆಗಿದೆ ಎಂದು ಹೇಳಿದ ಮುಖ್ಯಮಂತ್ರಿ, ಒಳ್ಳೆಯ ಫಲಿತಾಂಶ ಬಂದಿದೆ ಎಂದರು.

ಕಳೆದ ಬಾರಿ ಆರು ಸ್ಥಾನಗಳಿತ್ತು, ಈಗ ಐದು ಸ್ಥಾನಗಳು ಹೆಚ್ಚಾಗಿದೆ. ಇದು ನಮ್ಮ ಪಕ್ಷದ ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ ಎಂದರು.

ಮೈಸೂರು ಬಿಜೆಪಿ ಅಭ್ಯರ್ಥಿ ಸೋಲಾಗಿದ್ದು, ಆ ಸ್ಥಾನಕ್ಕೆ ಮರು ಮತ ಎಣಿಕೆಗೆ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ವಾರಣಾಸಿಯಲ್ಲಿ ಕಾಶಿ ದರ್ಶನ ಪಡೆದ ಮುಖ್ಯಮಂತ್ರಿ ಹಾಗೂ ಅವರ ಪತ್ನಿ ಚೆನ್ನಮ್ಮಾ
ವಾರಣಾಸಿಯಲ್ಲಿ ಕೇಂದ್ರ ಸರ್ಕಾರ ಯೋಜನೆ ಬೇರೆ ಬೇರೆ ರಾಜ್ಯದಲ್ಲಿ ಯಾವ ರೀತಿ ಅನುಷ್ಠಾನ ಆಗಿದೆ ಎನ್ನುವುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚರ್ಚೆ ನಡೆದಿದೆ, ಹಾಗೂ ನೂತನ ಯೋಜನೆಗಳ ಬಗ್ಗೆಯೂ ಚಿಂತನ ಮಂತನ ನಡೆದಿದೆ ಎಂದುಹೇಳಿದರು.


ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮುಂಜಾನೆ ಪತ್ನಿ ಚನ್ನಮ್ಮ ಅವರ ಜೊತೆ ಕಾಶಿ ವಿಶ್ವನಾಥನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

More News