ನವದೆಹಲಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಆಗಿಲ್ಲ. ನಮ್ಮ ಪಕ್ಷ ವಿರೋಚಿತ ಸೋಲು ಕಂಡಿದೆ ನಿಜ, ಆದರೆ, ರಾಜ್ಯದಲ್ಲಿನ ಎರಡು ರಾಷ್ಟ್ರೀಯ ಪಕ್ಷಗಳ ಅಪವಿತ್ರ ಮೈತ್ರಿ, ಒಳಸಂಚು ಏನೆಂಬುದು ಬಟಾ ಬಯಲಾಗಿದೆ. ಎರಡೂ ಪಕ್ಷಗಳ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ, ಕೋಲಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಸ್ಥಳೀಯ ಮಟ್ಟದಲ್ಲಿ ಒಳ ಒಪ್ಪಂದ ಏರ್ಪಟ್ಟಿತ್ತು. ಅದಕ್ಕೆ ಕಾಂಗ್ರೆಸ್ ಪಕ್ಷದ ಸಿದ್ದಹಸ್ತರೇ ಕಾರಣ ಎಂದು ದೂರಿದರು.
ಜೆಡಿಎಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಪದೇಪದೆ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡುತ್ತಿದ್ದುದೇ ನಮಗೆ ಮಂಡ್ಯ ಮತ್ತು ಕೋಲಾರದಲ್ಲಿ ಹಿನ್ನಡೆಯಾಗಲು ಕಾರಣ. ಇಂಥ ಅಪಪ್ರಚಾರವನ್ನು ನಿರಂತರವಾಗಿ ಕಾಂಗ್ರೆಸ್ ನಾಯಕರು ನಡೆಸಿದರು.
ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳೆರಡಕ್ಕೂ ಇರುವ ಗುರಿ ಒಂದೇ. ಮುಂದಿನ ಸಾರ್ವತ್ರಿಕ ಚುನಾವಣೆ ಒಳಗೆ ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವುದು. ರಾಜಕೀಯದಿಂದ ನಮ್ಮನ್ನು ಮರೆ ಮಾಡಬೇಕು ಎನ್ನುವುದು ಅವುಗಳ ದುರಾಲೋಚನೆ ಹಾಗೂ ನಮ್ಮ ಪಕ್ಷವನ್ನು ನಾಶ ಮಾಡುವುದೇ ಅವರ ಆದ್ಯತೆಯಾಗಿದೆ ಎಂದು ಕಿಡಿಕಾರಿದರು.
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಮತ
ಮಂಡ್ಯದಲ್ಲಿ ಕೊನೆಯ ಎರಡು ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಒಳ ಒಪ್ಪಂದದಿಂದ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಅಲ್ಲದೆ, ಬಿಜೆಪಿ ಅಭ್ಯರ್ಥಿ ಬಹಿರಂಗವಾಗಿ ಕಣ್ಣೀರು ಹಾಕಿದ್ದೇ ಎರಡೂ ಪಕ್ಷಗಳ ಸ್ಥಳೀಯ ನಾಯಕರ ಕುತಂತ್ರ ರಾಜಕಾರಣಕ್ಕೆ ಹಿಡಿದ ಕನ್ನಡಿ. ಇಲ್ಲಿ ಕಾಂಗ್ರೆಸ್-ಬಿಜೆಪಿ ಸೇರಿ ಜೆಡಿಎಸ್ ಪಕ್ಷಕ್ಕೆ ಮುಖಭಂಗ ಮಾಡಬೇಕು ಎಂದು ಷಡ್ಯಂತ್ರ ಹೂಡಿದ್ದು ಯಾರಿಗಾದರೂ ಅರ್ಥವಾಗುತ್ತದೆ ಎಂದರು.
ಮಂಡ್ಯದಲ್ಲಿ ನಮಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದಿಂದ ಮುಖಭಂಗ ಆಗಿಲ್ಲ. ನಮ್ಮ ಮತದಾರರು ನಮ್ಮ ಅಭ್ಯರ್ಥಿಗೇ ಮತ ಕೊಟ್ಟಿದ್ದಾರೆ. ಅಲ್ಲೇನು ಬದಲಾವಣೆಗಳೇನಾಗಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಮತಗಳನ್ನು ಪಡೆಯುವ ಮೂಲಕ ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಪುನರಾವರ್ತನೆ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕೋಲಾರದಲ್ಲಿ ಬಿಜೆಪಿ-ಕಾಂಗ್ರೆಸ್ ಒಳಸಂಚು
ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಸಮಾಧಾನಿತ ಮತಗಳು ಜೆಡಿಎಸ್ʼಗೆ ಹೋಗಬಾರದು ಎಂದು ಸಂಚು ರೂಪಿಸಿ ಅಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮಾಡಿಕೊಂಡ ಒಳ ಒಪ್ಪಂದದಿಂದ ನಮ್ಮ ಅಭ್ಯರ್ಥಿಗೆ ಸೋಲಾಗಿದೆ. ಕಾಂಗ್ರೆಸ್ ಪಕ್ಷದ ʼಸಿದ್ದಹಸ್ತʼರ ಕೈಚಳಕ ಕೋಲಾರದಲ್ಲೂ ಕೆಲಸ ಮಾಡಿದೆ. ಆ ಹೆಸರನ್ನು ನಾನು ಪದೇಪದೆ ಹೇಳುತ್ತೇನೆ. ತಮ್ಮ ʼಸಿದ್ದಹಸ್ತʼದ ಕಲೆಯ ಮೂಲಕ ಮೈತ್ರಿ ಸರಕಾರ ಕೆಡವಿದ ವ್ಯಕ್ತಿ ಆಗ ಬಿಜೆಪಿ ಜತೆ ಒಳಸಂಚು ಮಾಡಿಕೊಂಡು ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲು ಕಾರಣರಾಗಿದ್ದರು ಎಂದು ಸಿದ್ದರಾಮಯ್ಯ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.

ರಾಷ್ಟ್ರೀಯ ಪಕ್ಷಗಳ ಬಣ್ಣ ಬಯಲಾಗಿದೆ
ಜೆಡಿಎಸ್ ಪಕ್ಷಕ್ಕೆ ಮುಖಭಂಗ ಮಾಡಿದ್ದೇವೆ ಎಂದು ಅವರು ಹೇಳಿಕೊಳ್ಳಬಹುದು. ಆದರೆ ಈ ಆರೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷಕ್ಕೆ ಬರಬೇಕಾದ ಮತಗಳು ಎಲ್ಲೂ ತಪ್ಪಿಲ್ಲ. ಇಷ್ಟೂ ಕ್ಷೇತ್ರಗಳಲ್ಲೂ ನಮ್ಮ ನೈಜ ಮತದಾರರು ನಮಗೇ ಮತ ನೀಡಿದ್ದಾರೆ. ಆದರೆ, ಬಿಜೆಪಿ-ಕಾಂಗ್ರೆಸ್ ಒಳ ಒಪ್ಪಂದದಿಂದ ನಮಗೆ ಹಿನ್ನಡೆಯಾಗಿದೆ ಎಂದರು.
ನಮ್ಮದು ಜೆಡಿಎಫ್, ಕಾಂಗ್ರೆಸ್ ಪಕ್ಷದ್ದು ಯಾವ ಎಫ್?
ವಿರೋಧ ಪಕ್ಷದ ನಾಯಕರು ಜೆಡಿಎಸ್ ಪಕ್ಷವನ್ನು ಜೆಡಿಎಫ್ ಎಂದು ಕರೆಯುತ್ತಿದ್ದಾರಲ್ಲ, ಅದಕ್ಕೆ ಇಂಬು ನೀಡುವಂತಿದೆ ಇಂದಿನ ಫಲಿತಾಂಶ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ಪಕ್ಷದ ಶಕ್ತಿ ಅಡಗಿರುವುದೇ ದೇವೇಗೌಡರ ಕುಟುಂಬದಲ್ಲಿ ಎಂಬುದನ್ನು ಈ ಫಲಿತಾಂಶ ಸಾಭೀತು ಮಾಡಿದೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ನಮ್ಮ ಕುಟುಂಬ ಈ ಪಕ್ಷವನ್ನು ಉಳಿಸಿಕೊಳ್ಳಲಿಕ್ಕೆ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಇದೇ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಹಾಸನದಲ್ಲಿ ಬಿಜೆಪಿ-ಕಾಂಗ್ರೆಸ್ ಒಳ ಸಂಚು ನಡೆದಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ದಹಸ್ತರು ಪದೇ ಪದೇ ಹೇಳುತ್ತಿದ್ದಾರಲ್ಲ, ಜೆಡಿಎಫ್ ಎಂದು. ಅವರ ಪಕ್ಷದಲ್ಲಿ ಕುಟುಂಬ ರಾಜಕಾರಣ ಮೀರಿ ಎಷ್ಟು ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದ್ದಾರೆ ಎನ್ನುವುದು ಗೊತ್ತಾ? ಕುಟುಂಬ ರಾಜಕಾರಣದ ಹಿನ್ನೆಲೆಯುಳ್ಳ ಎಂಟು ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಅದೇ ರೀತಿ ಬಿಜೆಪಿ ಅಂಥ ಎಷ್ಟು ಜನರಿಗೆ ಟಿಕೆಟ್ ನೀಡಿದೆ ಎನ್ನುವುದು ಗೊತ್ತಿದೆ. ಇದು ಯಾವುದೇ ಪಕ್ಷಕ್ಕೆ ಸೀಮಿತವಾದ ವಿಚಾರವಲ್ಲ. ಎಲ್ಲ ಪಕ್ಷಗಳಲ್ಲೂ ಇದೆ. ಹೀಗಾಗಿ ಜೆಡಿಎಸ್ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗಿಲ್ಲ. ನಮ್ಮದು ಜೆಡಿಎಫ್ ಆದರೆ ಕಾಂಗ್ರೆಸ್ ಪಕ್ಷದ್ದು ಯಾವ ʼಎಫ್ʼ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.




