ಮಧ್ಯಂತರ ವರದಿ ಸಲ್ಲಿಸಿದ ಬಳಿಕ ಒಳ ಮೀಸಲಾತಿ ಜಾರಿಗೆ ಕ್ರಮ

ಬೆಂಗಳೂರು, (ಮಾರ್ಚ್ 24):- ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಒಂದು ವಾರದೊಳಗೆ ಒಳ ಮೀಸಲಾತಿಯ ಮಧ್ಯಂತರ ವರದಿ ಸಲ್ಲಿಸುವುದಾಗಿ ತಿಳಿಸಿದ್ದು, ತದನಂತರ ಮುಖ್ಯಮಂತ್ರಿಯವರು ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ನಡೆದ ಸಭೆ ಬಳಿಕ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಹೇಳಿದ್ದೇವೆ. ಎಂಪೆರಿಕಲ್ ಡೇಟಾ ನಿರ್ಧಿಷ್ಟವಾದ ಅಭಿಪ್ರಾಯ ಬರುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಭೆಯಲ್ಲಿ ತಿಳಿಸಿದ್ದಾರೆ ಎಂದರು.

ಸಚಿವರುಗಳ ಮತ್ತು ಶಾಸಕರ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ಬಂದರೆ ಪರಿಶೀಲಿಸಿ, ಕದ್ದಾಲಿಕೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನಾನು ಅಥವಾ ಸಿಎಂ ಆಗಲಿ ಯಾರು ಸಹ ಫೋನ್ ಕದ್ದಾಲಿಕೆಗೆ ಅನುಮತಿ ನೀಡಿಲ್ಲ ಎಂದು ಹೇಳಿದರು.

ನಾನು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಗಮನಿಸಿದಿಲ್ಲ. ಅವರು ಯಾವ ಅರ್ಥದಲ್ಲಿ‌ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ನಮ್ಮ ಪಕ್ಷ ಹಾಗೂ ಮತ್ತು ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿದೆ. ಈ ಆಶಯದೊಂದಿಗೆ ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶವನ್ನು ಮಾಡಿದ್ದೇವೆ. ಸಂವಿಧಾನದ ಆಶಯ ಅನುಷ್ಟಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ.ಮಹದೆವಪ್ಪ ಅವರು ಮಾತನಾಡಿ, ಒಳ ಮೀಸಲಾತಿ ಸಂಬಂಧ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಹಿರಿಯ ಸಚಿವರ ಜೊತೆ ಸುಧೀರ್ಘ ಸಭೆ ನಡೆಸಲಾಗಿದೆ. ಒಳ‌ಮೀಸಲಾತಿ ಜಾರಿಗಾಗಿ ಈವರೆಗೂ ಆಗಿರುವ ಪ್ರಗತಿಯ ಮಾಹಿತಿಯನ್ನು ನಾಗ ಮೋಹನ್ ದಾಸ್ ಸಮಿತಿ ನೀಡಿದೆ. ಆದಷ್ಟು ಬೇಗ ಒಳಮೀಸಲಾತಿ ಜಾರಿಗೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ತಿಳಿಸಿದರು.

ದತ್ತಾಂಶ ಆಧಾರದ ಮೇಲೆ ಸುದೀರ್ಘ ಚರ್ಚೆ ಮಾಡಿದ್ದೇವೆ ನಾಗಮೋಹನ್ ದಾಸ್ ಅವರು ವಾರದೊಳಗೆ ಮಧ್ಯಂತರ ವರದಿ ನೀಡುತ್ತಾರೆ. ಆ ವರದಿ ಮೇಲೆ ಒಳಮೀಸಲಾತಿ ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಎಂಪೆರಿಕಲ್ ಡೇಟಾ‌ಸೇರಿದಂತೆ ಎಲ್ಲ ವಿಷಯಗಳನ್ನ ಚರ್ಚೆ ಮಾಡಿ, ನಮ್ಮ ಗಮನಕ್ಕೆ ತಂದಿದ್ದಾರೆ.‌ ನಾವು ಒಳ ಮೀಸಲಾತಿ ಜಾರಿ ಮಾಡಬೇಕು ಎಂಬುದು ನಮ್ಮ ಸರ್ಕಾರದ ಬದ್ಧತೆ. ಯಾವುದೇ ಸಮುದಾಯವೂ ಇಷ್ಟೇ ಪರ್ಸೇಂಟ್ ಮೀಸಲಾತಿ ಕೊಡುವಂತೆ ಬೇಡಿಕೆ ಇಟ್ಟಿಲ್ಲ. ಬಹುತೇಕ ಎಲ್ಲಾ ಇಲಾಖೆಗಳು ದತ್ತಾಂಶ ನೀಡಿವೆ. ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಒಳ ಮೀಸಲಾತಿ ಜಾರಿ ಆಗುವವರೆಗೂ ಬ್ಯಾಕ್‌ಲಾಗ್ ಹುದ್ದೆ, ಮುಂಬಡ್ತಿ, ನೇಮಕಾತಿ ಯಾವುದನ್ನೂ ಮಾಡುವುದಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಶಿವರಾಜ್ ತಂಗಡಗಿ ಅವರು ಇದ್ದರು.

More News

You cannot copy content of this page