ಬೆಂಗಳೂರು : ಕಳೆದ ವಾರ ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದು ಬೆಂಗಳೂರಿನ ಸೇನಾ ಕಮಾಂಡ್ ಆಸ್ಪತ್ರೆಯಲ್ಲಿ ಸಾವು ಬದುಕಿನೊಡನೆ ಹೋರಾಟ ನಡೆಸುತ್ತಿದ್ದ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಕಳೆದ ಒಂದು ವಾರದಿಂದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ವರುಣ್ ಸಿಂಗ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅಪಘಾತದಲ್ಲಿ ವರುಣ್ ಸಿಂಗ್ ಶೇಕಡಾ 45 ರಷ್ಟು ಸುಟ್ಟಗಾಯಗೊಂಡಿದ್ದರು.

ತಮಿಳುನಾಡಿನ ವೆಲ್ಲಿಂಗ್ ಟನ್ ಆಸ್ಪತ್ರೆಯಲ್ಲಿ ಅವರು ಮೊದಲಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತಂದು ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕುನೂರುನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿದಂತೆ ಒಟ್ಟು 13ಮಂದಿ ಮೃತಪಟ್ಟಿದ್ದರು. ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಒಬ್ಬರೇ ಈ ಘಟನೆಯಲ್ಲಿ ಬದುಕುಳಿದಿದ್ದರು.




