‘ಬಸವ ಭಾರತ’ವಾದರೆ ಸಂವಿಧಾನದ ಆಶಯ ಈಡೇರಿಕೆ: ಎಂ.ಬಿ.ಪಾಟೀಲ

ಬೆಂಗಳೂರು: ನಮ್ಮ ಸಂವಿಧಾನದಲ್ಲಿ ಅಡಕಗೊಂಡಿರುವ ಆಶಯಗಳೆಲ್ಲವೂ ಬಸವ ತತ್ವಗಳಲ್ಲಿ ಪ್ರತಿಪಾದಿತವಾಗಿವೆ ಎಂದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು, ನಮ್ಮ ದೇಶವನ್ನು ‘ಬಸವ ಭಾರತ’ವನ್ನಾಗಿಸುವ ದಿಸೆಯಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಭಾನುವಾರ ನುಡಿದರು.

ರಾಜಾಜಿನಗರದಲ್ಲಿರುವ ಬಸವ ಮಂಟಪದ ಸುವರ್ಣ ಮಹೋತ್ಸವ ಹಾಗೂ 830ನೇ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಸಂವಿಧಾನ ಮತ್ತು ಬಸವ ತತ್ವಗಳು ಬೇರೆ ಬೇರೆ ಅಲ್ಲ. ಅವೆರಡೂ ಒಂದೇ. 12ನೇ ಶತಮಾನದಲ್ಲಿ ಜಗತ್ತಿನಲ್ಲೇ ಮೊತ್ತಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆಯನ್ನು ‘ಅನುಭವ ಮಂಟಪ’ದ ಮೂಲಕ ನೀಡಿದ ಹಿರಿಮೆಯು ಬಸವಾದಿ ಪ್ರಥಮರಿಗೆ ಸಲ್ಲುತ್ತದೆ. ಒಂದೊಮ್ಮೆ ಕಲ್ಯಾಣ ಕ್ರಾಂತಿಯು ಸಂಭವಿಸದೇ ಹೋಗಿದ್ದರೆ ಇಂದು ಜಗತ್ತು ಪ್ರಾಯಶಃ ‘ಬಸವ ವಿಶ್ವ’ವಾಗಿರುತ್ತಿತ್ತು ಎಂದು ಅವರು ವಿವರಿಸಿದರು.

ಇಲ್ಲಿ ಬಸವ ಮಂಟಪವು 50 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದರ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದ ಪಾಟೀಲ ಅವರು, ಮಾತೆ ಮಹಾದೇವಿ ಅವರ ದೃಢ ಸಂಕಲ್ಪದಿಂದಾಗಿ ಸಾಕಾರಗೊಂಡ ಈ ಕೇಂದ್ರವು ಐದು ದಶಕಗಳಿಂದ ಬಸವ ಶರಣರ ತತ್ವ ಪ್ರಚಾರದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಾ ಅಪಾರ ಸೇವೆ ಸಲ್ಲಿಸಿದೆ ಎಂದರು.

ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಬಸವ ಧರ್ಮ ಪೀಠಾಧ್ಯಕ್ಷರಾದ ಡಾ.ಮಾತೆ ಗಂಗಾದೇವಿ, ಶ್ರೀ ನಿಜಗುಣಾನಂದ ಸ್ವಾಮೀಜಿ, ಶ್ರೀ ದಯಾನಂದ ಸ್ವಾಮೀಜಿ, ಶ್ರೀ ಶಿವಾನಂದ ಗುರೂಜಿ, ಶ್ರೀ ಸದ್ಗುರು ಬಸವಯೋಗಿ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ, ನಾಡೋಜ ಗೊ.ರು.ಚನ್ನಬಸಪ್ಪ ಮತ್ತಿತರರು ಪಾಲ್ಗೊಂಡಿದ್ದರು.

More News