ಜಿಪಂ,ತಾಪಂ,ಪಾಲಿಕೆ ಎಲೆಕ್ಷೆನ್ ಗೆ ಮತಪತ್ರ : ಕರಡು ಮಸೂದೆ ಸಿದ್ಧ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಯಂತ್ರದ ಬದಲು ಹಳೆಯ ಬ್ಯಾಲೆಟ್ ಪೇಪರ್ ತರಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಾಲ್ಕು ಪ್ರತ್ಯೇಕ ಕರಡು ಮಸೂದೆಗಳನ್ನು ರೂಪಿಸಿದ್ದು, ಗುರುವಾರ ನಡೆಯಲಿರುವ ಸಂಪುಟ ಸಭೆಯ ಮುಂದಿಡುವ ಸಾಧ್ಯತೆ ಇದೆ.

ರಾಜ್ಯ ಕಾಂಗ್ರೆಸ್ ಸರ್ಕಾರಸಚಿವರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ತರಲು ತೀರ್ಮಾನಿಸಿದೆ. ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಾ ಬರುತ್ತಿರುವ ಕಾಂಗ್ರೆಸ್ ಪಕ್ಷ ಇದೀಗ ದೇಶಾದ್ಯಂತ ಮತಗಳ್ಳತನ ಆರೋಪಿಸಿ ಹೋರಾಟ ಮಾಡುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಇವಿಎಂ ಬದಲು ಹಳೆಯ ಬ್ಯಾಲೆಟ್ ಪೇಪರ್ ಬಳಕೆ ಮಾಡಲು ನಿಯಮ ತಿದ್ದುಪಡಿಗೆ ತೀರ್ಮಾನಿಸಿದೆ. ಅದರ ಜೊತೆಗೆ ರಾಜ್ಯ ಚುವಾವಣಾ ಆಯೋಗದಿಂದ ಸ್ಥಳೀಯ ಸಂಸ್ಥೆಗಳಾದ ಪುರಸಭೆ, ಪಾಲಿಕೆಗಳು, ಗ್ರಾಮ ಪಂಚಾಯತ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಐದು ನಗರ ಪಾಲಿಕೆಗಳಲ್ಲಿ ಮತಪರಿಷ್ಕರಣೆ ಮಾಡಿಸಲು ತೀರ್ಮಾನಿಸಲಾಗಿದೆ.

ಇದೀಗ ರಾಜ್ಯ ಸರ್ಕಾರ ಬ್ಯಾಲೆಟ್ ಪೇಪರ್ ಬಳಕೆಗಾಗಿ ನಿಯಮ‌ ತಿದ್ದುಪಡಿ ಮಾಡಲು ನಾಲ್ಕು ಪ್ರತ್ಯೇಕ ಕರಡು ಮಸೂದೆಗಳನ್ನು ರೂಪಿಸಿದೆ. ಕರಡು ಮಸೂದೆಗಳ ಮೂಲಕ ಗ್ರಾಮ ಪಂಚಾಯತಿ, ಮಹಾನಗರ ಪಾಲಿಕೆಗಳು, ಪುರಸಭೆ ಹಾಗೂ ಜಿಬಿಎ ವ್ಯಾಪ್ತಿಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಲು ನಿಯಮ ತಿದ್ದುಪಡಿ ಮಾಡುತ್ತಿದೆ. ಮುಂಬರುವ ಗುರುವಾರ ನಡೆಯಲಿರುವ ಸಂಪುಟ ಸಭೆ ಮುಂದೆ ಈ ಪ್ರತ್ಯೇಕ ನಾಲ್ಕು ಕರಡು ಮಸೂದೆಗಳನ್ನು ಇಟ್ಟು ಅನುಮೋದನೆ ಪಡೆಯುಲು ಮುಂದಾಗಿದೆ.

ನಾಲ್ಕು ಪ್ರತ್ಯೇಕ ಕರಡು ಮಸೂದೆ ಸಿದ್ಧ:

ಗ್ರಾಮ ಪಂಚಾಯತಿ, ಪುರಸಭೆ, ಮಹಾನಗರ ಪಾಲಿಕೆಗಳು ಮತ್ತು ಜಿಬಿಎಯಲ್ಲಿ ಬ್ಯಾಲೆಟ್ ಪೇಪರ್ ಬಳಸುವ ನಿಟ್ಟಿನಲ್ಲಿ ಅಗತ್ಯ ನಿಯಮ ಬದಲಾವಣೆ ತರಲು ರಾಜ್ಯ ಸರ್ಕಾರ ನಾಲ್ಕು ಪ್ರತ್ಯೇಕ ಕರಡು ಮಸೂದೆಯನ್ನು ಸಿದ್ಧಪಡಿಸಿದೆ. ಅದರಂತೆ ಜಿಬಿಎ ವ್ಯಾಪ್ತಿಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಅನುವು ಮಾಡಿಕೊಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎರಡನೇ ತಿದ್ದುಪಡಿ ಮಸೂದೆ 2025, ಪುರಸಭೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಪೂರಕವಾಗಿ ಕರ್ನಾಟಕ ಪುರಸಭೆಗಳ (ತಿದ್ದುಪಡಿ) ಮಸೂದೆ 2025, ಮಹಾನಗರ ಪಾಲಿಕೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಅನುವು ಮಾಡಿಕೊಡಲು ಕರ್ನಾಟಕ ಮಹಾನಗರ ಪಾಲಿಕೆಗಳು (ಎರಡನೇ ತಿದ್ದುಪಡಿ) ಮಸೂದೆ 2025 ಮತ್ತು ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುವಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2025 ಕರಡನ್ನು ರೂಪಿಸಿದೆ.

ಈ ನಾಲ್ಕು ಪ್ರತ್ಯೇಕ ತಿದ್ದುಪಡಿ ಮಸೂದೆ ಮೂಲಕ ನಾಲ್ಕು ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ಬಳಸಲು ಅನುವಾಗುವಂತೆ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಬೆಂಗಳೂರು ಐದು ನಗರ ಪಾಲಿಕೆಗೆಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಪೂರಕವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎರಡನೇ ತಿದ್ದುಪಡಿ ಮಸೂದೆ 2025 ಕರಡುನಲ್ಲಿ ಮೂಲಕ ಕಾಯ್ದೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರಲ್ಲಿನ ಸೆಕ್ಷನ್ 2ಗೆ ತಿದ್ದುಪಡಿ ತರಲಾಗಿದ್ದು, ಬ್ಯಾಲೆಟ್ ಬಾಕ್ಸ್ ಅಥವಾ ಬ್ಯಾಲೆಟ್ ಪೇಪರ್ ಪದವನ್ನು ಸೇರ್ಪಡೆಗೊಳಿಸಲಾಗಿದೆ. ಜೊತೆಗೆ ಮೂಲ ಕಾಯ್ದೆಯಲ್ಲಿನ ಸೆಕ್ಷನ್ 67ನ್ನು ಕೈ ಬಿಡಲಾಗಿದೆ.

ಇತ್ತ ಪುರಸಭೆ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಅನುವು ಮಾಡಿಕೊಡಲು ಕರ್ನಾಟಕ ಪುರಸಭೆಗಳ (ತಿದ್ದುಪಡಿ) ಮಸೂದೆ 2025 ಕರಡುನಲ್ಲಿ ಕರ್ನಾಟಕ ಪುರಸಭೆಗಳ ಕಾಯ್ದೆ 1964ನಲ್ಲಿನ ಸೆಕ್ಷನ್ 2ಕ್ಕೆ ತಿದ್ದುಪಡಿ ತರಲಾಗಿದ್ದು, ಬ್ಯಾಲೆಟ್ ಬಾಕ್ಸ್ ಅಥವಾ ಬ್ಯಾಲೆಟ್ ಪೇಪರ್ ಪದವನ್ನು ಸೇರಿಸಲಾಗಿದೆ. ಮೂಲ ಕಾಯ್ದೆಯಲ್ಲಿನ ಸೆಕ್ಷನ್ 38-Bಯನ್ನು ಕೈ ಬಿಡಲಾಗಿದೆ. ಮೂಲ ಕಾಯ್ದೆಯಲ್ಲಿ ಎಲ್ಲೆಲ್ಲಿ ಮತಯಂತ್ರ ಎಂಬ ಪದ ಉಲ್ಲೇಖವಾಗಿದೆ ಅದನ್ನು ಕೈ ಬಿಡಲಾಗಿದೆ.

ಅದೇ ರೀತಿ ಮಹಾನಗರ ಪಾಲಿಕೆಗಳ ಚುನಾವಣೆಗಳಲ್ಲಿ ಮುಂದೆ ಬ್ಯಾಲೆಟ್ ಪೇಪರ್ ಬಳಕೆಗೆ ಅನುವು ಮಾಡಿಕೊಡಲು ಕರ್ನಾಟಕ ಮಹಾನಗರ ಪಾಲಿಕೆಗಳು (ಎರಡನೇ ತಿದ್ದುಪಡಿ) ಮಸೂದೆ 2025 ಕರಡುನಲ್ಲಿ ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1976ನಲ್ಲಿನ ಸೆಕ್ಷನ್ 2ಕ್ಕೆ ತಿದ್ದುಪಡಿ ತರಲಾಗಿದ್ದು, ಬ್ಯಾಲೆಟ್ ಬಾಕ್ಸ್ ಅಥವಾ ಬ್ಯಾಲೆಟ್ ಪೇಪರ್ ಪದವನ್ನು ಸೇರಿಸಲಾಗಿದೆ. ಜೊತೆಗೆ ಮೂಲ ಕಾಯ್ದೆಯಲ್ಲಿನ ಸೆಕ್ಷನ್ 55-Aನ್ನು ಕೈ ಬಿಡಲಾಗಿದೆ.

ಹಾಗೆಯೇ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುವ ನಿಟ್ಟಿನಲ್ಲಿ ರೂಪಿಸಲಾದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2025 ಕರಡುನಲ್ಲಿ ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ನಲ್ಲಿನ ಸೆಕ್ಷನ್ 2ನ್ನು ತಿದ್ದುಪಡಿ ಮಾಡಿ ಬ್ಯಾಲೆಟ್ ಬಾಕ್ಸ್ ಅಥವಾ ಬ್ಯಾಲೆಟ್ ಪೇಪರ್ ಪದವನ್ನು ಸೇರಿಸಲಾಗಿದೆ. ಸೆಕ್ಷನ್ 7, ಸೆಕ್ಷನ್ 130 ಹಾಗೂ ಸೆಕ್ಷನ್ 169ಗೆ ತಿದ್ದುಪಡಿ ತಂದು ಮತಯಂತ್ರ ಎಂಬ ಪದ ಬಳಕೆ ಹಾಗೂ ಅದರ ಉಲ್ಲೇಖಗಳನ್ನು ಕೈ ಬಿಡಲಾಗಿದೆ.

ನಾಲ್ಕು ತಿದ್ದುಪಡಿ ಕರಡು ಮಸೂದೆಗಳಲ್ಲಿನ ಸಾರಾಂಶ ಏನು?

ರಾಜ್ಯ ಸರ್ಕಾರ ರೂಪಿಸಿರುವ ಈ ಪ್ರತ್ಯೇಕ ನಾಲ್ಕು ಕರಡು ಮಸೂದೆಗಳಲ್ಲಿ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಬಳಸುವ ಉದ್ದೇಶ, ಅಗತ್ಯತೆ ಬಗ್ಗೆ ವಿವರಿಸಲಾಗಿದೆ. ಗುಪ್ತ ಮತದಾನ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಳ ಮೂಲ ಅಂಶವಾಗಿದೆ. ಕುಲ್ದೀಪ್ ನಾಯರ್ Vs ಕೇಂದ್ರ ಸರ್ಕಾರ (2006) ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿನ ಅಂಶಗಳನ್ನು ಉಲ್ಲೇಖಿಸುತ್ತಾ ಕೆಲ ಸನ್ನಿವೇಶಗಳಲ್ಲಿ ಮುಕ್ತ ಬ್ಯಾಲೆಟುಗಳನ್ನು ಬಳಸಬಹುದಾಗಿದೆ. ಆದರೆ ಗುಪ್ತ ಮತದಾನ ಮತದಾರರ ಸ್ವಾಯತ್ತತೆ ಮತ್ತು ಅವರನ್ನು ಬಾಹ್ಯ ಒತ್ತಡದಿಂದ ತಡೆಯಲು ಅತಿ ಮುಖ್ಯವಾಗಿದೆ. ಆ ಮೂಲಕ ಮುಕ್ತ ಚುನಾವಣೆಯ ಸಾಂವಿಧಾನಿಕ ಮೂಲತತ್ವ ಎತ್ತಿಹಿಡಿದಂತಾಗುತ್ತೆ ಎಂಬುದನ್ನು ವಿವರಿಸಿದೆ.

ಅದೇ ರೀತಿ ಮತದಾನ ಪ್ರಕ್ರಿಯೆಯಲ್ಲಿನ ಮತದಾರರ ವಿಶ್ವಾಸ ಕಾಪಾಡುವ ಅಗತ್ಯತೆ, ಮತದಾನ ಗೌಪ್ಯತೆಯನ್ನು ಕಾಯ್ದುಕೊಂಡು ವಿವಿಪ್ಯಾಟ್ ನ್ನು ಪರಿಚಯಿಸುತ್ತಾ, ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆಯಲ್ಲಿನ ಕುಂದು ಕೊರತೆಗಳನ್ನು ನೀಗಿಸಲು ನಿರಂತರ ಸುಧಾರಣೆ ತರುವ ಅಗತ್ಯತೆ ಬಗೆಗಿನ ಕೋರ್ಟ್ ತೀರ್ಪಿನ ಅಂಶಗಳನ್ನು ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.‌

ಇವಿಎಂ ವಿಶ್ವಾಸಾರ್ಹತೆ ಮತ್ತು ಮತದಾರರ ಗೌಪ್ಯತೆ ಆತಂಕ ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಳೆಯ ಪೇಪರ್ ಬ್ಯಾಲೆಟ್ ಪದ್ಧತಿಗೆ ಮರಳಲು ತೀರ್ಮಾನಿಸಿದೆ. ಇವಿಎಂಗಳಲ್ಲಿನ ನ್ಯೂನ್ಯತೆಗಳ ಮೂಲಕ ಸಂಭಾವ್ಯ ಚುನಾವಣಾ ವಂಚನೆ ಮತ್ತು ಮತದಾರರ ಪಟ್ಟಿಯಲ್ಲಿನ ಲೋಪಗಳ ಬಗ್ಗೆ ಆತಂಕ ವ್ಯಕ್ತವಾಗಿರುವ ಕಾರಣ ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸಲು ಸದೃಢ ಗೌಪ್ಯ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳುವುದನ್ನು ಅಗತ್ಯವಾಗಿಸಿದೆ ಎಂದು ಕರಡು ಮಸೂದೆಗಳಲ್ಲಿ ಉಲ್ಲೇಖಿಸಲಾಗಿದೆ.

ಪೇಪರ್ ಬ್ಯಾಲೆಟ್ ಬಳಕೆಯ ಮೂಲಕ ಮತದಾರರು ಯಾವುದೇ ಪ್ರತಿಕಾರದ ಆತಂಕವಿಲ್ಲದೆ ಮತದಾನ ಮಾಡಬಹುದಾಗಿದೆ. ಇದರಿಂದ ಚುನಾವಣಾ ಸಮಗ್ರತೆ ಹೆಚ್ಚಾಗಲಿದೆ ಮತ್ತು ಮುಕ್ತ ಚುನಾವಣೆ ಮತ್ತು ಗೌಪ್ಯ ಮತದಾನವನ್ನು ಖಾತ್ರಿಗೊಳಿಸುವ ಮಾನವಹಕ್ಕುಗಳ ಸಾರ್ವತ್ರಿಕ ಘೋಷಣೆಯ ಆರ್ಟಿಕಲ್ 21ರಡಿ ಭಾರತದ ಅಂತಾರಾಷ್ಟ್ರೀಯ ಬದ್ಧತೆಗೆ ಇದು ಪೂರಕವಾಗಿರಲಿದೆ ಎಂದು ಉಲ್ಲೇಖಿಸಿದೆ. ಹೀಗಾಗಿ ರಾಜ್ಯದಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೌಪ್ಯ ಬ್ಯಾಲೆಟ್ ಪೇಪರ್ ಬಳಕೆ ಕಡ್ಡಾಯಗೊಳಿಸಲು ಮಸೂದೆ ರೂಪಿಸುವುದು ಸೂಕ್ತವಾಗಿದೆ ಎಂದು ಸಮರ್ಥಿಸಿಕೊಂಡಿದೆ.

More News