ಬಳ್ಳಾರಿ: ದಿವಂಗತ ಪ್ರಧಾನಿ ಇಂದಿರಾಗಾಂಧೀ ಅವರ ದೂರದರ್ಶಿತ್ವದ ಫಲವಾಗಿ ಇಂದು ದೇಶದಲ್ಲಿ ವನ, ವನ್ಯಜೀವಿ, ಪ್ರಕೃತಿ ,ಪರಿಸರ ಉಳಿದಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಹೊಸಪೇಟೆಯಲ್ಲಿಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿರಾಗಾಂಧೀ ಅವರು 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ, 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ತಂದ ಫಲವಾಗಿ ವನ, ವನ್ಯಜೀವಿ ಸಂಪತ್ತಿನ ಸಂರಕ್ಷಣೆಯಾಗಿದೆ ಎಂದರು.
1970ರ ದಶಕದಲ್ಲಿ ಜಲ ಮಾಲಿನ್ಯ, ವಾಯು ಮಾಲಿನ್ಯ ಆಗುತ್ತಿರುವುದನ್ನು ಮನಗಂಡು ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆಯನ್ನು ಜಾರಿಗೆ ತಂದರು. 1974ರ ಜಲ ಕಾಯಿದೆ ಅಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಗಿದ್ದು, ಇಂದು ಸುವರ್ಣ ಮಹೋತ್ಸವ ಆಚರಿಸುತ್ತಿದೆ ಎಂದರು.
ಈ ಎಲ್ಲ ಕಾಯಿದೆಗಳನ್ನೂ ಕರ್ನಾಟಕ ರಾಜ್ಯ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಿದ್ದು, ಇದರ ಫಲವಾಗಿ ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂ.1 ಆಗಿದೆ. 6395 ಆನೆಗಳು ನಮ್ಮಲ್ಲಿವೆ. ಅದೇ ರೀತಿ 563 ಹುಲಿಗಳೊಂದಿಗೆ ರಾಜ್ಯ 2ನೇ ಸ್ಥಾನದಲ್ಲಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಕಾಡಿದ್ದರೆ ನಾಡು, ವೃಕ್ಷವಿದ್ದರೆ ಉಸಿರು, ಪ್ರತಿ ವ್ಯಕ್ತ ನೆಮ್ಮದಿಯಿಂದ ಉಸಿರಾಡಲು 7 ಮರ ಇರಬೇಕು. ಭೌಗೋಳಿಕ ಪ್ರದೇಶದ ಶೇ.33ರಷ್ಟು ಅರಣ್ಯ ಇರಬೇಕು. ಆದರೆ ರಾಜ್ಯದಲ್ಲಿ ಶೇ.21ರಷ್ಟು ಅರಣ್ಯವಿದೆ. ನಾವು ನೀವೆಲ್ಲಾ ಅರಣ್ಯ, ವನ್ಯಜೀವಿ ಮತ್ತು ಪರಿಸರ ರಕ್ಷಿಸಲು ಪಣತೊಡಬೇಕು ಎಂದರು.
ಇಂದು ವಿಶ್ವದ ಮುಂದೆ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯ ಸವಾಲಿದೆ. ತಾಪಮಾನ 50 ಡಿಗ್ರಿ ಸೆಲ್ಷಿಯಸ್ ದಾಟಿದರೆ ಮನುಷ್ಯ ಬದುಕುವುದೇ ಕಷ್ಟ. ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರಿದರೆ ತಾಪಮಾನ ಹೆಚ್ಚುತ್ತದೆ. ಹೀಗಾಗಿ ಇಂಗಾಲ ಸೇವಿಸಿ, ಆಮ್ಲಜನಕ ನೀಡುವ ಗಿಡ, ಮರಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕು. ಉಳಿಸಬೇಕು ಎಂದು ಈಶ್ವರ ಖಂಡ್ರೆ ಮನವಿ ಮಾಡಿದರು.
ಕಲುಷಿತ ನೀರು ಪೂರೈಸುವ ಸ್ಥಳೀಯ ಸಂಸ್ಥೆ ವಿರುದ್ಧ ಕ್ರಮ:
ಜಲ ಕಾಯಿದೆ ಅಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಲುಷಿತ ನೀರು ಪೂರೈಕೆ ಮಾಡುವ ಸ್ಥಳೀಯ ಸಂಸ್ಥೆಗೆ ನೋಟಿಸ್ ನೀಡಿ ಕ್ರಮ ಜರುಗಿಸುವ ಅಧಿಕಾರವಿದೆ. ಮಂಡಳಿ ಸ್ಥಳೀಯ ಸಂಸ್ಥೆಯ ಜೊತೆಗೂಡಿ ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸುವ ಮೂಲಕ, ಶುದ್ಧೀಕರಣ ಘಟಕಗಳ ಕಾರ್ಯನಿರ್ವಹಣೆಯ ಪರಿಶೀಲನೆ ಮಾಡುವ ಮೂಲಕ ಸಮುದಾಯ ಆರೋಗ್ಯ ರಕ್ಷಿಸಬೇಕು ಎಂದರು.
ಪ್ರಕೃತಿ ವಿಕೋಪಕ್ಕೆ ಮಾಲಿನ್ಯವೇ ಕಾರಣ:
ಪ್ರಕೃತಿ ವಿಕೋಪಗಳಿಗೆ ಪರಿಸರ ಮಾಲಿನ್ಯವೇ ಕಾರಣವಾಗಿದೆ. ತಾಪಮಾನ ಏರಿಕೆಯಿಂದ ಅತಿವೃಷ್ಟಿ ಆಗುತ್ತಿದೆ. ಒಂದು ತಿಂಗಳ ಮಳೆ ಒಂದು ವಾರದಲ್ಲಿ ಬೀಳುತ್ತಿದೆ. ಒಂದು ವಾರದ ಮಳೆ ಒಂದು ದಿನದಲ್ಲಿ ಬೀಳುತ್ತದೆ. ಇದರಿಂದ ಬೆಳೆ ಹಾನಿ, ಜೀವಹಾನಿ ಆಗುತ್ತಿದ್ದು, ನಾವು ಪರಿಸರ ಮಾಲಿನ್ಯವಾಗದಂತೆ ಎಚ್ಚರವಹಿಸಬೇಕು ಎಂದರು.
ಪರಿಸರ ಪ್ರಕೃತಿ ಇರುವುದು ಮಾನವನ ಅವಶ್ಯಕತೆ ಪೂರೈಸಲೇ ಹೊರತು, ದುರಾಸೆ ಪೂರೈಸಲು ಅಲ್ಲ ಎಂದು ಮಹಾತ್ಮಾ ಗಾಂಧೀ ಹೇಳಿದ್ದಾರೆ. ನಮ್ಮ ಪೂರ್ವಜರು ನೈಸರ್ಗಿಕ ಸಂಪನ್ಮೂಲವನ್ನು ಹಿತಮಿತವಾಗಿ ಬಳಸುತ್ತಿದ್ದರು. ಇಂದು ಪ್ರಕೃತಿ, ಪರಿಸರದ ಮೇಲೆ ದೌರ್ಜನ್ಯ ಆಗುತ್ತಿದೆ ಎಂದ ಅವರು, ಪ್ರಕೃತಿ ಪರಿಸರ ಉಳಿಸಲು ಸಂಕಲ್ಪ ಮಾಡುವಂತೆ ಕರೆ ನೀಡಿದರು.
ನಮಗೆ ಅಭಿವೃದ್ಧಿಯೂ ಆಗಬೇಕು, ಪ್ರಕೃತಿಯೂ ಉಳಿಯಬೇಕು ಈ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದ ಅವರು, ಅದಿರು ಸಾಗಿಸುವ ಲಾರಿಗಳ ಸಂಚಾರದಿಂದ ಉಂಟಾಗುವ ದೂಳಿನಿಂದ ವಾಯು ಮಾಲಿನ್ಯ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮಂಡಳಿ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.
ಇರುವ ಒಂದು ಭೂಮಿಯನ್ನು ಆರೋಗ್ಯಪೂರ್ಣವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಪರಿಸರಕ್ಕೆ ಮಾರಕವಾದ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎಂದ ಅವರು, ಕ್ಯಾರಿ ಬ್ಯಾಗ್ ಬಳಸದಂತೆ ಜಾಗೃತಿ ಮೂಡಿಸಿ, ಬಟ್ಟೆಯ ಚೀಲಗಳನ್ನು ಉಚಿತವಾಗಿ ಹಂಚುತ್ತಿರುವ ಸಂಸದ ತುಕಾರಾಂ ಅವರನ್ನು ಅಭಿನಂದಿಸಿದರು.
ಮರುಬಳಕೆ, ಪುನರ್ ಬಳಕೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವನ್ನು ಪ್ರತಿಪಾದಿಸಿದ ಈಶ್ವರ ಖಂಡ್ರೆ, ಬಳಕೆ ಮಾಡಿದ ಆಯಿಲ್ ಅನ್ನು ನೀರಿಲ್ಲದ ಬೋರ್ ವೆಲ್ ಗಳಿಗೆ ಸುರಿಯುವುದು ಅಪರಾಧವಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಹಸಿರು ಪಟಾಕಿ ಬಳಸಲು ಮನವಿ:
ಭಾರಲೋಹಯುಕ್ತ ಪಟಾಕಿಗಳಿಂದ ಪರಿಸರ ಮಾಲಿನ್ಯ ಆಗುತ್ತಿದ್ದು, ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಹಸಿರು ಪಟಾಕಿ ಮಾತ್ರವೇ ಬಳಸುವಂತೆ ಪರಿಸರ ಸಚಿವರು ಮನವಿ ಮಾಡಿದರು.
ಸಂಸತ್ ಸದಸ್ಯ ತುಕಾರಾಂ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ, ಶಾಸಕ ಗವಿಯಪ್ಪ ಮತ್ತಿತರರು ಪಾಲ್ಗೊಂಡಿದ್ದರು.




