ಬಂಡೀಪುರ, ಅ.27: ಅರಣ್ಯ ಪ್ರದೇಶದೊಳಗೆ ಏಕ ಬಳಕೆ ಪ್ಲಾಸ್ಟಿಕ್ ಹಾಕುವುದನ್ನು ತಡೆಯಲು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ 2 ಹಂತದ ತಪಾಸಣೆಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಚಾಲನೆ ನೀಡಿದರು.
ಬಂಡೀಪುರ, ನಾಗರಹೊಳೆ ಸೇರಿದಂತೆ ರಾಜ್ಯದ ಅರಣ್ಯ ಪ್ರದೇಶದೊಳಗೆ ಸಾಗುವ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಪ್ರಯಾಣಿಕರಿಗೆ ಮೊದಲ ಹಂತದಲ್ಲಿ ಸ್ವಯಂ ಪ್ರೇರಿತವಾಗಿ ಕಸದ ಬುಟ್ಟಿಗೆ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನ ಹಾಕಲು ಸೂಚಿಸಲಾಗುತ್ತದೆ. 2ನೇ ಹಂತದಲ್ಲಿ ಸಿಬ್ಬಂದಿ ತಪಾಸಣೆ ನಡೆಸಿದಾಗ ವಾಹನದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಕಾಡಿನೊಳಗೆ ಏಕ ಬಳಕೆ ಪ್ಲಾಸ್ಟಿಕ್ ಪ್ರವೇಶಿಸಿದರೆ ವನ್ಯಜೀವಿಗಳು ಅದನ್ನು ತಿಂದು ಕಾಯಿಲೆಯಿಂದ ನರಳುತ್ತವೆ. ಸಾಯುತ್ತವೆ. ನಮ್ಮ ಸಿಬ್ಬಂದಿ ಪ್ರತಿ ನಿತ್ಯ ಕಾಡಿನ ಮಾರ್ಗದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುತ್ತಿದ್ದಾರೆ. ಅವರ ಮೇಲೆ ವನ್ಯಜೀವಿಗಳು ದಾಳಿ ಮಾಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಈ ಎರಡು ಹಂತದ ತಪಾಸಣಾ ವ್ಯವಸ್ಥೆ ಪರಿಣಾಮಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.




