ಬೆಳಗಾವಿ: ರೇಪ್ ಅನಿವಾರ್ಯವಾದಾಗ ಮಲಗಿ ಸಂಭ್ರಮಿಸಬೇಕು ಎಂದು ಸದನದಲ್ಲಿ ಹೇಳಿಕೆ ನೀಡಿದ್ದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕ್ಷಮೆಕೋರಿದ್ದಾರೆ. ಇಂದು ಬೆಳಗ್ಗೆ ಟ್ವೀಟರ್ ನಲ್ಲಿ ಕ್ಷಮೆ ಕೋರುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಯತ್ನ ಮಾಡಿದ್ದಾರೆ. ಇದರ ಮಧ್ಯೆಯೇ, ವಿಧಾನಸಭೆ ಇಂದು ಆರಂಭವಾಗುತ್ತಿದ್ದಂತೆ ಎದ್ದು ನಿಂತು ಸದನದಲ್ಲೂ ರಮೇಶ್ ಕುಮಾರ್ ಕ್ಷಮೆ ಕೋರಿದ್ದಾರೆ.
ರಮೇಶ್ ಕುಮಾರ್ ಅವರ ಹೇಳಿಕೆಯನ್ನು ಆಡಳಿತ ಪಕ್ಷ ಸದಸ್ಯರು ಖಂಡಿಸಿದ್ದರು. ಸದನದಲ್ಲಿ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದ್ದಾರೆ. ಹಿರಿಯ ಶಾಸಕರು ಮುತ್ಸದ್ದಿ ರಾಜಕಾರಣಿಯಿಂದ ಇಂತಹ ಹೇಳಿಕೆ ನೀಡಬಾರದಿತ್ತು ಎಂದು ಹೇಳಿದ್ದಾರೆ.
ಈ ಮಧ್ಯೆ, ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನಿನ್ನೆ ಅತಿವೃಷ್ಠಿ ಕುರಿತ ಚರ್ಚೆ ಸಂದರ್ಭದಲ್ಲಿ ರಮೇಶ್ ಕುಮಾರ್ ಅವರು ಇಂಗ್ಲಿಷ್ ಗಾದೆ ಮಾತು ಹೇಳಿದ್ದಾರೆ. ಈಮಾತನ್ನು ಕೇಳಿದ ಮೇಲೆ ರಮೇಶ್ ಕುಮಾರ್ ಅವರ ಮೇಲೆ ಗೌರವವಿತ್ತು. ಅವರು ಹಿರಿಯರು, ತುಂಬಾ ತಿಳಿದುಕೊಂಡವರು, ನಾವು ನೂತನ ಶಾಸಕರಾಗಿದ್ದಾಗ ಅವರನ್ನು ನೋಡಿ ಕಲಿತವರು, ಸ್ಪೀಕರ್ ಆಗಿದ್ದವರು, ಆ ರೀತಿ ಹೇಳಿಕೆ ನೀಡಬಾರದಿತ್ತು ಎಂದಿದ್ದಾರೆ.

ನಾನು ಅವರು ಹೇಳಿಕೆಯನ್ನು ಖಂಡಿಸುತ್ತೇನೆ, ಸದನದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಸಚಿವೆ, ಸದನದಲ್ಲಿ ಕ್ಷಮೆ ಕೇಳಬೇಕು ಆಗ್ರಹಿಸಿದ್ದರು.
ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ ಸಚಿವ ಮುನಿರತ್ನ ಆಕ್ರೋಶ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ಮುನಿರತ್ನ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ, ಅವರಿಗೆ ಹೆಣ್ಣಿನ ಕಷ್ಟ ಗೊತ್ತಿಲ್ಲ, ಅವರು ಸೀರೆ ಉಟ್ಟುಕೊಂಡು ಹೋಗಲಿ ಆಗ ಅವರಿಗೆ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಅವರ ಉದ್ಧಟತನದ ವರ್ತನೆಯಾಗಿದ್ದು, ಅವರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯದ ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ ಯಡಿಯೂರಪ್ಪ
ಈ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿದ, ರಮೇಶ್ ಕುಮಾರ್ ಮಾಜಿ ಸ್ಪೀಕರ್ ಆಗಿದ್ದವರು, ಅನೇಕ ಭಾರಿ ದೊಡ್ಡ ದೊಡ್ಡ ಉಪದೇಶ ಮಾಡುತ್ತಾರೆ, ಆದರೆ ನಿನ್ನೆ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ, ಮಹಿಳಾ ಸಮೂಹಕ್ಕೆ ಮಾಡಿದ ಅಪಮಾನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಅಕ್ಷಮ್ಯ ಅಪರಾಧ ಮಾಡಿದ್ದಾರೆ, ಹಾಗಾಗಿ ರಮೇಶ್ ಕುಮಾರ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇಶದ ಕ್ಷಮೆ ಕೇಳಬೇಕು
ರಮೇಶ್ ಕುಮಾರ್ ಹಿರಿಯ ರಾಜಕಾರಣಿ, ಅವರಿಗೆ ಅಪಾರವಾದ ಅನುಭವ ಇದೆ, ನಿನ್ನೆ ಸದನದಲ್ಲಿ ಅಸಂಬದ್ಧ ಪದ ಬಳಸಿ ಮಹಿಳಾ ಸಮಾಜಕ್ಕೆ ಅವಮಾನ ಮಾಡಿದ್ದಾರೆ, ರಮೇಶ್ ಕುಮಾರ್ ಒಂದು ಕಪ್ಪು ಚುಕ್ಕೆ. ಅವರು ದೇಶದ ಕ್ಷಮೆ ಕೇಳಬೇಕು ಎಂದು ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಹೇಳಿಕೆ ಎಂದು ಭಾವಿಸುತ್ತೇನೆ, ಡಿಕೆಶಿ, ಸಿದ್ದರಾಮಯ್ಯ ರಮೇಶ್ ಕುಮಾರ್ ಅವರನ್ನು ಪಕ್ಷದಿಂದ ತಕ್ಷಣ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.




