ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಉದ್ದೇಶವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ದೆಹಲಿ: “ಈಗ ನಮ್ಮ ನಾಯಕರು ಸಂಸತ್ ಅಧಿವೇಶನದಲ್ಲಿ ಬ್ಯುಸಿ ಇದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ತೊಂದರೆ ಕೊಡಲು ಬಯಸುವುದಿಲ್ಲ. ಗುರುವಾರ ಬೆಳಗ್ಗೆ ಬೆಂಗಳೂರಿಗೆ ಮರಳುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ದೆಹಲಿಗೆ ಭೇಟಿ ಕೊಟ್ಟಿರುವ ಸಂದರ್ಭದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, ಈ ರೀತಿ ಉತ್ತರ ನೀಡಿದರು.

ದೆಹಲಿ ಭೇಟಿಯ ಉದ್ದೇಶದ ಬಗ್ಗೆ ಕೇಳಿದಾಗ, “ಮದುವೆ ಸಮಾರಂಭದಲ್ಲಿ ಭಾಗವಹಿಸುವುದು ಹಾಗೂ ಡಿ.14 ಪ್ರತಿಭಟನಾ ಸಮಾವೇಶಕ್ಕೆ ಕರ್ನಾಟಕ ರಾಜ್ಯದಿಂದ 10 ಸಾವಿರ ಜನರನ್ನು ಕರೆತರಲು ನಿರ್ಧರಿಸಲಾಗಿದೆ. ಇದರ ಪೂರ್ವ ತಯಾರಿ ನೋಡಿಕೊಳ್ಳುವುದು, ಪಕ್ಷದ ಅಧ್ಯಕ್ಷನಾಗಿ ನನ್ನ ಜವಾಬ್ದಾರಿ” ಎಂದು ತಿಳಿಸಿದರು.

8ರಂದು ಸಿಡಬ್ಲ್ಯುಎಂಎ ಸಭೆ ಇದೆ ಎಂದು ಕೇಳಿದಾಗ, “ಈ ಬಗ್ಗೆ ಎಲ್ಲಾ ದಾಖಲೆ ಸಿದ್ಧ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾವು ನಮ್ಮ ವಿಚಾರ ಪ್ರತಿಪಾದಿಸಬೇಕು. ಇಲ್ಲದಿದ್ದರೆ, ಸಭೆ ಮುಂದೂಡಿಕೊಂಡು ಹೋಗಲಾಗುವುದು. ನಾವು ಅವರ ಮುಂದೆ ಪ್ರೆಸೆಂಟೇಷನ್ ಸಲ್ಲಿಸಬೇಕು. ಇದಕ್ಕೆ 6 ತಿಂಗಳ ಕಾಲಾವಕಾಶ ಇದೆ” ಎಂದು ತಿಳಿಸಿದರು.

ಸಿಎಂ ಜೊತೆಗಿನ ಉಪಹಾರ ಸಭೆಯಲ್ಲಿ ಏನು ಚರ್ಚೆ ಆಯಿತು ಬಗ್ಗೆ ಕೇಳಿದಾಗ, “ಉಪಹಾರ ಸಭೆಯಲ್ಲಿ ಸಿಎಂ ಜೊತೆ ಸಾಕಷ್ಟು ವಿಚಾರ ಚರ್ಚೆ ಮಾಡಿದ್ದೇನೆ. ಎಲ್ಲರೂ ಒಟ್ಟಾಗಿ ಕರ್ನಾಟಕ ರಾಜ್ಯವನ್ನು ಮುನ್ನಡೆಸುವುದು, ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಿದ್ದೇನೆ” ಎಂದು ತಿಳಿಸಿದರು.

More News