ವಿಪಕ್ಷ ನಾಯಕರ ಕಚೇರಿಯಲ್ಲಿ ಯತ್ನಾಳ್ ಹಾಗೂ ಕೆಲ ಬಿಜೆಪಿ ಶಾಸಕರಿಂದ ಬಾಗಿಲು ಮುಚ್ಚಿ ಮಾತುಕತೆ!

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಗದ್ದಲ ಒಂದು ಕಡೆಯಾದರೆ, ಬಿಜೆಪಿಯಲ್ಲೂ ಗೊಂದಲ ಮುಗಿದಿಲ್ಲ. ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಒಂದಲ್ಲಾ ಒಂದು ಸ್ವರೂಪದಲ್ಲಿ ಬಹಿರಂಗವಾಗ್ತಿದೆ.

ಈ ನಡುವೆ ವಿಧಾನಸಭೆ ಮೊಗಸಾಲೆಯಲ್ಲಿರುವ ವಿಪಕ್ಷ ನಾಯಕ ಆರ್ ಅಶೋಕ್ ಕಚೇರಿಯಲ್ಲಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಬಿಜೆಪಿಯ ಕೆಲವು ಶಾಸಕರು ಬಾಗಿಲು ಮುಚ್ಚಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಬುಧವಾರ ಭೋಜನ ವಿರಾಮದ ಬಳಿಕ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಬೈರತಿ ಬಸವರಾಜ್ ಸೇರಿದಂತೆ ಕೆಲವು ಶಾಸಕರು ಮಾತುಕತೆಯ ಸಂದರ್ಭದಲ್ಲಿ ಇದ್ದರು. ಶಾಸಕ ಶಿವರಾಜ್ ಪಾಟೀಲ್ ಕೂಡಾ ಇದೇ ವೇಳೆ ಉಪಸ್ಥಿತರಿದ್ದರು. ಆದರೆ ವಿಪಕ್ಷ ನಾಯಕ ಆರ್ ಅಶೋಕ್ ಮಾತ್ರ ಕಚೇರಿಯಲ್ಲಿ ಈ ಸಂದರ್ಭದಲ್ಲಿ ಉಪಸ್ಥಿತರಿರಲಿಲ್ಲ.

ಬಾಗಿಲು ತೆರೆಯಲು ಯತ್ನಿಸಿದ್ದ ಮುನಿರತ್ನ

ಕಚೇರಿ ಬಾಗಿಲು ಮುಚ್ಚಿ ಯತ್ನಾಳ್ ಜೊತೆಗೆ ಬಿಜೆಪಿ ಶಾಸಕರು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಶಾಸಕ ಮುನಿರತ್ನ ಆಗಮಿಸಿದರು. ಬಾಗಿಲು ತೆರೆಯಲು ಅವರು ಯತ್ನಿಸಿದರು. ಬಳಿಕ ಶಿವರಾಜ್ ಪಾಟೀಲ್ ಬಾಗಿಲು ತೆರೆದರು. ಅವರು ಒಳಹೋದ ಮೇಲೆ ಮತ್ತೆ ಬಾಗಿಲು ಮುಚ್ಚಲಾಯಿತು.

ವಿಜಯೇಂದ್ರ ಎಂಟ್ರಿ ಯತ್ನಾಳ್ ಔಟ್

ಇದೇ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಆಗಮಿಸಿದರು. ಈ ವೇಳೆ ಬಾಗಿಲು ಮುಚ್ಚಿಕೊಂಡಿತ್ತು. ಬಳಿಕ ಶಿವರಾಜ್ ಪಾಟೀಲ್ ಬಾಗಿಲು ತೆರೆದರು.

ವಿಜಯೇಂದ್ರ ಅವರು ಕಚೇರಿಗೆ ಎಂಟ್ರಿ ಕೊಡುತ್ತಿದ್ದಂತೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊರ ನಡೆದರು. ಅವರ ಜೊತೆಗೆ ಸುನೀಲ್ ಕುಮಾರ್ ಹಾಗೂ ಬೈರತಿ ಬಸವರಾಜ್ ಕೂಡಾ ಕಚೇರಿಯಿಂದ ಹೊರ ಬಂದರು.

ಬಿಜೆಪಿಯಲ್ಲಿ ಎರಡು ಬಣಗಳ ನಡುವಿನ ಭಿನ್ನಮತ ಪದೇ ಪದೇ ಬಹಿರಂಗವಾಗುತ್ತಿದೆ. ಮೊದಲ ದಿನದ ಅಧಿವೇಶನದಲ್ಲಿ ಯತ್ನಾಳ್, ಅಶೋಕ್ ಹಾಗೂ ಸುನೀಲ್ ಕುಮಾರ್ ಜೊತೆಗೆ ಕುಳಿತುಕೊಂಡಿದ್ದರು. ಯತ್ನಾಳ್ ಅವರು ಬಿಜೆಪಿಯಿಂದ ಉಚ್ಚಾಟನೆಗೊಂಡರೂ ಶಾಸಕರ ಜೊತೆಗೆ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದಾರೆ.

More News