ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾವಿಯಲ್ಲಿ ಮಾಡಿರುವ ಭಾವನಾತ್ಮಕ ವಿಚಾರಕ್ಕೆ ಸಂಬಂಧಿಸಿದಂತೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಜಾಗ ಖಾಲಿ ಮಾಡಲು ಬಂದಾಗ ಕಣ್ಣೀರು ಸಹಜ ಎಂದು ಎಂಎಲ್ ಸಿ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಎಂಎಲ್ ಸಿ, ಜಾಗ ಖಾಲಿ ಮಾಡುವ ಸೂಚನೆ ಇದಾಗಿದೆ, ಅಧಿಕಾರ ಶಾಶ್ವತವಲ್ಲ ಅಂತ ಹೇಳ್ತಾರೆ, ಜೀವನವೇ ಶಾಶ್ವತವಲ್ಲ, ಕುರ್ಚಿ ಯಾವಾಗ ಶಾಶ್ವತ ಎಂದು ಕಿಡಿಕಾರಿದ್ದಾರೆ. ಅದಕ್ಕಾಗಿ ಬಸವಕೃಪದವರು ಬಸವಕೃಪದಲ್ಲೇ ಇರಿ, ಕೇಶವ ಕೃಪ ನಂಬಿಹೋದ್ರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ, ನಾ ಘರ್ ಕಾ ನಾ ಘಾಟ್ ಕಾ ಬಸ್ ಸ್ಟಾಂಡ್ ಕಾ ಆಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಎಂಇಎಸ್ ವಿಚಾರದಲ್ಲಿ ಬಿಜೆಪಿ ಮೌನ
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ ಎಂ ಇಬ್ರಾಹಿಂ, ಬಿಜೆಪಿ ನಾಯಕರ ಮೌನ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಧಂ ಇಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ನಾರಾಯಣಗೌಡ, ವಾಟಾಳ್ ನಾಗಾರಾಜ್ ಅರಿಗಿರುವ ಬುದ್ಧಿ ಇವರಿಗಿಲ್ಲ, ಇದು ದುರ್ಧೈವ ಎಂದು ಕಿಡಿಕಾರಿದ್ದಾರೆ.

ಪೊಲೀಸರು ಬೆಳಗಾವಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪೊಲೀಸರಿಗೆ ಫ್ರೀಂ ಹ್ಯಾಂಡ್ ಕೊಡಿ, ೨೪ ಗಂಟೆಯಲ್ಲಿ ಫಲಿತಾಂಶ ನೀಡುತ್ತಾರೆ ಎಂದು ಸಿ ಎಂ ಇಬ್ರಾಹಿಂ ಒತ್ತಾಯಿಸಿದ್ದಾರೆ.
ತಣ್ಣಗಾಗದ ರಮೇಶ್ ಕುಮಾರ್ ಕೋಪ
ಸದನದಲ್ಲಿ ರೇಪ್ ಎಂಬ ಪದ ಬಳಕೆ ನಂತರ ಸುದ್ದಿಯಲ್ಲಿದ್ದ ರಮೇಶ್ ಕುಮಾರ್, ಇಂದೂ ಕೂಡ ತಮ್ಮ ಮುನಿಸು ಮುಂದುವರೆಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಅವರು, ಮಾಧ್ಯಮಗಳ ಮುಂದೆ ಬಂದು ಕೈ ಮುಗಿದು ಹೋದರು. ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.




