ಸಿಎಂ ಬದಲಾವಣೆ ಕೇವಲ ಗಾಳಿ ಸುದ್ದಿ ಎಂದು ಮುಖ್ಯಮಂತ್ರಿ ಪರ ಬ್ಯಾಟಿಂಗ್ ಮಾಡಿ ಸಚಿವ, ಶಾಸಕರು

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ, ಮುಖ್ಯಮಂತ್ರಿ ಬದಲಾವಣೆ ಕೇವಲ ಗಾಳಿ ಸುದ್ದಿ, ಇದೊಂದು ಕಾಲ್ಪನಿಕ ಕಥೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು ಸಿಎಂ ಭಾವನಾತ್ಮಕ ಭಾಷಣ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಉದ್ಭವ ಆಗಲ್ಲ. ಯಾರು ಕನಸು ಕಾಣುವುದು ಬೇಡ. ದಿನ ಬೆಳಗಾದ್ರೆ ಜೋತಿಷ್ಯವನ್ನ ಹೇಳ್ತಾ ಇರ್ತಾರೆ. ನಾವು ಜೋತಿಷ್ಯವನ್ನ ನಂಬುವುದು ಇಲ್ಲ ಕೇಳುವುದು ಇಲ್ಲ. ಸಿಎಂ ಜೊತೆ ನಾವು ಇದ್ದೇವೆ ಎಂದರು.
ಕ್ಷೇತ್ರ ಜನ ಪ್ರೀತಿಯಿಂದ ಗೆಲ್ಲಿಸಿದ್ದಾರೆ. ಅದಕ್ಕಾಗಿ ಹಾಗೇ ಮಾತನಾಡುತ್ತಿದ್ದಾರೆ. ನಾನು ಸಿಎಂ ಬಳಿ ಮಾತನಾಡಿದ್ದೇನೆ. ಅವರು ಮುಖ್ಯಮಂತ್ರಿಯಾಗಿಯೇ ಮುಂದುವರೆಯುತ್ತಾರೆ, ಯಾವುದೇ ಅಡೆತಡೆಯಲ್ಲಿದೆ ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ, ಸಿಎಂ ಕುರ್ಚಿ ಮೇಲೆ ಯಾರು ಕನಸು ಕಾಣೋದು ಬೇಡ ಎಂದು ಸ್ಪಷ್ಟಪಡಿಸಿದರು.
ಭಾವನಾತ್ಮಕವಾಗಿ ಸಿಎಂ ಈ ರೀತಿ ಹೇಳಿದ್ದಾರೆ, ಯಾವುದೇ ಬದಲಾವಣೆ ಇಲ್ಲ – ರೇಣುಕಾಚಾರ್ಯ
ಸಿಎಂ ಬದಲಾವಣೆ ಕೇವಲ ಊಹಾಪೋಹದ ಸುದ್ದಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿಎಂ ಭಾವನಾತ್ಮಕವಾಗಿ ಕ್ಷೇತ್ರದ ಜನರ ಮುಂದೆ ಮಾತನಾಡಿದ್ದಾರೆ. ಸಿಎಂ ಬದಲಾವಣೆ ಊಹಾಪೋಹ. ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಅವರೆಲ್ಲರೂ ಒಟ್ಟಾಗಿ ಸರ್ವಾನುಮತದಿಂದ ತೀರ್ಮಾನ ಮಾಡಿ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ. ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.


ರಾಷ್ಟ್ರೀಯ ನಾಯಕರು ಯಾರೂ ಆ ರೀತಿ ಹೇಳಿಲ್ಲ.‌ ರಾಷ್ಟ್ರೀಯ ನಾಯಕರು ಹೇಳಿದರೆ ಅದಕ್ಕೆ ಅರ್ಥ ಇರುತ್ತದೆ. ಸಿಎಂರಾಗಿ ಬೊಮ್ಮಾಯಿ ಮುಂದುವರಿಯುತ್ತಾರೆ ಎಂದರು. ಅಧಿಕಾರ ಶಾಶ್ವತ ಅಲ್ಲ ಅಂತ ಹೇಳಿದ್ದಾರೆ ಅಷ್ಟೇ. ಜನರ ಪ್ರೀತಿ ಮುಂದೆ ಯಾವುದೇ ಸ್ಥಾನಮಾನ ಶಾಶ್ವತ ಅಲ್ಲ‌ ಎಂದಿದ್ದಾರೆ. ಎಲ್ಲಾ ಬಿಜೆಪಿ ಶಾಸಕರು ಬೊಮ್ಮಾಯಿ ಜೊತೆಗೆ ಇದ್ದಾರೆ. ಯಾವುದೇ ಶಾಸಕರು ಬಸವರಾಜ್ ಬೊಮ್ಮಾಯಿ ಬಗ್ಗೆ ಅಸಮಾಧಾನ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

More News