ಭಾರೀ ವಿರೋಧದ ನಡುವೆ ಬಹುಚರ್ಚಿತ ಮತಾಂತರ ನಿಷೇಧ ವಿಧೇಯಕ ಮಂಡನೆ ಮಾಡಿದ ಗೃಹ ಸಚಿವರು

ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಬಹು ಚರ್ಚಿತ ಮತಾಂತರ ನಿಷೇಧ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡನೆ ಮಾಡಿದರು.  

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ವಿಧೇಯಕ 2021 ನ್ನು ವಿರೋಧ ಪಕ್ಷಗಳ ಗದ್ದಲದ ನಡುವೆಯೂ ವಿಧೇಯಕವನ್ನು  ಮಂಡನೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು  ಕಿಡಿಕಾರಿದರು.

ಈಗಾಗಲೇ ನೀನು ನಗೆಪಾಟಲಿಗೆ ಈಡಾಗಿದ್ದೀಯಾ, ಸುಮ್ನೆ ಕೂತ್ಕೋಳಯ್ಯಾ ಅಂತಾ ಸಿದ್ದರಾಮಯ್ಯ ಆರಗ ಜ್ಞಾನೇಂದ್ರ ಅವರ ವಿರುದ್ಧ ಈ ಸಂದರ್ಭದಲ್ಲಿ ಹರಿಹಾಯ್ದರು.

ವಿಧೇಯಕವನ್ನು ಕೇವಲ ಮಂಡನೆ ಮಾಡಲಾಗಿದೆ, ನಾಳೆ ಇದನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಸ್ಪೀಕರ್ ಕಾಗೇರಿ ಅವರು ಹೇಳಿದರು.

ಈ ಕುರಿತು ಸಮಗ್ರವಾಗಿ ಚರ್ಚೆ ಮಾಡೋಣ ಎಂದು ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕಾಂಗ್ರೆಸ್ ಶಾಸಕರು ಕೂಗಿದರು.  

ಮತಾಂತರ ನಿಷೇಧ ವಿಧೇಯಕ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ
ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸಿಕಾಂಗ್ರೆಸ್ ಸಭಾತ್ಯಾಗ ಮಾಡಿದ್ದನ್ನು ಸಚಿವ ಕೆ ಎಸ್ ಈಶ್ವರಪ್ಪ ತೀವ್ರವಾಗಿ ವಿರೋಧಿಸಿದ್ದಾರೆ. ಮುಸಲ್ಮಾನರಿಗೆ ಹಾಗೂ ಕ್ರೈಸ್ತರಿಗೆ ತೃಪ್ತಿ ಪಡಿಸಲು ಕಾಂಗ್ರೆಸ್ ಸಭಾತ್ಯಾಗ ಮಾಡಿದೆ, ಕೆಟ್ಟ ನಿರ್ಣಯದ ಮೂಲಕ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಬೇಡ, ಇವರಿಗೆ ಮತಾಂತರಬೇಕು, ಹಿಂದೂಗಳು ಮುಸ್ಲಿಮರಾಗಿ ಮತಾಂತರ ಆಗಿ ಪಾಕಿಸ್ತಾನ ಆಗಬೇಕೇ ಭಾರತ, ಹಾಗಾಗಲು ಅವಕಾಶ ನೀಡುವುದಿಲ್ಲ, ಸಂವಿಧಾನದ ಜೊತೆ ಅವರವರ ಧರ್ಮವನ್ನು ಉಳಿಸಿಕೊಳ್ಳಬೇಕು, ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ 24% ರಿಂದ 3% ಕ್ಕೆ ಇಳಿದಿದೆ ಎಂದರು.
ಈಶ್ವರಪ್ಪನವರ ಈ ಮಾತಿಗೆ ಕುಮಾರಸ್ವಾಮಿ ಅವರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಹಾಗೂ ಭಾರತ ದೇಶವನ್ನು ಬೇರೆ ಧರ್ಮಕ್ಕೆ ಕನ್ವರ್ಟ್ ಮಾಡುತ್ತಾರೆ ಎಂಬ ಪದ ಒಪ್ಪಲು ಸಾಧ್ಯವಿಲ್ಲ ಎಂದರು.
ಮತಾಂತರ ಕಾಯಿದೆಯಲ್ಲಿರುವ ಪ್ರಮುಖ ಅಂಶಗಳು
ನಗದು, ಉಡುಗೊರೆ ಮೂಲಕ ಮತಾಂತರ ಮಾಡುವುದು ಅಪರಾಧ, ಶಾಲಾ ಕಾಲೇಜು, ಧಾರ್ಮಿಕ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ, ಉದ್ಯೋಗದ ಹೆಸರಿನಲ್ಲಿ ಮತಾಂತರ ನಿಷೇಧ, ಒಂದು ಧರ್ಮದ ಸಂಪ್ರದಾಯ, ಪದ್ಧತಿಗಳನ್ನ ಬೇರೆ ಧರ್ಮಕ್ಕೆ ಧಕ್ಕೆಯಾಗುವ ರೀತಿ ಚಿತ್ರಿಸಬಾರದು, ಮದುವೆಯಾಗುವುದಾಗಿ ನಂಬಿಸಿ ಮತಾಂತರ ಮಾಡುವುದು ಅಪರಾಧ ಇದನ್ನು ಉಲ್ಲಂಘಿಸಿದವರಿಗೆ ಒಂದು ಲಕ್ಷದವರೆಗೆ ದಂಡನೆ ವಿಧಿಸಲಾಗುವುದು. ಏಕ ಉದ್ದೇಶ ಮತಾಂತರದಿಂದಾದ ಮದುವೆ ಕಾನೂನು ಬಾಹಿರ ಹಾಗೂ ಮದುವೆಯೇ ಅಸಿಂಧು ಎಂದು ವಿಧೇಯಕದಲ್ಲಿದೆ.

More News