ಸುವರ್ಣಸೌಧದಕ್ಕೆ ಮಾಧ್ಯಮದವರ ನಿರ್ಬಂಧ ಮಾಧ್ಯಮದವರಿಂದ ಮೌನ ಪ್ರತಿಭಟನೆ ವ್ಯಾಪಕ ಖಂಡನೆ

ಬೆಳಗಾವಿ : ಮತಾಂತರ ಕಾಯಿದೆ ವಿಧಾನ ಸಭೆಯಲ್ಲಿ ಮಂಡನೆಯಾದ ಬಳಿಕ ಮಾಧ್ಯಮದವರಿಗೆ ಸುವರ್ಣಸೌಧ ಪ್ರವೇಶಕ್ಕೆ ನಿರ್ಬಂಧಿಸಿದ ಘಟನೆ ನಡೆದಿದೆ. ಮಾಧ್ಯಮದವರನ್ನು ನಿರ್ಬಂಧಿಸಿರುವುದನ್ನು ಖಂಡಿಸಿ ಸುವರ್ಣಸೌಧದ ಮುಖ್ಯದ್ವಾರದ ಬಳಿ ಎಲ್ಲಾ ಮಾಧ್ಯಮದ ಪ್ರತಿನಿಧಿಯವರು ಇಂದು ಮೌನ ಪ್ರತಿಭಟನೆ ನಡೆಸಿದರು.
ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಸ್ಪೀಕರ್ ಕಾಗೇರಿ ಅವರು ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಆದೇಶ ಮಾಡಿಲ್ಲ, ಯಾರಿಗೂ ನಿರ್ಬಂಧ‌ ಹೇರುವ ಬಗ್ಗೆ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಸೂಚನೆಯ ಆದೇಶ ಪ್ರತಿಯನ್ನು ಸ್ಪೀಕರ್ ಅವರಿಗೆ ಮಾಧ್ಯಮದವರು ತೋರಿಸಿದರು. ಆದೇಶ ಪ್ರತಿಯನ್ನು ಗಮನಿಸಿದ ಸ್ಪೀಕರ್ ಅವರು ತಕ್ಷಣವೇ ಎಲ್ಲ ಗೇಟ್ ಗಳಲ್ಲೂ ಮಾಧ್ಯಮದವರನ್ನು ಒಳಬಿಡಲು ಸೂಚಿಸಿದರು.


ನನ್ನ ಗಮನನಕ್ಕೆ ಬಾರದೇ ನಡೆದ ಅಚಾತುರ್ಯ ಇದಾಗಿದೆ. ಹೀಗಾಗದಂತೆ ನೋಡಿಕೊಳ್ಳುವುದಾಗಿ ಸ್ಪೀಕರ್ ಕಾಗೇರಿ ತಿಳಿಸಿದರು. ಇದರಿಂದ ಮಾಧ್ಯಮದವರು ಪ್ರತಿಭಟನೆ ವಾಪಸ್ ಪಡೆದರು. ಆದೇಶದ ಸತ್ಯಾಸತ್ಯತೆಯನ್ನು ತಿಳಿದು ಅವರ ಮೇಲೆ ಕ್ರಮ ತೆಗೆದುಕೊಳ್ಳೊದಾಗಿ ಭರವಸೆ ನೀಡಿದರು.
ಮಾಧ್ಯಮದವರನ್ನು ಹೊರಹಾಕಿರುವುದಕ್ಕೆ ಶಾಸಕರಿಂದ ಖಂಡನೆ
ಈ ಸರ್ಕಾರ ಅನೈತಿಕ ಸರ್ಕಾರ, ವಿಧಾನ ಸಭಾ ಕಾರ್ಯಕಲಾಪಗಳನ್ನ ಸರಿಯಾಗಿ ಮಾಡುತ್ತಿಲ್ಲ, ಇದು ಖಂಡನೀಯ, ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಲು ನಾನಾ ಕಾನೂನುಗಳನ್ನು ತರಲು ಮುಂದಾಗಿದ್ದಾರೆ, ಅದರಲ್ಲಿ ಮಾಧ್ಯಮಗಳನ್ನ ಹೊರಹಾಕಿರುವುದು ಕೂಡ ಒಂದು ಎಂದು ಶಾಸಕ ಪ್ರಕಾಶ್ ರಾಥೋಡ್ ಅಸಮಾಧಾನ ವ್ಯಕ್ತಪಡಿಸಿದರು.


ಮೊದಲು ಕಾಂಗ್ರೆಸ್ ಶಾಸಕರನ್ನು ಸಭೆಯಿಂದ ಹೊರಗೆ ಹಾಕಿದರು, ಈಗ ಸುವರ್ಣ ಸೌಧದಿಂದ ಮಾಧ್ಯಮದವರನ್ನು ಹೊರ ಹಾಕಲು ಪ್ರಯತ್ನಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಮಾಧ್ಯಮವನ್ನು ಹೊರಹಾಕುವುದು ಸರಿಯಲ್ಲ, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶವ್ಯಕ್ತಪಡಿಸಿದರು.


ಮಾಧ್ಯಮಗಳ ಮೇಲೆ ಬಿಜೆಪಿ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ, ಪ್ರಜಾಪ್ರಭುತ್ವದ ವಿರೋಧಿ ಕೆಲಸ, ಮತಾಂತರ ನಿಷೇಧ ಮಸೂದೆ ಜಾರಿಯನ್ನು ಸಹ ಕದ್ದು ಮುಚ್ಚಿ ಮಾಡಿದ್ದಾರೆ, ಈಗ ಇಂದು ಬೆಳಿಗ್ಗೆ ಮಾಧ್ಯಮದವರನ್ನು ನಿರ್ಬಂಧಿಸಿದ್ದಾರೆ, ಇದು ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂದು ಶಾಸಕ ಯು ಟಿ ಖಾದರ್ ಲೇವಡಿ ಮಾಡಿದ್ದಾರೆ.
ಬೆಳಗಾವಿ ಎಸ್ ಪಿ ಲಕ್ಷ್ಮಣ್ ನಿಂಬರಗಿ ಮಾಡಿದ ಆದೇಶ ವಾಪಸ್
ಸುವರ್ಣಸೌಧದೊಳಗೆ ಮಾಧ್ಯಮದವರನ್ನು ನಿರ್ಬಂಧಿಸಿ ಬೆಳಗಾವಿ ಪೊಲೀಸ್ ಆಯುಕ್ತ ಲಕ್ಷ್ಮಣ್ ನಿಂಬರಗಿ ಆದೇಶ ಮಾಡಿದ್ದರು ಎಂದು ತಿಳಿದುಬಂದಿದೆ.

More News