ಕನ್ನಡಪರ ಸಂಘಟನೆಗಳ ಬಂದ್ ಕರೆ: ಭಾವನೆಗಳಿಗೆ ಧಕ್ಕೆ ತಂದರೆ ಉಗ್ರ ಕ್ರಮ: ಸಚಿವ ಅಶ್ವತ್ಥನಾರಾಯಣ

ಬೆಳಗಾವಿ : ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಬಂದ್ ಮಾಡುವ ಅವಶ್ಯಕತೆಯಿಲ್ಲ, ಸರ್ಕಾರ ನಾಡಿನ ಜನರ ಪರವಾಗಿದೆ ಎಂದು ಸಚಿವ ಡಾ.ಕೆ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಡಿನ ಕಾನೂನು ನಮ್ಮ ಪರವಾಗಿದೆ, ಕನ್ನಡಿಗರ ವಿಶ್ವಾಸಕ್ಕೆ ಧಕ್ಕೆ ಬರುವಂತೆ ಸರ್ಕಾರ ನಡೆದುಕೊಳ್ಳುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾಡಿನ ಸಂಸ್ಕೃತಿ ಸೌಹಾರ್ದತೆಯ ಪರವಾಗಿದೆ, ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ವಿವರಿಸಿದರು.
ಕಾಗಾವಾಡದಲ್ಲಿ ಶಿವಸೇನೆ ಪುಂಡರು ಮತ್ತೆ ಕನ್ನಡ ಬಾವುಟ ದಹನ
ಕಾಗಾವಾಡದಲ್ಲಿ ಶಿವಸೇನೆ ಪುಂಡರು ಮತ್ತೆ ಕನ್ನಡ ಬಾವುಟ ದಹನ ಮಾಡಿರುವ ಕುರಿತು ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಯಾರು ಕೂಡ‌ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಗಲಭೆ ಎಬ್ಬಿಸುವುದು, ಭಾವನೆ ಕೆರಳಿಸುವುದಕ್ಕೆ ಆಸ್ಪದ ಕೊಡಬಾರದು, ಸೌಹಾರ್ದತೆಯಿಂದ ಇರಬೇಕು, ಎಲ್ಲಾ ಭಾಷೆಗಳು ಬೆಳೆಯಲು ಅವಕಾಶವಿದೆ, ಮರಾಠಿಗರು ನಮ್ಮವರು, ಕನ್ನಡಿಗರು ನಮ್ಮವರು, ಎಲ್ಲಾರೂ ಕಾನೂನು ಕಾಪಾಡಬೇಕು ಎಂದರು.
ಇನ್ನೊಬ್ಬರ ಭಾವನೆ ದಕ್ಕೆ ತರುವಂತ ಕೆಲಸ ಮಾಡಬಾರದು ಒಂದು ವೇಳೆ ಯಾರೇ ದಕ್ಕೆ ತಂದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ, ಬೆಂಕಿ ಹೊತ್ತಿಸುವುದು, ಕಿಡಿ ಹೊತ್ತಿಸುವುದು ಅಗಬಾರದು ಎಂದು ಸ್ಪಷ್ಟಪಡಿಸಿದ ಅವರು, ಮೊದಲು ನಾವು ಭಾರತೀಯರು, ಹಾಗಾಗಿ ಯಾರೇ ಕುಮ್ಮಕ್ಕು ನೀಡಿದ್ರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಉದ್ಯೋಗ ಮೇಳ
ಕೆಎಲ್ ಎಸ್ ಗೋಗಟೆ ಸಂಸ್ಥೆಯಿಂದ ಬೆಳಗಾವಿಯಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದ್ದು, ನಾಳೆ ಉದ್ಯೋಗ ಮೇಳ ನಡೆಯಲಿದೆ ಎಂದು ತಿಳಿಸಿದ ಅಶ್ವತ್ಥನಾರಾಯಣ, ಎಲ್ಲರಿಗೂ ಉದ್ಯೋಗ ಎಂಬ ಘೋಷಣೆಯೊಂದಿಗೆ ಮೇಳ ನಡೆಯಲಿದೆ, ಸಿಎಂ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ 5600 ಯುವಕರು ನೊಂದಾವಣೆ ಮಾಡಿಕೊಂಡಿದ್ದಾರೆ, ಇಂಜಿನಿಯರ್ಸ್, ಡಿಪ್ಲೊಮಾ ಮಾಡಿದವರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ ಅವರು, ಒಟ್ಟು 78 ಕಂಪನಿಗಳು ಈ‌ ಮೇಳದಲ್ಲಿ ಭಾಗಿಯಾಗುತ್ತಿವೆ ಎಂದು ತಿಳಿಸಿದರು.
ಆಯ್ಕೆಯಾಗುವ ಯುವಕರು ಮೂರು ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು, 23 ತಾರೀಖು ಮೊದಲ ಹಂತದ ಸಂದರ್ಶನ ಆಗುತ್ತದೆ. 24ಕ್ಕೆ ಫೈನಲ್ ಸಂದರ್ಶನ ನಡೆಸಲಾಗುತ್ತದೆ, ಒಂದು ವೇಳೆ ಆಯ್ಕೆಯಾಗಿಲ್ಲ ಎಂದ್ರೆ, ಯಾಕೆ ಅಯ್ಕೆ ಆಗಿಲ್ಲ ಎಂದು ಕಾರಣ ಹೇಳಲಾಗುತ್ತದೆ ಎಂದು ವಿವರಿಸಿದರು.

More News