ಬೆಳಗಾವಿ : ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಆರ್.ಎಸ್.ಎಸ್ ಮೂಲದ ಚಿದಾನಂದ ಮೂರ್ತಿ, ನರಹರಿ, ಬಿ.ಎನ್ ಮೂರ್ತಿ, ಜಯದೇವ, ಆರ್.ಲೀಲಾ, ಮುತ್ತೂರು ಕೃಷ್ಣಮೂರ್ತಿ ಎಂಬುವವರು ಕಾನೂನು ಆಯೋಗಕ್ಕೆ ಮತಾಂತರ ನಿಷೇಧ ಕಾಯ್ದೆ ರೂಪಿಸಿ, ಜಾರಿಗೊಳಿಸುವಂತೆ ಮನವಿ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕಾನೂನು ಆಯೋಗದವರು 21/9/2013 ರಲ್ಲಿ ಕಾನೂನು ಇಲಾಖೆಗೆ ಕರಡು ನೀಡಿದ್ದಾರೆ. ನಂತರ ಈ ಕರಡು ಕಾನೂನು ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಚರ್ಚೆಯಾಗಿ ನಮ್ಮ ಕೈಸೇರಿದ್ದು 2015 ರಲ್ಲಿ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ನಾವು ಸಚಿವ ಸಂಪುಟದ ಮುಂದಿಟ್ಟು ಚರ್ಚೆ ಮಾಡಿಲ್ಲ, ಅನುಮೋದನೆಯನ್ನೂ ನೀಡಿಲ್ಲ. ಮುಖ್ಯಮಂತ್ರಿ ಈ ರೀತಿ ಸಂಪುಟ ಚರ್ಚೆಗೆ ತನ್ನಿ ಎಂದ ಅನೇಕ ವಿಷಯಗಳು, ಕಡತಗಳು ತಿರಸ್ಕರಿಸಲ್ಪಟ್ಟಿವೆ, ಕೆಲವು ಮುಂದೂಡಲ್ಪಟ್ಟಿವೆ, ಇನ್ನು ಕೆಲವು ಸಂಪುಟ ಉಪ ಸಮಿತಿಗೆ ಹೋಗಿವೆ. ಈ ಎಲ್ಲಾ ಕಡೆ ಸಚಿವರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆ ಎಂದು ವಿವರಿಸಿದರು.
ಈ ಹಿಂದಿನ ಕರಡು ಪ್ರತಿಗೂ, ಈಗಿನ ಕರಡು ಮಸೂದೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಮದುವೆ ಎಂಬ ಪದ ಹೊಸದಾಗಿ ಸೇರಿಸಲಾಗಿದೆ, ಸಾಕ್ಷಾಧಾರ ಕೊರತೆ ಎದುರಾದಾಗ ದೂರುದಾರರಿಗೆ ಅನುಕೂಲವಾಗುವಂತೆ ನಿಯಮವಿದೆ, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಅಪ್ರಾಪ್ತರಿಗೆ, ಬುದ್ದಿಭ್ರಮಣೆಯಾದವರನ್ನು ಮತಾಂತರ ಮಾಡಿದಾಗ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಆದರೆ ಇವುಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನಿನ ಎದುರು ಸರ್ವರೂ ಸಮಾನರು ಎಂದರು.
ಸಂಪುಟ ಸಭೆಯಲ್ಲಿ ಇದು ತಿರಸ್ಕಾರಗೊಂಡಿತ್ತು
ನಮ್ಮ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಹೆಚ್.ಆಂಜನೇಯ ಅವರು ಕರಡು ಪ್ರತಿಯನ್ನು ನೋಡಿ, ಇದನ್ನು ಸಂಪುಟದ ಮುಂದೆ ತರುವ ಅಗತ್ಯವಿಲ್ಲ ಎಂದು ಬರೆದು, ಅದನ್ನು ಬದಿಗೆ ಹಾಕಿದ್ದರು, ನಮಗೆ ಇಂಥದ್ದೊಂದು ಕಾಯ್ದೆ ತರುವ ಬಗ್ಗೆ ಕಾಳಜಿ ಇದ್ದಿದ್ದರೆ 2015 ರ ನವೆಂಬರ್ ನಲ್ಲಿ ಸಹಿ ಹಾಕಿ ಸಂಪುಟ ಚರ್ಚೆಗೆ ಕಳುಹಿಸಿದ್ದ ಕಡತ, ತಿರಸ್ಕಾರಗೊಂಡ ನಂತರ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದರ ಕಡೆ ಗಮನ ನೀಡಿಲ್ಲ. ನಮಗೆ ಅದರ ಅಗತ್ಯವೂ ಇರಲಿಲ್ಲ ಎಂದು ವಿವರಿಸಿದರು.

ಮತಾಂತರ ನಿಷೇಧ ಕಾಯ್ದೆ ಅತ್ಯಂತ ಅಮಾನವೀಯ, ಸಂವಿಧಾನ ಬಾಹಿರ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದುದ್ದು. ಇದು ಆರ್.ಎಸ್.ಎಸ್. ನ ಕೈವಾಡ. ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕ ಎಲ್ಲಾ ರಾಜ್ಯಗಳ ಕಾನೂನು ಒಂದೇ ರೀತಿಯ ಪದಬಳಕೆಯಿಂದ ಕೂಡಿದೆ. ಒಬ್ಬರೇ ಮೂರರ ಕರಡು ತಯಾರು ಮಾಡಿದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಒಂದು ಧರ್ಮದವರನ್ನು ಗುರಿಯಾಗಿಸಿ ಕಾನೂನು ರಚಿಸಿದ್ದಾರೆ
ನಾವು ಯಾರನ್ನೋ ಖುಷಿಪಡಿಸೋಕಲ್ಲ. ಯಾವುದೋ ಒಂದು ಧರ್ಮವನ್ನು ಗುರಿಯಾಗಿರಿಸಿ ಕಾನೂನು ರೂಪಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದಾವೆ, ಇವುಗಳಿಂದ ಜನರನ್ನು ವಿಮುಖಗೊಳಿಸಲು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮನವಿ ಮಾಡಿದ್ದರಿಂದ ಕಾನೂನು ಆಯೋಗದವರು ಕರಡು ರಚನೆ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದು ಆರ್.ಎಸ್.ಎಸ್ ಮತ್ತು ಯಡಿಯೂರಪ್ಪ ಅವರ ಸರ್ಕಾರದ ಕೂಸು, ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.




