ಸಾಲ ವಾಪಾಸ್ಸು ಮಾಡು ಇಲ್ಲವೆ ಮದುವೆಯಾಗು: ಇದು ಮದುವೆಯಾದವರ ಪ್ರೇಮಿಯ ವಿಚಿತ್ರ ಕಥೆ

ಬೀದರ್ : ಇದೊಂದು ವಿಚಿತ್ರ ಪ್ರೇಮಕಥೆ, ಪ್ರೀತಿ ಕುರುಡು ಎಂಬುದಕ್ಕೆ ಇದೇ ಸಾಕ್ಷಿ. ಮಾಡಿದ ಸಾಲ ತೀರಿಸಲಾಗದ ದುಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ ಪ್ರೇಯಸಿ. ಮದುವೆಯಾಗಲು ಒಪ್ಪದಿದ್ದಾಗ ಆತನ ಮನೆಗೆ ಬೆಂಕಿ ಇಟ್ಟಿದ್ದಾರೆ. ಜೀವನೋಪಾಯಕ್ಕಿದ್ದ ಅಟೋವನ್ನೇ ಸುಟ್ಟು ಹಾಕಿದ್ದಾರೆ.
ಹೌದು, ಇದು ವಿಚಿತ್ರ ಅನಿಸಿದರೂ ಅಷ್ಟೇ ಸತ್ಯ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ. ಇತ್ತ ಸಾಲ ತೀರಿಸಲಾಗದೇ, ಇನ್ನೊಂದೆಡೆ ಆಕೆಯೊಂದಿಗೆ ಮದುವೆಯಾಗಲೂ ಆಗದೇ ಇರುವ ಆಸ್ತಿಯನ್ನು ಕಳೆದುಕೊಂಡ ವ್ಯಕ್ತಿ ಭೀಮಾರಾವ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಭೀಮಾರಾವ್ ಮೂಲತಹ ಬಸವಕಲ್ಯಾಣದ ಚಿಕನಾಗಾಂವ್ ಗ್ರಾಮದ ನಿವಾಸಿ, ಅದೇ ಗ್ರಾಮದ ಮಹಿಳೆಯ ಬಳಿ ನಾಲ್ಕು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಇದನ್ನು ತನ್ನ ಜೀವನೋಪಾಯಕ್ಕೆ ಬಳಸಿ, ಇನ್ನುಳಿದ ಹಣದಲ್ಲಿ ಅಟೋವೊಂದನ್ನು ಖರೀದಿಸಿ ಜೀವನ ಸಾಗಿಸುತ್ತಿದ್ದ. ಸಾಲ ಪಡೆದ ಬಳಿಕವೇ ಆತನಿಗೆ ಕೆಟ್ಟ ಸಮಯ ಆರಂಭವಾಗಿತ್ತು.


ಸಾಲ ನೀಡಿದ ಮಹಿಳೆ ಹಲವಾರು ತಿಂಗಳ ಬಳಿಕ ಹಣ ವಾಪಾಸ್ಸು ನೀಡಲು ಆರಂಭಿಸಿದ್ದರು. ಈತ ನೀಡುತ್ತೇನೆ ಎಂಬ ಭರವಸೆಯೊಂದಿಗೆ ದಿನಗಳನ್ನು ತಳ್ಳುತ್ತಿದ್ದ. ಯಾವಾಗ ತನ್ನ ಹಣ ವಾಪಾಸ್ಸು ಬರುವ ಖಾತ್ರಿ ಆಕೆಗೆ ಸಿಗದ ಸೂಚನೆ ಸಿಕ್ಕಿದ ಕೂಡಲೇ ಮತ್ತೊಂದು ಅಧ್ಯಾಯ ಆರಂಭವಾಗಿತ್ತು.
ಅದೇ ಅಧ್ಯಾಯ ಪ್ರೇಮಕಥೆ. ಈ ಕಥೆ ಅತ್ಯಂತ ರೋಚಕವಾಗಿದ್ದು, ಇದನ್ನು ಕೇಳಿದರೆ ನಗಬೇಕು ಅಥವಾ ಅಳಬೇಕೋ ಅಂಥ ತಿಳಿಯದಾಗದು. ಭೀಮರಾವ್ ಮದುವೆ ಆಗಿದ್ದ, ಆತನಿಗೆ ಮಕ್ಕಳೂ ಕೂಡ ಇವೆ, ಇನ್ನೊಂದು ಕಡೆ ಆತನಿಗೆ ಸಾಲ ನೀಡಿದ ಮಹಿಳೆಗೆ ಕೂಡ ಮದುವೆ ಆಗಿದ್ದು, ಆಕೆಗೂ ಮಕ್ಕಳು ಇವೆ.
ಸಾಲ ಮರು ಪಾವತಿಯಾಗದೇ ಇದ್ದುದ್ದಕ್ಕೆ ಆಕೆ, ಭೀಮರಾವ್ ನಿನ್ನ ಬಳಿ ಎರಡು ದಾರಿಗಳಿಗವೆ. ಒಂದು ಸಾಲ ಹಿಂದಿರುಗಿಸು, ಇಲ್ಲವೆ ನನ್ನನ್ನು ಮದುವೆಯಾಗು ಎಂದು ಒತ್ತಡ ಹೇರಿದ್ದಳು. ಭೀಮಾರಾವ್ ಆಕೆಯನ್ನು ಮದುವೆಯಾಗಲು ನಿರಾಕರಿಸಿ, ಆ ಊರು ಬಿಟ್ಟು ಪಕ್ಕದ ಸಸ್ತಾಪೂರ್ ಗ್ರಾಮಕ್ಕೆ ಬಂದು ನೆಲೆಸಿದ್ದ. ಹೇಗಾದರೂ ಮಾಡಿ ಈ ಕಾಟದಿಂದ ತಪ್ಪಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಊರು ಬಿಟ್ಟಿದ್ದ ಎನ್ನಲಾಗಿದೆ.


ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಆ ಮಹಿಳೆ, ರಾತ್ರಿ ಭೀಮಾರಾವ್ ಮನೆಗೆ ಬೆಂಕಿ ಹಚ್ಚಿದ್ದಾಳೆ ಹಾಗೆಯೇ ಮನೆ ಮುಂದಿದ್ದ ಅಟೋಗೂ ಬೆಂಕಿ ಹಚ್ಚಿದ್ದಾಳೆ ಎಂದು ಭೀಮಾರಾವ್ ಮುಡಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಕೈಗೊಂಡಿದ್ದಾರೆ.

More News