ಬೆಂಗಳೂರು : ಹಿಂದೂ ದೇವಾಲಯಗಳನ್ನ ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರ ಕೈಗೆ ನೀಡಬೇಕು ಎಂಬುದು ನಮ್ಮ ಚಿಂತನೆ ಎಂದು ತಿಳಿಸಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಭಕ್ತರು ಅಂದ್ರೆ ಬಿಜೆಪಿ ಇರಬಹುದು ಅಥವಾ ಆರ್ ಎಸ್.ಎಸ್ ಕಾರ್ಯಕರ್ತರೂ ಆಗಿರಬಹುದು ಅಥವಾ ಡಿಕೆ ಶಿವಕುಮಾರ್ ಕೂಡ ಆಗಿರಬಹುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದುಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಕ್ತರು ಅಂದ್ರೆ ಎಲ್ಲರೂ ಬರ್ತಾರೆ, ನಾವು ಭಕ್ತರಿಗೆ ಕೊಡಬೇಕು ಅಂತ ಆಲೋಚಿಸಿದ್ದೇವೆ, ಈ ಸಂಬಂಧ ಇದುವರೆಗೂ ನಾವು ಯಾವುದೇ ಮಾರ್ಗಸೂಚಿ ಸಿದ್ಧಪಡಿಸಿಲ್ಲ ಎಂದು ತಿಳಿಸಿದರು.
ಆರ್ ಎಸ್.ಎಸ್ ಕಾರ್ಯಕರ್ತರಿಗೆ ನೂರಾರು ಕೋಟಿ ಬೆಲೆ ಬಾಳುವ ದೇವಸ್ಥಾನಗಳನ್ನ ಹಸ್ತಾಂತರಿಸುವ ಅಜೆಂಡಾ ಎಂಬ ಡಿಕೆಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿ ಕೆ ಶಿವಕುಮಾರ್ ಭಕ್ತರಾಗಿದ್ದರೆ ಅವರಿಗೂ ದೇವಾಲಯವನ್ನು ನೀಡಬಹುದು, ಅವರು ಅದನ್ನು ತೆಗೆದುಕೊಳ್ಳಬಹುದು ಎಂದು ತಿರುಗೇಟು ನೀಡಿದರು.
ಗಿರಿಜನರ ಮೇಲೆ ಹಲ್ಲೆ ಪ್ರಕರಣ ಕಠಿಣ ಕ್ರಮ
ಉಡುಪಿ ಜಿಲ್ಲೆಯ ಕೋಟಾದಲ್ಲಿ ಗಿರಿಜನರ ಮೇಲೆ ಪೋಲಿಸರು ವಿನಾಕಾರಣ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಒಬ್ಬ ಪಿಎಸ್‌ಐ ಅಮಾನತ್ತು ಮಾಡಿ ಉಳಿದ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಕೋಟಾಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ಈ ಕುರಿತು ಎಸ್‌ಪಿ ಮತ್ತು ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ, ಈ ಮಧ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಒಬ್ಬ ಕಾನ್ಸ್‌ಟೇಬಲ್ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು, ಆದಿವಾಸಿ ಕೇರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು, ಪ್ರಕರಣದ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿ ಚರ್ಚಿಸಲಾಗಿದೆ, ಯಾವುದೇ ಕಾರಣಕ್ಕೂ ಅಲ್ಲಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.




