ಬೆಂಗಳೂರು : ಹೊಸ ವರ್ಷ ಸಂಭ್ರಮದಿಂದ ಆಚರಿಸಬೇಕಿತ್ತು ಆದರೆ, ಪ್ರತಿಯೊಬ್ಬರೂ ಬದುಕು ಮುಖ್ಯ, ಕರ್ನಾಟಕ ಸೇರಿ ಎಂಟು ರಾಜ್ಯಗಳಲ್ಲಿ ಕೊರೋನಾ ಏರುಮುಖವಾಗಿದೆ ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸವರ್ಷ ಆಚರಣೆಗೆ ಹಲವು ನಿರ್ಬಂಧ ಹಾಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡಿದರೆ ಕೋರೋನಾ ನಿಯಮ ಉಲ್ಲಂಘನೆ ಮಾಡಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಸಂಜೆಯಿಂದಲೇ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ವಿವರಿಸಿದರು.
ಇವತ್ತು ಬೆಂಗಳೂರು ನಗರದಲ್ಲಿ ೬ ಗಂಟೆಯಿಂದಲೇ ನಿರ್ಭಂಧ ವಿಧಿಸಲಾಗಿದೆ, ಹೆಚ್ಚು ಜನರು ಸೇರಬಾರದು ಹಾಗೂ ೧೦ ಗಂಟೆಯಿಂದ ನೈಟ್ ಕರ್ಫ್ಯೂ ಹಾಕಲಾಗಿದೆ, ಎಂಟು ರಾಜ್ಯಗಳಲ್ಲಿ ಕೊರೊನಾ ಸ್ಪೋಟವಾಗಿದೆ, ನಮ್ಮ ರಾಜ್ಯದಲ್ಲೂ ಕೊರೊನೊ ಹರಡುತ್ತಿದೆ, ಹೀಗಾಗಿ ಸರ್ಕಾರ ಕೆಲ ನಿರ್ಭಂಧಗಳನ್ನು ಹಾಕಿದೆ ಎಂದು ವಿವರಿಸಿದರು.
ಪ್ರತಿಯೊಬ್ಬರೂ ಅವರವರ ಮನೆಯಲ್ಲೇ ಸೆಲೆಬ್ರೇಶನ್ ಮಾಡಬೇಕು, ಗುಂಪುಗೂಡಿ ಸೆಲೆಬ್ರೇಶನ್ ಮಾಡಬಾರದು, ಪೊಲೀಸರಿಗೆ ಕೆಲಸ ಕೊಡುವ ರೀತಿ ಮಾಡಬೇಡಿ, ದಯವಿಟ್ಟು ಸಾರ್ವಜನಿಕರು ಸಹಕರಿಸಬೇಕು ಎಂದರು. ಇದರಿಂದ ಹೋಟೆಲ್, ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಆರ್ಥಿಕ ನಷ್ಟವಾಗುತ್ತೆ ಆದರೂ ಪ್ರತಿಯೊಬ್ಬರ ಆರೋಗ್ಯದ ದೃಷ್ಠಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಾವೂ ಈಗಾಗಲೇ ಸ್ಮಶಾನದಲ್ಲಿ ಆ್ಯಂಬುಲೆನ್ಸ್ ಗಳು ಕ್ಯೂ ನಿಂತಿರುವುದನ್ನು ನೋಡಿದ್ದೇವೆ, ಮಾಧ್ಯಮಗಳಲ್ಲಿ ಅದನ್ನ ನೋಡುವಾಗ ತುಂಬಾ ನೋವಾಗಿತ್ತು, ಅದು ಆಗಬಾರದು ಅಂತಾ ನಾವೂ ಈ ರೀತಿ ನಿರ್ಬಂಧ ಮಾಡುತ್ತಿದ್ದೇವೆ, ಇದು ರಾಜ್ಯದ ಎಲ್ಲಾ ಕಡೆ ಅನ್ವಯಯಾಗಲಿದೆ, ಕರಾವಳಿ ಭಾಗದಲ್ಲೂ ಅನ್ವಯವಾಗಲಿದೆ ಎಂದುಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಾದಯಾತ್ರೆ ವಿಚಾರ
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಆಯೋಜಿಸಿರುವ ಪಾದಯಾತ್ರೆ ಕುರಿತು ಮಾತನಾಡಿದ ಅವರು, ಇದರಿಂದ ಏನೂ ಆಗಲ್ಲ, ಆರೂವರೆ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು, ಆಗ ಅವರು ಏನೂ ಮಾಡಲಿಲ್ಲ, ಪಾದಯಾತ್ರೆಯ ಸ್ಟಂಟ್ ನಿಂದ ಚುನಾವಣೆ ಗೆಲ್ಲೋದ್ದಕ್ಕೆ ಆಗೋದಿಲ್ಲ ಎಂದು ತಿಳಿಸಿದರು.
ಕೊರಗ ಕುಟುಂಬದ ಮೇಲೆ ಪೊಲೀಸರ ಹಲ್ಲೆ
ಉಡುಪಿಯಲ್ಲಿ ಕೊರಗ ಕುಟುಂಬದ ಮೇಲೆ ಪೊಲೀಸರು ನಡೆಸಿದ ಹಲ್ಲೆ ಪ್ರಕರಣ ಸಂಬಂಧ ಮಾತನಾಡಿದ ಅವರು, ಪ್ರಕರಣದ ಸಂಬಂಧ ತನಿಖೆ ನಡೆಯುತ್ತಿದೆ, ಹಲ್ಲೆ ಮಾಡಿದ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಸಾಮೂಹಿಕವಾಗಿ ಬೇರೆಡೆ ವರ್ಗ ಮಾಡಲಾಗಿದೆ ಎಂದು ತಿಳಿಸಿದರು.

ಕೋಟಾ ಅವರ ಕ್ಷೇತ್ರದ ಕೊರಗ ಸಮುದಾಯದವರು, ಆ ಜನಾಂಗದವರು ಮದುವೆ ಖುಷಿಯಲ್ಲಿದ್ರು, ನಮ್ಮ ಪೊಲೀಸರು ಅತಿರೇಕವಾಗಿ ವರ್ತಿಸಿದ್ದಾರೆ ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಸ್ವತಃ ಎಸ್.ಪಿ ಅವರೇ ಹೋಗಿ ಕ್ರಮ ಕೈಗೊಂಡಿದ್ದಾರೆ, ಕುಟುಂಬದ ಮೇಲೆ ಯಾವುದೇ ಎಫ್.ಐ.ಆರ್ ಹಾಕೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಎರಡನೇ ಅಲೆಯಲ್ಲಿ ಉದಾಸೀನದಿಂದ ಸಾಕಷ್ಟು ಸಾವು ನೋವು
ಎರಡನೇ ಅಲೆ ಸಂದರ್ಭದಲ್ಲಿ ಸ್ವಲ್ಪ ಉದಾಸೀನ ಮಾಡಿದ್ದರಿಂದ ಸಾಕಷ್ಟು ಸಾವು ನೋವು ಸಂಭವಿಸಿತ್ತು. ಅದು ಮತ್ತೆ ಮರುಕರುಳಿಸಬಾರದು ಎಂಬ ಉದ್ದೇಶದಿಂದ ಹತ್ತು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.




