ರಾಜಕೀಯದಲ್ಲಿ ಎಳಸು, ವಯಸ್ಸಿನಲ್ಲಿ ಹಿರಿಯರು ಗೃಹ ಸಚಿವರು: ಡಿಕೆಶಿವಕುಮಾರ್ ಆಕ್ರೋಶ

ಬೆಂಗಳೂರು : ರಾಜ್ಯ ಗೃಹ ಸಚಿವರು ವಯಸ್ಸಿನಲ್ಲಿ ಹಿರಿಯರು ಆದರೆ ರಾಜಕೀಯದಲ್ಲಿ ಎಳಸು, ಕಂದಾಯ ಸಚಿವರಿಗೆ ಬೆಂಗಳೂರಿನ ಬಗ್ಗೆ ಕಾಳಜಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೋಂ ಮಿನಿಸ್ಟರ್ ಗೆ ಅನುಭವ ಇಲ್ಲ, ರೋಡ್ ನಲ್ಲಿ ನಾನು ನಡೆಯೋದಕ್ಕೆ ಇವರ ಅನುಮತಿ ಪಡೆಯಬೇಕಾ ಎಂದು ಪ್ರಶ್ನಿಸಿದ್ದಾರೆ. ನನ್ನಲ್ಲಿ ಹೋರಾಟದ ಸಣ್ಣ ಗುಣ ಇದ್ದಿದ್ದಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಎದುರು ಅವತ್ತು ಚುನಾವಣೆಗೆ ಪಕ್ಷ ಸ್ಪರ್ಧಿಸಲು ಹೇಳಿತ್ತು, ಚುನಾವಣೆಯಲ್ಲಿ ಸೋತಿರಬಹುದು, ಆದ್ರೆ ಅಂಥ ಹೋರಾಟಗಾರರ ಮುಂದೆ ನನ್ನ ನಿಲ್ಲಿಸಬೇಕು ಅಂದ್ರೆ ನನ್ನ ಹೋರಾಟದ ಗುಣ ಕೂಡ ಕಾರಣ ಅಗಿತ್ತಲ್ವಾ ಎಂದು ಪ್ರಶ್ನಿಸಿದ್ದಾರೆ.
ನಮಗೆ ಗೃಹ ಸಚಿವರ ಪರ್ಮಿಷನ್ನೂ ಬೇಡ, ರಕ್ಷಣೆನೂ ಬೇಡ, ದೇವೇಗೌಡರು ನಡೆದಾಗ ಚಂದ್ರಶೇಖರ ಅವರು ನಡೆದಾಗ ಸ್ಟಾಂಪ್ ಹಾಕಿ ಪರ್ಮಿಷನ್ ಕೊಟ್ಟಿದ್ದಾರ ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಹೋರಾಟಗಾರರು ಯಾರೂ ಕೋಳಿ ಕೇಳಿ ಮಸಾಲೆ ಅರೆಯುವುದಿಲ್ಲ, ಹೋಂ ಮಿನಿಸ್ಟರ್ ಬರಲಿ, ಬ್ಯಾಲದ ಹಣ್ಣಿನ ಪಾನಕ ಕುಡಿಸಿ ಕಳುಹಿಸುತ್ತೇವೆ ಎಂದು ಟಿಕೀಸಿದರು.
ಕ್ಲಿಯರೆನ್ಸ್ ನೀಡಬೇಕಾಗಿದ್ದು ಕೇಂದ್ರ ಸರ್ಕಾರ
ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, ಎಂಬಿ ಪಾಟೀಲ್ ಅವರು ಇದ್ದಾಗ ಡಿಪಿಆರ್ ಮಾಡಿ ಕಳಿಸಿದ್ದು ನಿಜ, ಪರಿಸರ ಇಲಾಖೆ ಕ್ಲಿಯರೆನ್ಸ್ ಕೊಡಬೇಕಾಗಿದ್ದು ಕೇಂದ್ರ ಸರ್ಕಾರ ಎಂದುಸ್ಪಷ್ಟಪಡಿಸಿದ ಅವರು, ಇದಕ್ಕೆ ಅನುಮತಿ ನೀಡುವವರು ಸಿದ್ದರಾಮಯ್ಯ ಅಲ್ಲ, ಡಿಕೆಶಿ ಅಲ್ಲ, ಕೇಂದ್ರ ಸರ್ಕಾರ ಎಂದುಸ್ಪಷ್ಟಪಡಿಸಿದರು.


ನಮ್ಮ ಪಾದಯಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು, ನಾಲ್ಕೈದು ಅಂಬ್ಯುಲೆನ್ಸ್ ಪಾದಯಾತ್ರೆಯಲ್ಲಿರುತ್ತದೆ, ಸಾವಿರಾರು ಎಳನೀರು ಕೊಡುವುದಕ್ಕೆ ಮಂಡ್ಯ, ಮದ್ದೂರು ಜನರು ರೆಡಿ ಇದ್ದಾರೆ, ನೂರು ಜನ ಬರ್ತಾರೋ, ಐದು ನೂರು ಜನ ಬರ್ತಾರೋ ಐದು ಸಾವಿರ ಜನ ಬರ್ತಾರೋ ಗೊತ್ತಿಲ್ಲ, ಎಲ್ಲರಿಗೂ ಕೂಡ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.


ಅಶೋಕಣ್ಣ ಮೇಕೆ, ಬನ್ನೂರು ಕುರಿ, ನಾಟಿಕೋಳಿ ಎಲ್ಲ ರುಚಿಯನ್ನ ಬಹಳ ನೋಡಿದ್ದಾರೆ, ಮೇಕೆಮಾಂಸ ತಿನ್ನಿಸೋಕೆ ನಾವು ಪ್ರಯತ್ನ ಮಾಡ್ತಿಲ್ಲ, ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇದ್ರೆ ತಾನೇ, ಕಾವೇರಿ ಶುದ್ದ ನೀರು ಕೊಡಬೇಕು ಅಂತ ನಾವು ಪ್ರಯತ್ನ ಮಾಡ್ತಿದ್ದೇವೆ, ಇಡೀ ದೇಶದಲ್ಲಿ ೩೭% ಟ್ಯಾಕ್ಸ್ ಬೆಂಗಳೂರಿನವರು ಕಟ್ಟುತ್ತಿದ್ದಾರೆ ಎನ್ನೋದು ಅಶೋಕಣ್ಣನಿಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ವಿಮಾನ ನಿಲ್ದಾಣದಲ್ಲಿ ದಂಧೆಗೆ ಕಡಿವಾಣ ಹಾಕಿ
ರಾಜ್ಯದ ಜನತೆಗೆ ಆರೋಗ್ಯ, ಮಾನಸಿಕ ಶಕ್ತಿ ಎಲ್ಲ ಕುಗ್ಗಿ ಹೋಗಿದೆ, ಸಾಮಾಜಿಕವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ಇಫೆಕ್ಟ್ ಆಗಿದೆ, ವಿದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರ ಸುಲಿಗೆ ನಡೆಯುತ್ತಿದ್ದು, ಇದೊಂದು ದೊಡ್ಡ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ ಡಿಕೆಶಿವಕುಮಾರ್, ನೆಗಡಿ ಬಂದವರಿಗೆ ಪಾಸಿಟಿವ್ ಸರ್ಟಿಫಿಕೇಟ್ ನೀಡುತ್ತಿದ್ದಾರೆ, ಈ ಕುರಿತು ಸಿಎಂ ಗಮನ ಹರಿಸಬೇಕೆಂದು ಆಗ್ರಹಿಸಿದರು.


ಹೊರಗಡೆಯಿಂದ ಬಂದವರಿಗೆಲ್ಲ ಇಲ್ಲಿ ಬಂದವರಿಗೆಲ್ಲ ಪಾಸಿಟಿವ್ ರಿಪೋರ್ಟ್ ಕೊಟ್ಟು ಮೂರು ಮೂರು ಸಾವಿರ ವಸೂಲಿ ಮಾಡುವ ದಂಧೆಗೆ ಕಡಿವಾಣ ಹಾಕಬೇಕಾಗಿದೆ ಎಂದರು.

More News