ಬೆಂಗಳೂರು : ಕಾಂಗ್ರೆಸ್ ಮುಖಂಡರು ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಹೇಗಾದ್ರು ಮಾಡಿ ಪಾದಯಾತ್ರೆಯನ್ನು ಮೊಟಕುಗೊಳಿಸಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರ, ಕೋವಿಡ್ ನೆಪದಲ್ಲಿ ಕಟ್ಟುನಿಟ್ಟಿನ ಕಾನೂನನ್ನು ಜಾರಿ ಮಾಡಲು ತೀರ್ಮಾನಿಸಿದೆ.
ಈ ಸಂಬಂಧ ಇಂದು ಕಂದಾಯ ಸಚಿವ ಆರ್ ಅಶೋಕ್ ಬೆಂಗಳೂರಿನಲ್ಲಿ ಮಾತನಾಡುತ್ತಾ, ಪಾದಯಾತ್ರೆಗೆ ಬರುವ ಜನರಿಗೆ ಕಡಿವಾಣ ಹಾಕುವ ಸುಳಿವು ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷದವರು ಏನು ಮಾಡುತ್ತಾರೆ ಅನ್ನೋದು ನಮಗೆ ಮುಖ್ಯವಲ್ಲ, ನಮಗೆ ಇರೋದು ರಾಜ್ಯದ ಆರೂವರೆ ಕೋಟಿ ಜನರ ಜೀವ ಕಾಪಾಡೋದಾಗಿದೆ ಎಂದರು.
ಕೊರೊನಾದ ಎರಡನೇ ಅಲೆಯಲ್ಲಿ ಕೈಚೆಲ್ಲಿ ಕುಳಿತಿದ್ದ ರಾಜ್ಯ ಸರ್ಕಾರ, ಈಗ ಮೂರನೇ ಅಲೆಯಲ್ಲಿ ಗಾಢ ನಿದ್ದೆಯಿಂದ ಎಚ್ಚೆತ್ತುಕೊಂಡಿದೆ. ನಾವು ಯಾವುದೇ ಪಾದಯಾತ್ರೆ, ಸಭೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಜನರಿಗಾಗಿ ಜನವರಿ ೪ ಅಥವಾ ೫ ರಂದು ಸಭೆ ಮಾಡಿ ಬಿಗಿ ಕ್ರಮ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬೆಂಗಳೂರಿಗೆ ಸಂಬಂಧಿಸಿದಂತೆ ಕಠಿಣ ಕಾನೂನನ್ನು ಜಾರಿ ಮಾಡಲಾಗುವುದು ಎಂದು ತಿಳಿಸಿದ ಅವರು, ಈಗಾಗಲೇ ರೆಡ್ ಜೋನ್ ನಲ್ಲಿ ಬೆಂಗಳೂರು ನಗರ ಗುರುತಿಸಿಕೊಂಡಿದೆ ಈ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಮತ್ತದೆ ಹಳೇ ರಾಗ -ರಸ್ತೆ ಗುಂಡಿ ಮುಚ್ಚಲು ಕ್ರಮ : ಇಂದು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಬೆಂಗಳೂರು ನಗರದ ಸಮಸ್ಯೆಗಳ ಕುರಿತು ನಡೆದ ಸಭೆಯಲ್ಲಿ ಬೆಂಗಳೂರಿನ ಸಚಿವರು ಭಾಗವಹಿಸಿದ್ದರು, ವರ್ಚುವಲ್ ಮೂಲಕ ಕೆಲವು ಶಾಸಕರು, ಸಂಸದರು ಭಾಗವಹಿಸಿದ್ದರು. ಮುಖ್ಯವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಿಎಂ ಸೂಚನೆ ನೀಡಿದ್ದಾರೆ, ಒಟ್ಟು 730 ಕಿ.ಮೀ ರಸ್ತೆಗಳಲ್ಲಿ ಗುಂಡಿಗಳಿವೆ, ಮಾರ್ಚ್ 31 ರೊಳಗೆ ಗುಂಡಿ ಮುಚ್ಚಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಟೆಂಡರ್ ಶ್ಯೂರ್ ಕಾಮಗಾರಿನ್ನು ಮುಗಿಸಲು ಸೂಚನೆ
ಟೆಂಡರ್ ಶ್ಯೂರ್ ಕಾಮಗಾರಿನ್ನು ಮುಗಿಸಲು ಸಿಎಂ ಸೂಚನೆ ನೀಡಿದ್ದು, ಹೆಚ್ಚುವರಿಯಾಗಿ 1500 ಕೋಟಿ ರೂಪಾಯಿ ಹಣ ನೀಡಲು ಸಿಎಂ ಸೂಚಿಸಿದ್ದಾರೆ ಎಂದು ಹೇಳಿದ ಅಶೋಕ್, ಇದರಿಂದ ಮಳೆನೀರು ಗಾಲುವೆಗಳ ದುರಸ್ತಿ, ಮಳೆ ಬಿದ್ದರೆ ಆಗುವ ಅನಾಹುತ ತಪ್ಪಿಸಲು ಹಣ ಬಳಕೆ ಮಾಡಲಾಗುವುದು ಎಂದರು.

ಎ ಮತ್ತು ಬಿ ಖಾತೆ ನಿವೇಶನಗಳ ಸಮಸ್ಯೆ ಬಗ್ಗೆ ಚರ್ಚೆಯಾಗಿದೆ, ಆದರೆ, ಇದು ಸದ್ಯ ಸುಪ್ರೀಂಕೋರ್ಟಿನಲ್ಲಿ ಕೇಸಿರುವುದರಿಂದ ಶೀರ್ಘ್ರ ವಿಲೇವಾರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು. ಜನವರಿ 31 ರೊಳಗೆ ನಗರದಲ್ಲಿ ಬೀದಿ ದೀಪಗಳ ಬದಲಾವಣೆಮಾಡಲು ಸೂಚಿಸಲಾಗಿದ್ದು, ಬಿಬಿಎಂಪಿಯಿಂದ ಎಲ್ಇಡಿ ಬೀದಿ ದೀಪಗಳ ಅಳವಡಿಕೆಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ 7 ಸಾವಿರ ಸಿಸಿಟಿವಿಗಳ ಅಳವಡಿಕೆಗೆ ನಿರ್ಧಾರಿಸಲಾಗಿದ್ದು, ಬಿಬಿಎಂಪಿ ವಾರ್ಡ್ ಗಳಲ್ಲಿ 150 ಇಂಜಿನಿಯರ್ ಗಳ ನೇಮಕ, ಗುತ್ತಿಗೆ ಆಧಾರದಲ್ಲಿ ಸದ್ಯಕ್ಕೆ ಇಂಜಿನಿಯರ್ ಗಳ ನೇಮಕ, ಮೂರ್ನಾಲ್ಕು ತಿಂಗಳ ಬಳಿಕ ಇಂಜಿನಿಯರ್ ಗಳ ನೇಮಕಾತಿಗೆ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಅಶೋಕ್ ವಿವರಿಸಿದರು.

ಟಿಡಿಆರ್ ಸಮಸ್ಯೆ ಪರಿಹರಿಸಲು ಹೊಸ ಪಾಲಿಸಿ ಜಾರಿಗೆ ಮಾಡಲು ನಿರ್ಧಾರಿಸಲಾಗಿದ್ದು, ಅಮೃತ ನಗರೋತ್ಥಾನ ಯೋಜನೆಯಡಿ ಸಿಎಂ ಅಗತ್ಯ ಅನುದಾನ ಬಿಡುಗಡೆ ಮಾಡೋದಾಗಿ ತಿಳಿಸಿದ್ದಾರೆ ಎಂದು ಅಶೋಕ್ ಹೇಳಿದರು.




