PM Modi’s Convoy Stuck On Flyover In Punjab: ಪ್ರತಿಭಟನೆಯಿಂದ ಪ್ರಧಾನಿ ನರೇಂದ್ರ ಮೋದಿ ಫ್ಲೈಓವರ್ ನಲ್ಲಿಯೇ 20 ನಿಮಿಷ: ಭದ್ರತಾ ಲೋಪವೆಂದ ಕೇಂದ್ರ ಸರ್ಕಾರ

ಪಂಜಾಬ್ : ಪಂಜಾಬ್ ಪೊಲೀಸರ ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 20 ನಿಮಿಷ ನಡುರಸ್ತೆಯಲ್ಲೇ ಪ್ಲೈಓವರ್ ನಲ್ಲಿಯೇ ಕಾರಿನಲ್ಲೇ ಕುಳಿತು ಕಾಲ ಕಳೆಯಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿತ್ತು. ಅದಲ್ಲದೆ. ಅವರು ಪಾಲ್ಗೊಳ್ಳಬೇಕಾಗಿದ್ದ ಬಿಜೆಪಿ ಸಮಾವೇಶ ಕೂಡ ರದ್ದುಗೊಂಡಿತ್ತು.
ನರೇಂದ್ರ ಮೋದಿಯವರು ಪಂಜಾಬ್ ನಲ್ಲಿರುವ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡುವ ಉದ್ದೇಶದಿಂದ ಬಟಿಂಡಾಗೆ ಬಂದಿದ್ದರು. ಅವರು ಇಲ್ಲಿದ್ದ ಫಿರೋಜ್ ಪುರ್ ದಲ್ಲಿ ನಡೆಸಲು ಉದ್ದೇಶಿಸಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಬೇಕಾಗಿತ್ತು. ಹವಾಮಾನ ವೈಪರೀತ್ಯದ ಹಿನ್ನಲೆಯಲ್ಲಿ ಮೋದಿಯವರು ಕಾರಿನಲ್ಲಿಯೇ ತೆರಳಬೇಕಾಗಿತ್ತು.

ಆದರೆ ಅವರು ತೆರಳುತ್ತಿದ್ದ ರಸ್ತೆಯಲ್ಲಿ ದಿಢೀರ್ ಆಗಿ ನಾನಾ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಅದಷ್ಟೇ ಅಲ್ಲ ಅವರು ರಸ್ತೆ ತಡೆಯನ್ನೂ ಮಾಡಿದ್ದವು. ಇದರಿಂದ ಪ್ರಧಾನಿಯವರು ರಸ್ತೆಯಲ್ಲಿಯೇ ಕಾಲ ಕಳೆಯಬೇಕಾಯಿತು. ಇದಕ್ಕೆ ಭದ್ರತಾ ವೈಫಲ್ಯವೇ ಮುಖ್ಯ ಕಾರಣವಾಗಿತ್ತು. ಈ ಘಟನೆಗೆ ಬಿಜೆಪಿಯಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ನಾನು ಜೀವಂತವಾಗಿ ವಿಮಾನ ನಿಲ್ದಾಣ ತನಕ ಬಂದಿರುವುದಕ್ಕೆ ಪಂಜಾಬ್ ಮುಖ್ಯಮಂತ್ರಿ ಅವರಿಗೆ ಧನ್ಯವಾದಗಳನ್ನು ಹೇಳಿ ಎಂದು ಬಟಿಂಡಾ ವಿಮಾನನಿಲ್ದಾಣದಲ್ಲಿ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಪಂಜಾಬ್ ಪೊಲೀಸರನ್ನು ಮುಂದೆ ಬಿಟ್ಟು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸರ್ಕಾರ ಈ ರೀತಿ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕಿಡಿಕಾರಿದ್ದಾರೆ.

ಪಂಜಾಬ್ ಸರ್ಕಾರ ಬರಖಾಸ್ತು ಮಾಡಬೇಕು – ಸಿಎಂ ಬೊಮ್ಮಾಯಿ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಕ್ತ ಭದ್ರತೆ ಒದಗಿಸಲು ಸಾಧ್ಯವಾಗದ ಪಂಜಾಬ್ ಸರ್ಕಾರಕ್ಕೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ. ಹೀಗಾಗಿ ಪಂಜಾಬ್ ಸರ್ಕಾರವನ್ನು ಕೂಡಲೇ ಬರಖಾಸ್ತು ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.


ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ ಅವರು, ಪಂಜಾಬ್ ಗಡಿಯಲ್ಲಿ ಪಂಜಾಬ್ ಸರ್ಕಾರ ಪ್ರಧಾನಮಂತ್ರಿಗಳಿಗೆ ಭದ್ರತೆ ಕೊಡಲು ವಿಫಲವಾಗಿದೆ. ದೇಶದ ಪ್ರಧಾನಮಂತ್ರಿಗಳು ಮುಕ್ತವಾಗಿ ಓಡಾಡಲು ವ್ಯವಸ್ಥೆಗಳನ್ನು ಮಾಡಿಕೊಡದೇ ಇರುವುದು ಬಹುತೇಕವಾಗಿ ದೇಶದಲ್ಲಿ ಖಂಡನೆಯಾಗುತ್ತಿದೆ. ಇದೊಂದು ಖಂಡಾನಾರ್ಹ ವಿಚಾರ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿಗಳಿಗೆ ಗೌರವ ಕೊಡುವುದು ಎಲ್ಲ ಸರ್ಕಾರಗಳ ಕರ್ತವ್ಯ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮತ್ತು ಈ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆಯಾಗಬೇಕು ಎಂದು ಸಿಎಂ ಬೊಮ್ಮಾಯಿ ಆಗ್ರಹಿಸಿದ್ದಾರೆ.

More News