BJP Govt: ರಾಜ್ಯ ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿದರೆ ಇಬ್ಬರೇ ನಡೆಯುತ್ತೇವೆ: ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು : ಮೇಕೆದಾಟು ನಡಿಯನ್ನು ನಾವು ಕಾನೂನು ಚೌಕಟ್ಟಿನಲ್ಲಿ ನಿಯಮಗಳನ್ನು ಪಾಲಿಸಿ ನೀರಿಗಾಗಿ ನಡಿಗೆ ಮಾಡುತ್ತೇವೆ. ಒಂದು ವೇಳೆ ಸರ್ಕಾರ ಸಾರ್ವಜನಿಕರು ನಡಿಗೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡದಿದ್ದರೆ, ನಾನು ಹಾಗೂ ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರಲ್ಲದೆ, ನಿಷೇಧಾಜ್ಞೆ ಜಾರಿ ಮಾಡಿದರೆ, ನಾನು, ಸಿದ್ದರಾಮಯ್ಯನವರು, ರಾಮಲಿಂಗಾರೆಡ್ಡಿಯವರು ಹಾಗೂ ಧ್ರುವನಾರಾಯಣ ಅವರು ಮಾತ್ರ ನಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಹಾಗೂ ಜನರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷ ನೀರಿಗಾಗಿ ಜ. 9ರಿಂದ 19 ರವರೆಗೂ ನಡೆಯಲಿದ್ದು, ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಪಕ್ಷಬೇಧ ಮರೆತು, ಎಲ್ಲ ಪಕ್ಷದ ನಾಯಕರು, ಸಂಘಟನೆಗಳಿಗೆ ಆಹ್ವಾನ ನೀಡಿದ್ದು, ಜನರು ಕೂಡ ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ. ಈ ಮಧ್ಯೆ ರಾಜ್ಯ ಸರ್ಕಾರ ಹಾಗೂ ಕೆಲವು ಪಕ್ಷಗಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಅವರ ಅಸೂಯೆಗೆ ಮದ್ದಿಲ್ಲ. ನೀರಿಗಾಗಿ ನಡಿಗೆಗೆ ಜನ ತೋರುತ್ತಿರುವ ಉತ್ಸಾಹ ನೋಡಿ ಇದನ್ನು ತಡೆಯಲು ದೊಡ್ಡ ಪಿತೂರಿ ರೂಪಿಸಿ, ಕೋವಿಡ್ ನೆಪದಲ್ಲಿ ನಿರ್ಬಂಧ ಹಾಕಿದ್ದಾರೆ ಎಂದು ಆರೋಪಿಸಿದರು.


ರಾಜ್ಯದ ಆರೂವರೆ ಕೋಟಿ ಜನರಲ್ಲಿ 3 ಸಾವಿರ ಪ್ರಕರಣ ದಾಖಲಾಗಿದೆ ಎಂದು ಯಾವುದೇ ಕಾರ್ಯಕ್ರಮ, ಪ್ರತಿಭಟನೆ ನಡೆಯಬಾರದು ಎಂದು ನಿರ್ಬಂಧ ಹಾಕಿದ್ದಾರೆ. ಅವರು ಜ. 19 ರಂದು ಬೆಳಗೆ 5 ರವರೆಗೂ ಕರ್ಫ್ಯೂ ಹಾಕಿದ್ದಾರೆ. ಆ ಮೂಲಕ 19ರ ಸಾರ್ವಜನಿಕ ಸಭೆಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲಿಯವರೆಗೂ ವೀಕೆಂಡ್ ಕರ್ಫ್ಯೂ ಹಾಗೂ ನಿರ್ಬಂಧ ಹಾಕಿದ್ದಾರೆ ಎಂದರು.
ಹರಿಯೋ ನೀರು, ಬೀಸೋ ಗಾಳಿ, ಉದಯಿಸುವ ಸೂರ್ಯನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಪ್ರಕೃತಿ ನಿಯಮ ಎಂದು ಬಿಜೆಪಿ ನಾಯಕರು ಗಮನದಲ್ಲಿಟ್ಟುಕೊಳ್ಳಲಿ. ಹೀಗಾಗಿ ನಾವು ಘೋಷಿಸುರುವಂತೆ ನೀರಿಗಾಗಿ ನಡಿಗೆಗೆ ನಮ್ಮ ಮಾತಿಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಈ ನಿರ್ಬಂಧಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರ ಸ್ಥಿತಿ ನೋಡಿದರೆ ನಮ್ಮ ಹೊಟ್ಟೆ ಉರಿಯುತ್ತಿದೆ. ಕ್ಯಾಬ್ ಚಾಲಕರು, ಬೀದಿಬದಿ ವ್ಯಾಪಾರಿಗಳು, ವರ್ತಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಬದುಕಿಸುವ ಕೆಲಸ ಮಾಡಲಿ. ಇವರ ರಾಜಕೀಯಕ್ಕೆ ಸೋಂಕಿನ ಸಂಖ್ಯೆ ಹೆಚ್ಚಿಸಿ ನಿರ್ಬಂಧ ಹಾಕಿದ್ದಾರೆ. ರಾಜಕೀಯ ಬಿಟ್ಟು, ಜನರಿಗೆ ನೆರವಾಗಲಿ ಎಂದುಸಲಹೆ ನೀಡಿದರು.


ಕುಮಾರಣ್ಣ ಅವರು ವಿದ್ಯಾವಂತರು, ಬುದ್ಧಿವಂತರು, ಮೇಧಾವಿಗಳಿದ್ದಾರೆ. ಈಗ ಅವರ ಬಗ್ಗೆ ಮಾತಾಡುವುದಿಲ್ಲ. ಮಾತಾಡಲು ಬೇಕಾದಷ್ಟು ಸಮಯ ಇದೆ. ಅವರ ಸಂಪುಟದಲ್ಲಿ ನಾನು ನೀರಾವರಿ ಸಚಿವನಾಗಿ ಎಷ್ಟು ಬಾರಿ ಕೇಂದ್ರ ಸಚಿವರ ಭೇಟಿ ಮಾಡಿದ್ದೇನೆ, ಜತೆಗೆ ತಮಿಳುನಾಡು ಸಿಎಂ ಭೇಟಿ ಮಾಡಲು ಎಷ್ಟು ಪತ್ರ ಬರೆದು ಪ್ರಯತ್ನಿಸಿದ್ದೇನೆ., ಕೇಂದ್ರ ಸಚಿವರು ಉಭಯ ರಾಜ್ಯಗಳ ಸಚಿವರ ಸಭೆ ನಡೆಸಲು ಪ್ರಯತ್ನ ಪಟ್ಟ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ. ಅವರು ಮೈಲೇಜ್ ತೆಗೆದುಕೊಂಡು ಖುಷಿಪಡಲು ಮಾತನಾಡುತ್ತಿದ್ದಾರೆ, ಮಾತನಾಡಲಿ ಎಂದು ಉತ್ತರಿಸಿದರು.
ನಾವು ಕೇಂದ್ರ ಮತ್ತು ರಾಜ್ಯದಲ್ಲಿ ದೀರ್ಘ ಕಾಲ ಆಡಳಿತ ನಡೆಸಿದ್ದೇವೆ. ನಮಗೂ ನಮ್ಮದೇ ಆದ ಜವಾಬ್ದಾರಿ ಇದೆ. ಸರ್ಕಾರ ರೂಪಿಸಿರುವ ನಿಯಮಗಳನ್ನು ಮೀರುವುದು, ಕಾನೂನು ಕೈಗೆತ್ತಿಕೊಳ್ಳುವುದು ನಮ್ಮ ಉದ್ದೇಶವಾಗಿಲ್ಲ. ಹೀಗಾಗಿ ಮಾಸ್ಕ್ ಧರಿಸುವುದು, ಕನಿಷ್ಠ ಅಂತರ ಕಾಪಾಡಿಕೊಳ್ಳುವುದು, ಗ್ಲೌಸ್, ಸ್ಯಾನಿಟೈಸರ್ ಬಳಕೆ ಹೀಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಪಾದಯಾತ್ರೆ ಮಾಡುತ್ತೇವೆ ಎಂದು ವಿವರಿಸಿದರು.
ನಾವು ಪಾದಯಾತ್ರೆ ಮಾಡಿದರೆ ಈ ಸರ್ಕಾರ ಜನರೆದುರು ಬೆತ್ತಲಾಗಲಿದೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡಬಾರದು ಎಂದು ಸರ್ಕಾರ ಷಡ್ಯಂತ್ರ ರೂಪಿಸಿದೆ. ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ, ಇವರಲ್ಲಿ ಯಾರೊಬ್ಬರು ಕೂಡ ಕಳೆದ ಎರಡೂವರೆ ವರ್ಷಗಳಲ್ಲಿ ಒಮ್ಮೆಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಥವಾ ಕೇಂದ್ರದ ಜಲ ಸಂಪನ್ಮೂಲ ಸಚಿವರನ್ನು ಭೇಟಿಮಾಡಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯ ಮಾಡಿಲ್ಲ. ಕೇಂದ್ರ ಸರ್ಕಾರ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು ಯೋಜನೆಗಳನ್ನು ಒಳಗೊಂಡಂತೆ ಒಟ್ಟಾರೆ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ಬೆಂಗಳೂರು ನಗರದ 30% ಜನರಿಗೆ ಈಗಲೂ ಕಾವೇರಿ ನೀರು ಸಿಗುತ್ತಿಲ್ಲ, ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಿಗೂ ಕಾವೇರಿ ನೀರು ಒದಗಿಸಬೇಕು ಎಂದು ಕಾಂಗ್ರೆಸ್ ಪಕ್ಷ ಯೋಜನೆಗೆ ಮುಂದಡಿ ಇಟ್ಟಿತ್ತು. ಸುಮಾರು ಎರಡೂವರೆ ಕೋಟಿ ಜನರಿಗೆ ಅನುಕೂಲವಾಗುವಂತ ಇಂತಹ ಮಹತ್ವದ ಯೋಜನೆ ಜಾರಿ ಮಾಡದೆ ಸರ್ಕಾರ ಕಾಲಾಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಜಾರಿ ಮಾಡಬಾರದು ಎಂದು ಧರಣಿ ಕೂತಿದ್ದಾರೆ. ಬಿಜೆಪಿಯವರಿಗೆ ನಿಜವಾಗಿ ರಾಜ್ಯದ ಬಗ್ಗೆ ಕಾಳಜಿ ಇದ್ದಿದ್ದರೆ ಪ್ರತಿಭಟನೆ ಕೈಬಿಡುವಂತೆ ಅಣ್ಣಾಮಲೈ ಅವರ ಮನವೊಲಿಕೆ ಮಾಡುತ್ತಿದ್ದರು. ಅಣ್ಣಾಮಲೈ ಅವರ ಪ್ರತಿಭಟನೆಗೆ ರಾಜ್ಯ ಸರ್ಕಾರದ ಬೆಂಬಲವೂ ಇದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಹರಿಹಾಯ್ದರು.


ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ನಲ್ಲಿ ಚುನಾವಣಾ ರ‌್ಯಾಲಿಯಲ್ಲಿ ಭಾಗವಹಿಸುವವರಿದ್ದರು, ರೈತರ ಪ್ರತಿಭಟನೆ ಇಂದಾಗಿ ಸಭೆ ರದ್ದಾಯಿತು. ಒಂದು ವೇಳೆ ಯಾವುದೇ ತೊಂದರೆ ಆಗದೆ ಇದ್ದರೆ ಅವರು ಸಭೆ ಮಾಡುತ್ತಿರಲಿಲ್ಲವೇ? ಬಿಜೆಪಿ ಅವರು ಪ್ರಚಾರ ಸಭೆ ಮಾಡಿದರೆ ಕೊರೊನಾ ಬರೋದಿಲ್ವಾ? ನರೇಂದ್ರ ಮೋದಿ ಅವರಿಗೆ ಒಂದು ಕಾನೂನು ಬೇರೆ ಪಕ್ಷಗಳಿಗೆ ಒಂದು ಕಾನೂನು ಅಂತ ಇದೆಯಾ? ನರೇಂದ್ರ ಮೋದಿ ಅವರ ಪ್ರಚಾರ ಸಭೆಗಳಿಗೂ 144 ಸೆಕ್ಷನ್ ಅನ್ವಯವಾಗುತ್ತೋ ಇಲ್ಲವೋ? ಇದು ಬಿಜೆಪಿಯವರ ದ್ವಂದ್ವ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಸರ್ಕಾರದ ಕೊವಿಡ್ ನಿಯಮಗಳನ್ನು ಅನುಸರಿಸುತ್ತಾ, ಜನರ ಹಿತದೃಷ್ಟಿಯಿಂದ ಪಾದಯಾತ್ರೆ ಮಾಡಿ ಬಿಜೆಪಿಯವರ ಷಡ್ಯಂತ್ರವನ್ನು ಬಯಲು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

More News