ತುಮಕೂರು : ಕಾನೂನು ಸಚಿವ ಜೆ ಮಾಧುಸ್ವಾಮಿ ಅವರ ವಿರುದ್ಧ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿಎಸ್ ಬಸವರಾಜ್ ಅವರು ಮಾಡಿರುವ ಮಾತುಕತೆ, ಗುಸುಗುಸು ವೈರಲ್ ಆಗಿದೆ.
ನಮ್ಮ ಜಿಲ್ಲೆ ತುಮಕೂರನ್ನು ಹಾಳು ಮಾಡಿದ್ದಾನೆ, ಮಾತು ಎತ್ತಿದರೆ ಹೊಡಿ ಬಡಿ ಕಡಿ ಎಂದು ಹೇಳುತ್ತಾನೆ ಎಂದು ಸಂಸದ ಜಿ ಎಸ್ ಬಸವರಾಜು, ಸಚಿವ ಭೈರತಿ ಬಸವರಾಜು ಬಳಿ ಹೇಳಿದ ಹೇಳಿಕೆ ವೈರಲ್ ಆಗಿದೆ. ಇಬ್ಬರೂ ಮಾತನಾಡುವಾಗ ಯಾರ ಹೆಸರನ್ನು ಹೇಳಿಲ್ಲ. ಆದರೂ, ಸಚಿವ ಹಾಗೂ ಸಂಸದ ಇಬ್ಬರೂ ಸಚಿವ ಮಾಧುಸ್ವಾಮಿ ವಿರುದ್ಧ ಹೆಸರು ಹೇಳದೇ ಕಿಡಿಕಾರಿದ್ದಾರೆ.
ಚುನಾವಣೆಯಲ್ಲಿ ಜಿಲ್ಲೆಯಿಂದ ಬಿಜೆಪಿ ಒಂದೂ ಸೀಟು ಗೆದ್ದಿಲ್ಲ, ಅವನ್ಯಾರೋ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೇಳುತ್ತಾನೆ ಮೊನ್ನೆ ಮೊನ್ನೆ ಸಾವಿರ ಕೋಟಿ ರೂಪಾಯಿ ಅನುದಾನ ತಂದಿದ್ದಾನಂತೆ, ನಮಗೆ ಯಾರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಮಾಡಿದ್ದಾರೆ ಎಂದು ಗುಸು ಗುಸು ಮಾತನಾಡಿದ್ದಾರೆ. ಇವೆಲ್ಲವೂ ಸುದ್ದಿಗೋಷ್ಠಿ ವೇಳೆ ರೆಕಾರ್ಡ್ ಆಗಿದ್ದು, ಸಚಿವರ ವಿರುದ್ಧ ಇರುವ ಅಸಮಾಧಾನ ಬಹಿರಂಗಗೊಂಡಿದೆ.
ನಂತರ ಕಾರ್ಯಕ್ರಮದಲ್ಲಿ ಸಚಿವ ಮಾಧುಸ್ವಾಮಿ, ಸಚಿವ ಭೈರತಿ ವಿರುದ್ಧ ಅಸಮಾಧಾನ ಹೊರಹಾಕಿ, ವೇದಿಕೆಯಿಂದ ಹೊರನಡೆದ ಘಟನೆ ನಡೆದಿದೆ. ಭೈರತಿ ಅವರು ಸಚಿವರು ಹಾಗೂ ವೇದಿಕೆ ಮೇಲಿದ್ದ ಗಣ್ಯರು ಪದೇ ಪದೇ ಮಾಡಿದ ಮನವಿಯನ್ನು ಲೆಕ್ಕಿಸದೇ ಮಾಧುಸ್ವಾಮಿ ಅವರು ಕಾರ್ಯಕ್ರಮದಿಂದ ಹೊರನಡೆದರು.
ಈ ಘಟನೆಯಿಂದ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ, ಸಂಸದ ಹಾಗೂ ಸಚಿವರ ನಡುವೆ ಯಾವುದೇ ಹೊಂದಾಣಿಕೆ ಇಲ್ಲದೆ ಇರುವುದು ಇದರಿಂದ ಸಾಭೀತಾಗಿದೆ.
ಇಂದು ಸಚಿವ ಬೈರತಿ ಬಸವರಾಜ್ ಜಿಲ್ಲೆಗೆ ಭೇಟಿ ನೀಡಿದ್ದರು. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಹಲವಾರು ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮುನ್ನ ಸಚಿವ ಭೈರತಿ ಬಸವರಾಜ್ ಸುದ್ದಿಗೋಷ್ಠಿ ಏರ್ಪಡಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಸಂಸದ ಜಿಎಸ್ ಬಸವರಾಜ್ ಕೂಡ ಭಾಗಿಯಾಗಿದ್ದರು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಜಿಎಸ್ ಬಸವರಾಜ್ ಹಾಗೂ ಭೈರತಿ ಬಸವರಾಜ್ ಗುಸು ಗುಸು ಮಾತನಾಡಿಕೊಂಡಿದ್ದಾರೆ. ಹೆಸರು ಹೇಳದೇ ಸಂಸದ ಬಸವರಾಜ್, ಭೈರತಿ ಬಸವರಾಜ್ ಜೊತೆ ಮಾಧುಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




