ಬೆಂಗಳೂರು : ಸರ್ಕಾರದ ಕಾನೂನು ಪಾಲನೆ ಮಾಡದ ಪಕ್ಷಕ್ಕೆ ವಿರೋಧ ಪಕ್ಷ ಅಂತ ಕರೆಯಲಿಕ್ಕಾಗುತ್ತಾ? ಮುಂದೊಂದು ದಿನ ಅವರೇ ಆಡಳಿತ ಮಾಡಿದಾಗ, ವಿಪಕ್ಷಗಳು ಛೀಮಾರಿ ಹಾಕಿದಾಗ ಇವ್ರಿಗೆ ಹೇಗೆ ಅನ್ಸುತ್ತೆ? ಇದರ ಕನಿಷ್ಟ ತಿಳುವಳಿಕೆ ಅವರಿಗೆ ಇರಬೇಕಿತ್ತು ಎಂದು ಆರೋಗ್ಯ ಸಚಿವ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವ್ರು ಕುದುರೆ ರೇಸ್ ಆದರೂ ಮಾಡಲಿ, ಮ್ಯಾರಥಾನ್ ಆದರೂ ಮಾಡಲಿ, ಈಗಾಗಲೇ ಅವರು ಜಟಕಾ ಗಾಡಿ, ಎತ್ತಿನ ಗಾಡಿ, ಸೈಕಲ್ ನಲ್ಲಿ ಹೋಗಿದಾರೆ, ಈಗ ರೈಲಲ್ಲಾದರೂ ಹೋಗಲಿ, ಬಸ್ ನಲ್ಲಾದರೂ ಹೋಗಲಿ, ಟ್ರೆಕ್ಕಿಂಗ್ ಮಾಡಲಿ, ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು, ಮಾಡೋದನ್ನು ಮಾಡಲಿ, ಸಮಯ ನೋಡಿ ಮಾಡಲಿ ಎಂದು ಸುಧಾಕರ್ ಕಾಂಗ್ರೆಸ್ ನಾಯಕರ ಕಾಲೆಳೆದರು.
ರಾಜ್ಯದಲ್ಲಿ ಪಾಸಿಟಿವಿಟ್ ದರ 2% ಸಹ ಇಲ್ಲ, ಸರ್ಕಾರದ್ದು ಸುಳ್ಳು ಲೆಕ್ಕ ಎಂಬ ಡಿಕೆಶಿವಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಬಗ್ಗೆ ಡಿಕೆಶಿ ಅವರಿಗೆ ಮಾಹಿತಿಯ ಕೊರತೆ ಇದೆ, ಡಿಕೆಶಿ ಆರೋಪಕ್ಕೆ ನಾನು ಏನೂ ಮಾತಾಡಲ್ಲ, ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

ಇಡೀ ವಿಶ್ವದಲ್ಲಿ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕಲು ಹೋಗಿಲ್ಲ, ಎಲ್ಲ ಕಡೆಯೂ ವಿಪಕ್ಷಗಳು ಸರ್ಕಾರದ ಜತೆ ಕೈ ಜೋಡಿಸಿವೆ, ನಮ್ಮಲ್ಲಿ ಮಾತ್ರ ವಿಪಕ್ಷ ಕಾಂಗ್ರೆಸ್, ರಾಜಕಾರಣ ಮಾಡುತ್ತಿವೆ, ಇಂಥ ಸಮಯದಲ್ಲಿ ರಾಜಕಾರಣ ಸರಿಯಲ್ಲ, ಕಾಂಗ್ರೆಸ್ ಪಾದಯಾತ್ರೆ ದುರದೃಷ್ಟಕರ ಎಂದು ಹೇಳಿದರು.
ವೀಕೆಂಡ್ ಕರ್ಫ್ಯೂ ವಿಧಿಸಿರುವುದು ಜನರಿಗೆ ಹೊಸ ಪ್ರಭೇದ ಹರಡದಂತೆ, ಜನರಲ್ಲಿ ಒಂದು ಶಿಸ್ತು ಬರಲಿ ಅಂತಾ ಮಾಡಿದ್ದೇವೆ, ಇದೇನೂ ಲಾಕ್ ಡೌನ್ ಅಲ್ಲ, ಆದಷ್ಟು ಜನರು ಎರಡು ದಿನ ಮನೆಯಲ್ಲಿ ಇದ್ದು ಮಾರ್ಗಸೂಚಿ ಪಾಲಿಸಿದರೆ ನಿಯಂತ್ರಣ ಆಗಬಹುದು ಎಂದು ವಿವರಿಸಿದರು.

ಬೆಂಗಳೂರಿನಲ್ಲಿ 7.55% ಪಾಸಿಟಿವಿಟಿ ದರ ಇದೆ, ಐದಾರು ಜಿಲ್ಲೆಗಳಲ್ಲಿ ಕೇಸ್ ಗಳ ಸಂಖ್ಯೆ ಜಾಸ್ತಿ ಆಗ್ತಿದೆ, ಮೊದಲನೇ, ಎರಡನೇ ಅಲೆಗಳಲ್ಲಿ ನಾವು ಬಹಳ ಅನುಭವಿಸಿದ್ದೇವೆ. ಎಲ್ಲಾ ತಿಳಿದೂ ಯಾವ ಕ್ರಮ ಕೂಡಾ ತೆಗೆದುಕೊಳ್ಳದೇ ಇರೋದು ಸರಿಯಲ್ಲ. ಹಾಗಾಗಿ ಮೊದಲಿನಿಂದಲೇ ನಿಯಂತ್ರಣ ಮಾಡಬೇಕು ಅಂತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದುಸ್ಪಷ್ಟಪಡಿಸಿದರು.




