ಕಾಂಗ್ರೆಸ್ ಪಾದಯಾತ್ರೆ ತಾತ್ಕಾಲಿಕ ಸ್ಥಗಿತ: ಕೊರೊನಾ ಕಡಿಮೆಯಾದ ಬಳಿಕ ಮತ್ತೆ ಆರಂಭ: ಸಿದ್ದರಾಮಯ್ಯ

ರಾಮನಗರ: ಜನರಿಗೆ ತೊಂದರೆ ಆಗಬಾರದು, ಜನರ ಆರೋಗ್ಯ ದೃಷ್ಠಿಯಿಂದ ಪಾದಯಾತ್ರೆಯನ್ನ ಮೊಟಕುಗೊಳಿಸಿ, ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಕೊರೋನಾ ಕಡಿಮೆಯಾದ ಬಳಿಕ ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಮಾಡುತ್ತೇವೆ. ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳುವುದು ಬೇಡಿ. ಮುಂದೆಯೂ ಇದೇ ಉತ್ಸಾಹದಲ್ಲಿ ಪಾದಯಾತ್ರೆ ಮಾಡೋಣ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ರಾಮನಗರದಲ್ಲಿ ಇಂದು ಸುಧೀರ್ಘವಾಗಿ ಪಕ್ಷದ ಮುಖಂಡರುಗಳ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ಹೋರಾಟದಿಂದ ನಾವು ಹಿಂದೆ ಸರಿಯಲ್ಲ. ಪಾದಯಾತ್ರೆ ಮತ್ತೆ ಮಾಡುತ್ತೇವೆ, ಪಾದಯಾತ್ರೆ ಎಲ್ಲಿ ನಿಂತಿದೆ ಅಲ್ಲಿಂದಲೇ ಮಾಡುತ್ತೇವೆ. ಪಾದಯಾತ್ರೆ ಎಲ್ಲಿ ಅಂತ್ಯಗೊಳ್ಳಬೇಕೋ ಅಲ್ಲೇ ಅಂತ್ಯಗೊಳ್ಳುತ್ತದೆ. ಎಲ್ಲರೂ ಒಟ್ಟಾಗಿ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆಗೆ ಬಹಳ ಉತ್ಸಹದಿಂದ ಬಾಗವಹಿಸಿದ್ದಿರಿ ಪಾದಯಾತ್ರೆಗೆ ಬಹಳ ಅಭೂತಪೂರ್ವ ಯಶಸ್ಸು ತಂದಿದ್ದೀರಿ. ಕೊರೋನಾ ಹೆಚ್ಚಾಗಲು ಕಾಂಗ್ರೆಸ್ ಕಾರಣ ಅಲ್ಲ. ಕೊರೊನಾ 3ನೇ ಅಲೆ ಸ್ಪೋಟಕ್ಕೆ ಕಾಂಗ್ರೆಸ್ ಕಾರಣವಲ್ಲ. ಬಿಜೆಪಿಯೇ ಕೊರೋನಾ ಹೆಚ್ಚಾಗಲು ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ಕೊರೋನಾ 3ನೇ ಅಲೆ ಶುರುವಾದರೂ ಸಿಎಂ ಯಾವ ಸಭೆಯನ್ನೂ ನಿಲ್ಲಿಸಲಿಲ್ಲ. ನೂತನ ಎಂಎಲ್ ಸಿ ಪ್ರಮಾಣವಚನ ಸ್ವೀಕಾರ ಸಮಾರಂಭ ಮಾಡಿದರು ಮೂರರಿಂದ ನಾಲ್ಕು ಸಾವಿರ ಜನ ಸೇರಿಸಿದ್ದರು. ಗೃಹ ಸಚಿವರ ಕ್ಷೇತ್ರದಲ್ಲೇ ಜಾತ್ರೆ ನಡೆಯಿತು. ರೇಣುಕಾಚಾರ್ಯ ಜಾತ್ರೆ ಮಾಡಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮ ಇಲ್ಲ. ಯಾರ ಮೇಲೂ ಕೇಸ್ ಹಾಕಲಿಲ್ಲ. ಆದರೆ ಕಾಂಗ್ರೆಸ್ ಪಾದಯಾತ್ರೆ ತಡೆಯುವ ಉದ್ಧೇಶ ಸರ್ಕಾರಕ್ಕೆ ಇತ್ತು ಎಂದು ಕಿಡಿಕಾರಿದರು.
ಕಳೆದ ನಾಲ್ಕು ದಿನಗಳಿಂದ ನಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯಲು ಕಾರಣೀಕರ್ತರಾದಂತಹ ಪಕ್ಷದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೂ, ಸಂಘ ಸಂಸ್ಥೆಗಳ ಸದಸ್ಯರಿಗೂ, ಚಿತ್ರ ರಂಗದ ಕಲಾವಿದರಿಗೂ, ಮಾಧ್ಯಮ ಮಿತ್ರರಿಗೂ ಹಾಗೂ ಜನಪರ ಕಾಳಜಿಯಿಂದ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಇದೇ ಸಂದರ್ಭದಲ್ಲಿ ಅರ್ಪಿಸಿದರು.


ನಾವು ಪಾದಯಾತ್ರೆ ಘೋಷಣೆ ಮಾಡಿದಾಗ ಕೊರೊನಾ 3ನೇ ಅಲೆ ಆರಂಭವಾಗಿರಲಿಲ್ಲ. ವಿಧಾನಸಭಾ ಅಧಿವೇಶನಕ್ಕೂ ಮೊದಲೇ ಪಾದಯಾತ್ರೆ ಘೋಷಣೆ ಆಗಿತ್ತು. ಆದರೆ ಈಗ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಆರಂಭವಾಗಿದೆ. ನಿನ್ನೆ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಇಂದು ರಾಮನಗರದಿಂದ ಪಾದಯಾತ್ರೆ ಆರಂಭವಾಗಬೇಕಿತ್ತು, ಆದರೆ ಕೊರೊನಾ ಸೋಂಕು ತಡೆಗಟ್ಟಲು ನಮಗಿರುವ ಜವಾಬ್ದಾರಿಯನ್ನು ಅರಿತು ನಾವು ಪಾದಯಾತ್ರೆಯನ್ನು ಶುರು ಮಾಡಿಲ್ಲ, ಬಿಜೆಪಿ ನಾಯಕರ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ, ಆದರೆ ಕಾಂಗ್ರೆಸ್ ಪಕ್ಷದವರ ಮೇಲೆ ಮಾತ್ರ ಸುಳ್ಳು ಸುಳ್ಳು ಕೇಸ್ ಹಾಕಿ, ಎಫ್.ಐ.ಆರ್ ದಾಖಲಿಸಿ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೇಗಾದರೂ ಮಾಡಿ ಪಾದಯಾತ್ರೆಯನ್ನು ನಿರ್ಬಂಧಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಒಟ್ಟಾರೆ ಸರ್ಕಾರ ಕೊವಿಡ್ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ ಎಂದು ಆರೋಪಿಸಿದರು.


ಜನರ ಆರೋಗ್ಯದ ಕಾಳಜಿ ನಮಗೂ ಇದೆ, ನಮ್ಮ ಪಾದಯಾತ್ರೆಯಿಂದ ಕೊರೊನಾ ಸೋಂಕು ಉಲ್ಬಣವಾಯಿತು ಎಂಬ ತಪ್ಪು ಅಭಿಪ್ರಾಯ ಜನರಲ್ಲಿ ಬರಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು 15 ಸಾವಿರದ ಗಡಿ ದಾಟಿದೆ, ಇನ್ನೆರೆಡು ದಿನಗಳಲ್ಲಿ ನಮ್ಮ ಪಾದಯಾತ್ರೆ ಬೆಂಗಳೂರು ಪ್ರವೇಶ ಮಾಡುವುದಿತ್ತು, ಸೋಂಕು ಹೆಚ್ಚಿರುವ ಕಾರಣ ತಾತ್ಕಾಲಿಕವಾಗಿ ನಮ್ಮ ಪಾದಯಾತ್ರೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ. 3ನೇ ಅಲೆಯ ತೀವ್ರತೆ ಕಡಿಮೆಯಾಗಿ, ಕೊವಿಡ್ ಮಾರ್ಗಸೂಚಿಗಳು ತೆರವಾದ ಬಳಿಕ ಮತ್ತೆ ರಾಮನಗರದಿಂದಲೇ ಪಾದಯಾತ್ರೆಯನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಎಐಸಿಸಿ ಸೂಚನೆ ಹಿನ್ನೆಲೆಯಲ್ಲಿ ಪಾದಯಾತ್ರೆ ರದ್ದು
ಕೊರೊನಾ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮೊಟಕುಗೊಳಿಸಲು ಎಐಸಿಸಿ ಸೂಚನೆ ನೀಡಿತ್ತು ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕರಿಗೆ ದೂರವಾಣಿ ಕರೆ ಮಾಡಿ ಮೊಟಕುಗೊಳಿಸಲು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಇಂದಿಗೆಕೈಬಿಟ್ಟು, ಕೊರೊನಾ ನಿಯಮಗಳು ಸಡಿಲಗೆಂಡ ನಂತರ ಮತ್ತೆ ಮುಂದುವರೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.

More News