ಬೆಂಗಳೂರು : ಹೋಟೆಲ್ ಉದ್ಯಮಿಗಳು ವೀಕೆಂಡ್ ಕರ್ಫ್ಯೂ ಬೇಡ ಎಂದು ವಿರೋಧ ಮಾಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೊಮ್ಮೆ ಸಭೆ ಸೇರಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಕೆಂಡ್ ಡೋಸ್ ಗೆ ಇನ್ನಷ್ಟು ವೇಗ ತುಂಬಲು ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು ಎಂದು ಹೇಳಿದರು. ಜನರಿಗೆ ಪಾಸಿಟಿವ್ ಬಂದು ಹೋಂ ಐಸೋಲೇಷನ್ ನಲ್ಲಿರೋರ ಮೇಲೆ ಹೆಚ್ಚು ನಿಗಾ ಇಡಲು ಸೂಚಿಸಲಾಗಿದ್ದು. ಸ್ವಯಂ ಸೇವಾ ಸಂಘಗಳು, ಸಂಸ್ಥೆಗಳ ನೆರವು ಪಡೆದು ಜನರಿಗೆ ಜಾಗೃತಿ, ಕಿಟ್ ಹಂಚಲು ಸೂಚಿಸಲಾಗಿದೆ ಎಂದು ಹೇಳಿದರು.
ಔಷಧಿ ಕಿಟ್ ಗಳನ್ನು ಹೋಂ ಐಸೋಲೇಷನ್ ನಲ್ಲಿರೋರಿಗೆ ತಲುಪಿಸಬೇಕು, ಗ್ರಾಮೀಣ ಭಾಗಗಳ ಕಡೆ ನಿಗಾ ಇಡಬೇಕು, ಐಸಿಎಂಆರ್ ಸೂಚಿಸಿರುವ ಪರೀಕ್ಷೆಗಳನ್ನು ಮುಂದುವರೆಸಲಾಗುವುದು, ಮಾಸ್ಕ್ ಗಳನ್ನು ಧರಿಸುವ ಬಗ್ಗೆ ಹೆಚ್ಚು ಪ್ರಚಾರಕ್ಕೆ ಸೂಚನೆ ನೀಡಲಾಗಿದೆ ಎಂದರು.
ಹೆಚ್ಚು ಟೆಸ್ಟಿಂಗ್ ನಮ್ಮಲ್ಲಿ ಆಗ್ತಿದೆ, ಹೀಗಾಗಿ ಹೆಚ್ಚು ಕೇಸ್ ಗಳು ಬರ್ತಿವೆ, 0-15 ವರ್ಷದ ಮಕ್ಕಳ ಮೇಲೂ ನಿಗಾ ವಹಿಸಲಾಗಿದೆ, ಮಕ್ಕಳಲ್ಲಿ ಸೋಂಕು ತೀವ್ರತೆ ಹೆಚ್ಚು ಇಲ್ಲ ಎಂದು ವಿವರಿಸಿದರು.
ಸಭೆಯಲ್ಲಿ ಕೈಗೊಂಡ ಇನ್ನಿತರ ನಿರ್ಣಯಗಳು
ಓಮಿಕ್ರಾನ್ ಸೋಂಕಿತರಿಗೆ ಹೆಚ್ಚು ಹೆಚ್ಚಾಗಿ ಹೋಮ್ ಐಸೊಲೇಷನ್ ಮಾಡಲು ಸಭೆಯಲ್ಲಿ ಸೂಚಿಸಲಾಗಿದೆ, ಕೊ-ಮಾರ್ಬಿಡಿಟಿ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಬೇಕು ಹಾಗೂ ವಿಶ್ವಾಸ ಮೂಡಿಸುವ ಕೆಲಸವಾಗಬೇಕು.
ಜನ ಟ್ರಯಾಜಿಂಗ್ ಗೆ ದಾಖಲಾಗುವುದನ್ನು ನಿಯಂತ್ರಿಸಲು ಸಲಹೆ ಪಡೆಯಲಾಗಿದೆ, ಅಂತೆಯೆ ಮನೆಯವರಿಗೆ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಲಾಗಿದೆ, ಔಷಧಿ ಕಿಟ್ ಗಳನ್ನು ಮನೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸೂಚಿಸಲಾಗಿದೆ.
ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಜನರಲ್ಲಿರುವ ನಕಾರಾತ್ಮಕ ಮನೋಭಾವವನ್ನು ತೊಡೆದುಹಾಕಬೇಕು, ಸ್ಥಳೀಯ ವೈದ್ಯರು ಕನ್ಸಲ್ಟೇಷನ್ ಮಾಡುವಂತಾಗಬೇಕು, ಸೋಂಕಿತ ಮಕ್ಕಳ ಕುರಿತು, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಪೋಷಕರಿಗೆ ಧೈರ್ಯ ಹೇಳಬೇಕು. ಔಷಧಿ ಕಿಟ್ ಗಳನ್ನು ನೀಡಬೇಕು. ಮಕ್ಕಳಿಗೆ ಪ್ರತ್ಯೇಕ ಔಷಧಿ ಕಿಟ್ ಸಿದ್ಧಪಡಿಸಬೇಕು.
ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು, ಆಕ್ಸಿಜನ್ ಪ್ಲಾಂಟ್ ಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ, ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳಬೇಕು, ಆಸ್ಪತ್ರೆಗಳಲ್ಲಿ ಜನರೇಟರುಗಳ ವ್ಯವಸ್ಥೆ ಮಾಡಿಕೊಳ್ಳಬೇಕು, ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ ನಿಗಾ ವಹಿಸಬೇಕು, ಲಸಿಕೆ ಅಭಿಯಾನ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಔಷಧಿಗಳನ್ನು ಕೂಡಲೇ ಒದಗಿಸಬೇಕು. ಅವುಗಳನ್ನು ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲು ಕ್ರಮ ವಹಿಸಬೇಕು, ಜನರು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಬೇಕು, ಭಾರತ ಸರ್ಕಾರದ ನಿಯಮಾವಳಿಗಳಂತೆ ಐ.ಸಿ.ಎಂ.ಆರ್ ಸೂಚಿಸಿರುವ ಶ್ರೇಣೀಕೃತ ಮಾದರಿಯಲ್ಲಿ ಪರೀಕ್ಷೆ ನಡೆಸಲು ಅನುಸರಿಸಲು ಸೂಚಿಸಲಾಗಿದೆ.
ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒ ಗಳೊಂದಿಗೆ ವಿಡಿಯೋ ಸಂವಾದ ನಡೆಸಲು ನಿರ್ಧರಿಸಲಾಯಿತು. 15 ರಿಂದ 18 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲು ಸೂಚಿಸಲಾಯಿತು.




