ಚನ್ನೈ: ತಮಿಳು ಚಿತ್ರರಂಗದ ಯಶಸ್ವಿ ನಟ ಧನುಷ್ ಹಾಗೂ ಮೇರುನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತು ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಇಬ್ಬರೂ ಬೇರೆ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಘೋಷಿಸಿದ್ದಾರೆ. ಇವರಿಗೆ ಯಾತ್ರಾ ಮತ್ತು ಲಿಂಗಾ ಎಂಬ ಇಬ್ಬರು ಪುತ್ರರಿದ್ದಾರೆ.

18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜತೆಗಿದ್ದೆವು. ಈ ದಾರಿಯಲ್ಲಿ ನಾವಿಬ್ಬರೂ ಬೆಳೆದಿದ್ದೇವೆ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜತೆ ಜತೆಯಲ್ಲಿದ್ದೇವು. ಇದೀಗ ನಾವಿಬ್ಬರೂ ಬೇರೆ ಬೇರೆ ಹಾದಿಯಲ್ಲಿ ನಿಂತಿದ್ದೇವೆ, ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ. ಇಬ್ಬರ ಖಾಸಗಿತನವನ್ನು ಗೌರವಿಸಬೇಕೆಂದು ಧನುಷ್ ಮನವಿ ಮಾಡಿ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡು, ಓಂ ನಮ ಶಿವಾಯ ಎಂದು ತಮ್ಮ ಬರವಣಿಗೆಯನ್ನು ಅಂತ್ಯಗೊಳಿಸಿದ್ದಾರೆ.

ನಟ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ, ವೃತ್ತಿಯಲ್ಲಿ ನಿರ್ದೇಶಕಿ ಹಾಗೂ ಗಾಯಕಿಯಾಗಿರುವ ಅವರು ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2004 ನವೆಂಬರ್ ನಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿಮ್ಮ ಸಹಕಾರ ಮತ್ತು ಪ್ರೀತಿ ಹೀಗೆಯೇ ಮುಂದುವರೆಯಲಿ ಎಂದು ಐಶ್ವರ್ಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.






