ನಟ, ನಿರ್ಮಾಪಕ, ನಿರ್ದೇಶಕ ದುನಿಯಾ ವಿಜಯ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ವಿಜಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸಿನೆಮಾ ಕಲಾವಿದರು ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದಾರೆ. ಆದರೆ, ದುನಿಯಾ ವಿಜಿ ತಮ್ಮ ಅಭಿಮಾನಿಗಳಿಗೆ ಮಾತ್ರ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ನಾನು ಈ ಬಾರಿಯೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ನೀವು ಮನೆಯಲ್ಲಿಯೇ ಇದ್ದು ನನಗೆ ಶುಭ ಹಾರೈಸಿ, ಮನೆ ಹತ್ತಿರ ಯಾರೂ ಬರಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ದುನಿಯಾ ವಿಜಿ ಮನವಿ ಮಾಡಿಕೊಂಡಿದ್ದಾರೆ. ತಂದೆ ತಾಯಿ ಅವರ ನಿರ್ಗಮನ ಮತ್ತು ಅಪ್ಪು ಅವರ ನಿಧನ ನನ್ನನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ಹುಟ್ಟುಹಬ್ಬ ಆಚರಣೆ ಮಾಡುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ದುನಿಯಾ ವಿಜಿ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗೆ ನಮಸ್ಕಾರ. ಇಡೀ ಜಗತ್ತು ಸಂಕಷ್ಟದಲ್ಲಿರುವ ಸಮಯವಿದು. ಇಂಥಾ ಸಮಯದಲ್ಲಿ ನನಗೊಂದು ಅಭೂತಪೂರ್ವ ಗೆಲುವನ್ನು ನೀವೆಲ್ಲರೂ ಕೊಟ್ಟಿದ್ದೀರಾ ? ನನ್ನ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಬೇಕು ಎಂಬ ಆಸೆ ನಿಮಗೂ, ನನಗೂ ಇದೆ.

ನಾನೂ ನಿಮ್ಮನ್ನೆಲ್ಲ ಹುಟ್ಟುಹಬ್ಬದ ದಿನ ಭೇಟಿಯಾಗಬೇಕು ಎಂದುಕೊಂಡಿದ್ದೆ, ಆದರೆ ಕಳೆದ ನಾಲ್ಕು ದಶಕಗಳಿಂದ ನನ್ನನ್ನು ಸಾಕಿ ಸಲಹಿದ ನನ್ನಮ್ಮ, ಅಪ್ಪ ಈ ವರ್ಷ ವಿಧಿಯಾಟಕ್ಕೆ ಬಲಿಯಾದರು. ಆತ್ಮೀಯರಾದ ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಬಿಟ್ಟು ಹೋದರು, ಈ ನೋವುಗಳನ್ನು ಇಟ್ಟುಕೊಂಡು ನಾನು ಹುಟ್ಟುಹಬ್ಬ ಹೇಗೆ ಸಂಭ್ರಮಿಸಲಿ. ಜೊತೆಗೆ ಕೋವಿಡ್ ಕೇಸ್‌ಗಳು ಹೆಚ್ಚಾಗುತ್ತಿರುವುದರಿಂದ ನಿಮ್ಮೆಲ್ಲರ ಆರೋಗ್ಯ ಗಮನದಲ್ಲಿಟ್ಟುಕೊಂಡು ನಾನು ಈ ವರ್ಷ ಹುಟ್ಟುಹಬ್ಬ ಆಚರಿಸೋದಿಲ್ಲ. ಆ ದಿನ ಮನೆಯಲ್ಲಿ ಇರೋದಿಲ್ಲ. ಯಾರೂ ಮನೆಯ ಕಡೆ ಬರಬೇಡಿ ಎಂದು ವಿಜಯ್ ಬರೆದುಕೊಂಡಿದ್ದಾರೆ.




