ತುಮಕೂರು: ಸಚಿವ ಸಂಪುಟ ಪುನಾರಚನೆ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಿ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹತ್ವದ ಬೆಳವಣಿಗೆ ಅದು ಯಾವ ರೀತಿಯಲ್ಲೂ ಆಗಬಹುದು, ಸಚಿವ ಸ್ಥಾನ ಸಿಗದಿದ್ದಾಗ ಪಕ್ಷ ಬಿಟ್ಟು ಹೋಗೋರು ಇದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸೇರಲು ಬಿಜೆಪಿಯ ಹಲವು ಶಾಸಕರು- ಸಚಿವರು ತಯಾರಿದ್ದಾರೆ, ಬಿಜೆಪಿಗೆ ವಲಸೆ ಹೋದವರು, ಮೂಲ ಬಿಜೆಪಿಯವರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ, ಕೆಪಿಸಿಸಿ ಅಧ್ಯಕ್ಷರ ಬಳಿ ಕಾಂಗ್ರೆಸ್ ಗೆ ಸೇರುವವರ ಪಟ್ಟಿ ಇದೆ, ತುಮಕೂರು ಜಿಲ್ಲೆಯಲ್ಲಿ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ತಿಳಿಸಿದರು.
ಸಚಿವ ಮಾಧುಸ್ವಾಮಿ ಸಮರ್ಥ ನಾಯಕ
ಸಚಿವ ಮಾಧುಸ್ವಾಮಿ ಒಬ್ಬ ಸಮರ್ಥ ನಾಯಕ, ಬಿಜೆಪಿ ಸರ್ಕಾರದ ಒಬ್ಬ ಕ್ರೀಯಾಶೀಲ ಸಚಿವ, ತುಮಕೂರು ಜಿಲ್ಲಾ ಉಸ್ತುವಾರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರನ್ನು ಜಿಲ್ಲೆಯ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದು ನಮಗೆ ನಿರಾಸೆಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಮಾಧುಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ. ಮಾಧುಸ್ವಾಮಿ ಅವರನ್ನು ಉಸ್ತುವಾರಿಯಿಂದ ತೆಗೆದಿರುವುದು ತುಮಕೂರು ಜಿಲ್ಲೆಯ ಜನತೆಗೆ ನಷ್ಟವಾಗಿದೆ ಎಂದು ಹೇಳಿದರು.
ಮಾಧುಸ್ವಾಮಿ ಅವರು ಸ್ವಲ್ಪ ಕೋಪಿಷ್ಟರಾಗಿರಬಹುದು, ಆದರೆ ಸಮರ್ಥ ನಾಯಕ, ಇದು ಬಿಜೆಪಿ ಸರ್ಕಾರದಿಂದ ತುಮಕೂರು ಜನತೆಗೆ ಮಾಡಿದ ಅನ್ಯಾಯ ಎಂದು ಜಿ.ಪರಮೇಶ್ವರ ಹೇಳಿದ್ದಾರೆ.




