ಸಚಿವ ಸ್ಥಾನ ಬೇಕು, ಸಿಎಂ ಹಾಗೂ ರಾಜ್ಯಾಧ್ಯಕ್ಷ ಹಾಗೂ ಸಂಘಕ್ಕೂ ಮನವಿ ಮಾಡಿದ್ದೇನೆ: ಆನಂದ್ ಮಾಮನಿ ಆಗ್ರಹ

ಬೆಂಗಳೂರು : ಬಿಜೆಪಿ ಸರ್ಕಾರದಲ್ಲಿ ಇದೀಗ ಎಲ್ಲಾವೂ ಅಯೋಮಯ. ನಿಗಮ ಮಂಡಳಿ ಪುನರ್ ರಚನೆ ಮುಂದಾದರೆ ಅಲ್ಲಿಯೂ ಅಪಸ್ವರ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೊ ಬಿಜೆಪಿಯಲ್ಲಿ ಬಂಡಾಯದ ಮಾತುಗಳು ಕೇಳಿಬರುತ್ತಿವೆ.
ಅನೇಕ ಹಿರಿಯ ಶಾಸಕರು ತಮಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ಅವರು ಬಹಿರಂಗವಾಗಿಯೇ ತಮಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಅಸಮಾಧಾನಿತರ ಗುಂಪು ಶಾಸಕ ರೇಣುಕಾಚಾರ್ಯ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ ಸಾಕಷ್ಟು ಸಭೆ ನಡೆಸಿ ಮುಖ್ಯಮಂತ್ರಿ ಮತ್ತು ಹಿರಿಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೊನೆಗೆ ಮುಖ್ಯಮಂತ್ರಿ ಅವರು ಪುನರ್ ರಚನೆ ಸಂದರ್ಭ ಬಂದಾಗ ಯಾರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ.
ನನಗೆ ಸಚಿವ ಸ್ಥಾನ ಬೇಕೇ ಬೇಕು, ಸಿಎಂ ಹಾಗೂ ರಾಜ್ಯಾಧ್ಯಕ್ಷರಿಗೂ ನಾನು ಮನವಿ ಮಾಡಿದ್ದೇನೆ, ಮೂರು ಭಾರಿ ಶಾಸಕನಾಗಿದ್ದೇನೆ, ಕ್ಷೇತ್ರ ಮತ್ತು ರಾಜ್ಯದ ಕೆಲಸ ಮಾಡಲು ಅವಕಾಶಕೊಡಬೇಕು ಎಂದು ಡೆಪ್ಯೂಟಿ‌ ಸ್ಪೀಕರ್ ಆನಂದ್ ಮಾಮನಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ರಾಜ್ಯಧ್ಯಕ್ಷರು ಮತ್ತು ಸಂಘ ಪರಿವಾರದ ಜತೆ ಮಾತನಾಡಿದ್ದೇನೆ, ಮುಖ್ಯಮಂತ್ರಿ ಅವರು ಸಂಪುಟ ವಿಸ್ತರಣೆಯನ್ನಾದ್ರ ಮಾಡಲಿ ಪುನಾರಚನೆಯನ್ನಾದ್ರು ಮಾಡಲಿ‌, ನನಗೆ ಸಚಿವ ಸ್ಥಾನ ಬೇಕೆ ಬೇಕು ಎಂದು ಒತ್ತಾಯಿಸಿದ್ದಾರೆ.

ಕೇವಲ ಕ್ಷೇತ್ರದ ಅಭಿವೃದ್ಧಿಗೆ ಅಂತ ನಾನು ಕೇಳುತ್ತಿಲ್ಲ, ಕ್ಷೇತ್ರದ ಜತೆ ರಾಜ್ಯದ ಕೆಲಸ ಮಾಡಲು ನನಗೆ ಈ ಭಾರಿ ಸಚಿವ ಸ್ಥಾನ ಕೊಡಬೇಕು ಎಂದು ಮಾಮನಿ ಒತ್ತಾಯಿಸಿದ್ದಾರೆ. ಹಿರಿಯರನ್ನ ಕೈಬಿಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರದ ಬಗ್ಗೆ ನಾನು ಮಾತನಾಡಲ್ಲ, ಮಾತನಾಡುವುದು ಸಮಂಜಸವೂ ಅಲ್ಲ, ಅದನ್ನ ಸಿಎಂ ಹಾಗೂ ಹಿರಿಯರು ನಿರ್ಧರಿಸಬೇಕು ಎಂದು ಹೇಳಿದ್ದಾರೆ.

More News