ಯಾರು ಪಕ್ಷ ಬಿಡುತ್ತಾರೋ ಅವರಿಗೆ ಬೂಸ್ಟರ್ ಡೋಸ್ ನೀಡಬೇಕಾಗಿದೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೆಸ್ ಗೆ ಕೊರೊನಾ ಬಂದಿದೆ ಎನ್ನುವ ಸಿಎಂ ಇಬ್ರಾಹಿಂ ಹೇಳಿಕೆಗೆ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ಯಾರು ಪಕ್ಷ ಬಿಡುವ ಮಾತು ಹೇಳಿದ್ದಾರೋ ಅವರಿಗೆ ಬೂಸ್ಟರ್ ಡೋಸ್ ನೀಡಬೇಕಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎನ್ನುವ ವೈರಸ್ ಗೆ ಒಂದೇ ಒಂದು ವ್ಯಾಕ್ಸಿನ್ ಅಂದ್ರೆ ಅದು ಕಾಂಗ್ರೆಸ್, ದೇಶದ ಎಲ್ಲಾ ಸಮಸ್ಯೆಗಳಿಗೂ ಕಾಂಗ್ರೆಸ್ ವ್ಯಾಕ್ಸಿನ್ ಇದ್ದಂತೆ, ಕಾಂಗ್ರೆಸ್ ನಿಂದ ಮಾತ್ರ ದೇಶದ ಎಲ್ಲಾ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ತಿಳಿಸಿದರು.
ಸಿಎಂ ಇಬ್ರಾಹಿಂ ಹೇಳಿಕೆ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ, ಯಾರು ಎಲ್ಲಿಗೆ ಹೋಗಲಿ ಪಕ್ಷ ಏನು ಕುಸಿದು ಹೋಗುತ್ತಾ ? ಎಂದು ಪ್ರಶ್ನಿಸಿದ ಅವರು, ಜೆಡಿಎಸ್ ಜೊತೆ ಹೋಗಲು ರೆಡಿ ಆಗಿದ್ರೆ ಅದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದ ಅವರು, ಬಡತನಕ್ಕೂ ಕಾಂಗ್ರೆಸ್ ವ್ಯಾಕ್ಸಿನ್ ಬೇಕು, ರೈತರಿಗೂ ಕಾಂಗ್ರೆಸ್ ವ್ಯಾಕ್ಸಿನ್ ಬೇಕು, ಕಾರ್ಮಿಕ, ಮಹಿಳಾ ಸುರಕ್ಷತೆಗೂ ನಮ್ಮದೇ ವ್ಯಾಕ್ಸಿನ್ ಬೇಕು ಎಂದು ತಿಳಿಸಿದರು.
ಸರ್ಕಾರ ಎಂಜಲು ಕಾಸಿಗೆ ಎಲ್ಲಾ ದಂಧೆ ನಡೆಸುತ್ತಿದೆ
ಪಿಎಸ್‌ಐ ನೇಮಕಾತಿ, ವರ್ಗಾವಣೆ, ಅಕ್ರಮ ಮರಳುಗಾರಿಕೆ, ಗಾಂಜಾ ಸಾಗಾಟ ಸೇರಿದಂತೆ ಪ್ರತಿಯೊಂದು ದಂಧೆಯಲ್ಲೂ ಸರ್ಕಾರ ಎಂಜಲು ಕಾಸು ಪಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಕ್ಯಾಬಿನೆಟ್ ಸಬ್ ಕಮಿಟಿಯ ಅನುಮತಿ ಪಡೆಯದೇ ಸರ್ಕಾರದಿಂದ ಸುತ್ತೋಲೆ ಹೇಗೆ ಬರುತ್ತಿವೆ ಎಂದು ಪ್ರಶ್ನಿಸಿದ್ದಾರೆ. ಬಿ ಶ್ರೀರಾಮುಲು ಅವರಿಗೆ 371(ಜೆ) ಬಗ್ಗೆ ಗಂಧ-ಗಾಳಿ ಗೊತ್ತಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿ ಎಮ್‌ಎಲ್‌ಎ‌ಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರು.
ಪಿಎಸ್‌ಐ ನೇಮಕಾತಿ ಪಟ್ಟಿಯನ್ನ ರದ್ದುಪಡಿಸಲು ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಆಗ್ರಹಪಡಿಸಿದರಲ್ಲದೆ, ನಲವತ್ತು ಪರ್ಸೆಂಟ್ ಸರ್ಕಾರದಿಂದ ಪಿಎಸ್‌ಐ ನೇಮಕಾತಿಯಲ್ಲೂ ಅಕ್ರಮ ನಡೆಸಿದೆ, ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡಿತಿದೆ ಅಂತಾ ಖುದ್ದು ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ, ಕೇವಲ ಭ್ರಷ್ಟಾಚಾರದಲ್ಲೇ ಸರ್ಕಾರ ಕಾಲ ಕಳೆಯುತ್ತಿದೆ, ಕೇಂದ್ರ ಸರ್ಕಾರಕ್ಕೆ ರಾಜ್ಯದ ಬಗ್ಗೆ ಅಲರ್ಜಿ, ರಾಜ್ಯ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕದ ಬಗ್ಗೆ ಅಲರ್ಜಿ, ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನವನ್ನ ದುರ್ಬಲಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಡಬಲ್ ಇಂಜಿನ್ ಸರ್ಕಾರ ಬಂದಾಗಿನಿಂದ ಈ ಭಾಗದ ಯೋಜನೆಗಳು ಮಾಯವಾಗಿವೆ, ರೈತರಿಗೆ ಇದುವರೆಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ಹಳೆ ಆಟ ಆಡಿ ಬೇಜಾರಾಗಿದೆ, ಇದೀಗ ಹೊಸ ಆಟ ಶುರು ಮಾಡಿಕೊಂಡಿದ್ದಾರೆ, 50 ವರ್ಷದಲ್ಲಿ ಉಂಟಾಗದ ನಿರುದ್ಯೋಗ ಇಂದಿನ ಸರ್ಕಾರದಲ್ಲಿ ಹೆಚ್ಚಾಗಿದೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಉದ್ಯೋಗ ಕಲ್ಪಿಸುವ ಯೋಜನೆಗಳು ಬಂದಿಲ್ಲ, ಕದ್ದುಮುಚ್ಚಿ ಈ ಭಾಗದ ಯುವಕರ ಭವಿಷ್ಯವನ್ನು ಕತ್ತಲೆಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದರು.

ಕೋರೊನಾದಿಂದ ಆರ್ಥಿಕ ನಷ್ಟವಾಗಿದೆ ಎಂಬ ನೆಪವೊಡ್ಡಿ ಕಲ್ಯಾಣ ಕರ್ನಾಟಕ ಭಾಗದ ಹುದ್ದೆ ಭರ್ತಿಗೆ ತಡೆ‌ ನೀಡಿದೆ, ಕೇವಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಸರ್ಕಾರಕ್ಕೆ ಆರ್ಥಿಕ ಸಂಕಷ್ಟನಾ? ಎಂದು ಪ್ರಶ್ನಿಸಿದ ಅವರು, ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಸರ್ಕಾರದ ಅವಿವೇಕಿತನದಿಂದ ನಮ್ಮ ಭಾಗದ ಜನರಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

More News