ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಮಗಳ ಸಡಿಲಿಕೆ ಕುರಿತು ಇಂದು ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ, ತಜ್ಞರ ಸಮಿತಿಯ ವರದಿ ಬಂದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಹಲವು ವಿಚಾರಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದೇವೆ, ಕೋವಿಡ್ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಕೋವಿಡ್ ನಿರ್ವಹಣೆ ಬಗ್ಗೆನೂ ಚರ್ಚಿಸಲಾಗಿದೆ ಎಂದರು.
ನಿಯಮ ಸಡಿಲಿಕೆ ಬಗ್ಗೆ ಬೇರೆ ಬೇರೆ ವಲಯದವರ ಮನವಿ ಬಂದಿದೆ, ಶಾಲಾ ಕಾಲೇಜುಗಳ ಬಗ್ಗೆ ಚರ್ಚೆ ಮಾಡಿದ್ದೇವೆ, ಎಲ್ಲ ಸಚಿವರೂ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ, ಈ ಸಂಬಂಧ ತಜ್ಞರ ಸಮಿತಿಯಿಂದ ವರದಿ ಕೇಳಲಾಗಿದೆ, ವರದಿ ಕೈಸೇರಿದ ಬಳಿಕ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಬಿಬಿಎಂಪಿ ಚುನಾವಣೆ ಸಂಬಂಧ ಚರ್ಚಿಸಲಾಗಿದೆ
ಬಿಬಿಎಂಪಿ ಚುನಾವಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ, ಚುನಾವಣೆ ಯಾವಾಗ ಬಂದರೂ ಯಶಸ್ವಿಯಾಗಿ ನಿಭಾಯಿಸಲು ಪ್ರತಿಯೊಬ್ಬ ಮುಖಂಡರಿಗೂ ಸೂಚನೆ ನೀಡಲಾಗಿದೆ, ಬೆಂಗಳೂರು ನಗರ ಸಚಿವರ ಜತೆ ಬೇರೆ ಸಚಿವರನ್ನು ಬಳಸಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವ ಕುರಿತು ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ನಂದಿ ಬೆಟ್ಟದಲ್ಲಿ ನಡೆಸಲು ಉದ್ದೇಶಿದ್ದ ಬೈಠಕ್ ಚಿಂತನಾ ಸಭೆ ಕುರಿತು ಚರ್ಚಿಸಲಾಗಿದ್ದು, ಆದಷ್ಟು ಬೇಗ ಚಿಂತನ ಮಂಥನ ಸಭೆ ನಡೆಸಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರೇಸ್ ಕೋರ್ಸ್ ನಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಟರ್ಫ್ ಕ್ಲಬ್ ನಿಂದ ಡರ್ಬಿ ರೇಸ್ ನಡೆಸಿರುವ ಕುರಿತು ಪ್ರತಿಕ್ರಯಿಸಿದ ಅವರು, ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು,

ನಿಯಮಗಳ ಉಲ್ಲಂಘನೆ ಆಗಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಪುಟ ಪುನಾರಚನೆ ವಿಚಾರ
ವರಿಷ್ಠರೊಂದಿಗೆ ಚರ್ಚೆ ನಡೆಸಿ ಸಂಪುಟ ಪುನರ್ ರಚನೆ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಿಎಂ, ವರಿಷ್ಠರು ಕರೆದರೆ ದೆಹಲಿಗೆ ಹೋಗಿ ನಿರ್ಧಾರ ಕೈಗೊಳ್ಳಲಾಗುವುದು, ಹಾಗೆಯೇ ರಾಜ್ಯದ ಎಲ್ಲ ಸಂಸದರ ಜತೆ ಸಭೆ ನಡೆಸುವುದರ ಕುರಿತು ಚಿಂತನೆ ಮಾಡಲಾಗುತ್ತಿದೆ ಎಂದರು.




