ಬೀದರ್ : ಕರ್ತವ್ಯನಿರತ ತಹಶೀಲ್ದಾರ್ ಗುಪ್ತಾಂಗ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಪ್ಪತ್ತು ಜನರ ಪ್ರತಿಭಟನಾಕಾರರ ವಿರುದ್ಧ ಹುಮ್ನಾಬಾದ್ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿದ್ದ ತಾಲ್ಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಮೇಲೆ ಹಲ್ಲೆ ಮಾಡಿರುತ್ತಾರೆ, ಆದರೆ, ಜನ ಸಾಮಾನ್ಯರ ಗತಿ ಏನು ಎಂಬುದು ಈಗ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ನಡೆದ ಹಲ್ಲೆ ಪ್ರಕರಣದಲ್ಲಿ ಹುಮ್ನಾಬಾದ್ ಪೋಲೀಸರು, ಅಂಕುಶ ಗೋಖಲೆ ಸೇರಿ 20ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಕರ್ತವ್ಯನಿರತ ತಹಶೀಲ್ದಾರ್ ಡಾ.ಪ್ರದೀಪ ಕುಮಾರ್ ಹಿರೇಮಠ ಅವರ ಮೇಲೆ ಪ್ರತಿಭಟನಾ ನಿರತ ಬಿಎಸ್.ಪಿ ಮುಖಂಡ ಅಂಕುಶ ಗೋಖಲೆ ಮತ್ತಿತರರು ಹಲ್ಲೆ ಮಾಡಿದ್ದರು.

ರಾಯಚೂರು ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರು ಗಣರಾಜ್ಯೋತ್ಸವದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರ ತೆಗೆಸಿ, ಅವಮಾನ ಮಾಡಿದ ಪ್ರಕರಣ ಸಂಬಂಧ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿಪತ್ರ ಸಲ್ಲಿಸಲು ಆಗಮಿಸಿದ್ದರು.

ಈ ವೇಳೆ ಮನವಿಪತ್ರ ಸ್ವೀಕರಿಸಲು ಪ್ರತಿಭನಾ ಸ್ಥಳಕ್ಕೆ ತಕ್ಷಣ ಬರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು. ತಹಶಿಲ್ದಾರರ ಕಚೇರಿಯಲ್ಲಿ ಒಂದು ಸದ್ಯ ಸಭೆ ನಡೆಯುತ್ತಿದೆ ಮುಗಿದ ಬಳಿಕ ಬರುತ್ತೇನೆ ಸ್ವಲ್ಪ ತಾಳಿ ಎಂದಿದ್ದಕ್ಕೆ ಪ್ರತಿಭಟನಕಾರರು ಕೋಪಗೊಂಡು ಸಭಾಂಗಣಕ್ಕೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿ ನನ್ನ ಗುಪ್ತಾಂಗದ ಮೇಲೆ ಒದ್ದಿದ್ದಾರೆ ಎಂದು ತಹಸೀಲ್ದಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ತಹಶಿಲ್ದಾರರ ಅವರು ನೀಡಿದ ದೂರು ಆಧರಿಸಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಅಂಕುಶ ಗೋಖಲೆ ಸೇರಿ 20ಮಂದಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ವಿಷಯ ತಿಳಿದ ಶಾಸಕ ರಾಜಶೇಖರ ಬಿ.ಪಾಟೀಲ, ಎಂ.ಎಲ್.ಸಿಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ, ಭೀಮರಾವ್ ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ, ತಹಶೀಲ್ದಾರ್ ಪ್ರದೀಪಕುಮಾರಗೆ ಧೈರ್ಯ ತುಂಬಿದ್ದಲ್ಲದೇ ತಪ್ಪಿತಸ್ಥ ಆರೋಪಿಗಳು ಯಾರಾದರೂ ಸರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.




