ಬೆಂಗಳೂರು : ಈ ಸರ್ಕಾರದ ಸಾಧನೆ ಭ್ರಷ್ಟಾಚಾರ ಮತ್ತು ವೈಫಲ್ಯಗಳು ಮಾತ್ರ. ಪ್ರಸ್ತುತ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾಗಿದ್ದಾರೆ ಹೊರತು ಸರ್ಕಾರ ಬದಲಾಗಿಲ್ಲ, ಭ್ರಷ್ಟಾಚಾರ ನಿಂತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಎರಡೂವರೆ ವರ್ಷಗಳಾಗಿದೆ. ಬೊಮ್ಮಾಯಿ ಅವರದು ಹಿಂದಿನ ಯಡಿಯೂರಪ್ಪ ಅವರ ಸರ್ಕಾರದ ಮುಂದುವರೆದ ಭಾಗವೇ ಹೊರತು ಹೊಸ ಸರ್ಕಾರವೇನಲ್ಲ. 2018 ರಲ್ಲಿ ಬಿಜೆಪಿಯವರು ಜನರಿಗೆ ನೀಡಿದ್ದ ಚುನಾವಣಾ ಪ್ರಣಾಳಿಕೆಗೆ ಯಡಿಯೂರಪ್ಪ ಸರ್ಕಾರದಷ್ಟೇ ಬೊಮ್ಮಾಯಿ ಅವರ ಸರ್ಕಾರಕ್ಕೂ ಅನ್ವಯವಾಗುತ್ತದೆ ಎಂದರು.
ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ನೀರಾವರಿ ಉದ್ದೇಶಕ್ಕಾಗಿ ರೂ. 1.5 ಲಕ್ಷ ಕೋಟಿ ಖರ್ಚು ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅಂದರೆ ವರ್ಷಕ್ಕೆ ಕನಿಷ್ಠ 30 ಸಾವಿರ ಕೋಟಿ ಖರ್ಚು ಮಾಡಬೇಕು. ಆದರೆ ಈ ವರ್ಷ ಸರ್ಕಾರ ಖರ್ಚು ಮಾಡಿರೋದು 6,300 ಕೋಟಿ ರೂಪಾಯಿ. ರಾಜ್ಯ ಸರ್ಕಾರ ತನ್ನ ಸಾಧನೆಗಳ ಪುಸ್ತಕ ಬಿಡುಗಡೆ ಮಾಡಿದೆ, ಆದರೆ ಪುಸ್ತಕದಲ್ಲಿ ಸಾಧನೆಗಿಂತ ಭರವಸೆಗಳೇ ಜಾಸ್ತಿ ಇವೆ ಎಂದು ಟಕೀಸಿದರು.
ಅಮೃತ ಯೋಜನೆಯಡಿ 25 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುತ್ತೇವೆ, 750 ಶಾಲೆಗಳಿಗೆ ತಲಾ ಹತ್ತು ಲಕ್ಷ ಹಣ ಖರ್ಚು ಮಾಡುತ್ತೇವೆ, ಐದು ಲಕ್ಷ ಮನೆ ನಿರ್ಮಿಸುತ್ತೇವೆ, ಅಮೃತ ಗ್ರಾಮಗಳನ್ನು ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಹಳೆಯ ಯೋಜನೆಗಳಿಗೆ ಹೊಸ ಹೆಸರು ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದಾಹರಣೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದ ಹೆಚ್.ಕೆ ಪಾಟೀಲ್ ಅವರು ಗ್ರಾಮೀಣ ಸೇವಾ ಕೇಂದ್ರಗಳನ್ನು ಆರಂಭಿಸಿದ್ದರು, ಈಗ ಅವನ್ನು ಗ್ರಾಮ ಒನ್ ಎಂದು ಹೆಸರು ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಇದು ಸರ್ಕಾರದ ಸಾಧನೆಯ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ತನ್ನ ಜಾಹಿರಾತಿನಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗೆ 3000 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಹೇಳಿದೆ. ಈ ವರೆಗೆ ಕ್ರಿಯಾ ಯೋಜನೆ ರೂಪಿಸಿ ಬಿಡುಗಡೆ ಮಾಡಿರೋದು 1200 ಕೋಟಿ ರೂಪಾಯಿ, ಈ ಆರ್ಥಿಕ ವರ್ಷದಲ್ಲಿ ಉಳಿದಿರೋದು ಇನ್ನು ಎರಡು ತಿಂಗಳು ಮಾತ್ರ. ಮುಂದೆ ಒಂದು ರೂಪಾಯಿಯೂ ಬಿಡುಗಡೆ ಆಗಲ್ಲ, ಹೈದ್ರಾಬಾದ್ ಕರ್ನಾಟಕ ಎಂದು ಹೆಸರು ಬದಲಿಸಿದ್ದೊಂದೆ ಲಾಭ ಅಷ್ಟೆ, ಹಣಕಾಸಿನ ಲಾಭ ಏನೂ ಇಲ್ಲ ಎಂದರು.
ಕೊರೊನಾದಿಂದ ನಾಲ್ಕು ಲಕ್ಷ ಜನ ಸತ್ತಿದ್ದಾರೆ
ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಎರಡನೇ ಅಲೆ ಬಂದಾಗ ಆಸ್ಪತ್ರೆಯಲ್ಲಿ ಖಾಲಿ ಹಾಸಿಗೆ ಇರಲಿಲ್ಲ, ವೆಂಟಿಲೇಟರ್, ಆಕ್ಸಿಜನ್ ಬೆಡ್, ಅಗತ್ಯ ವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್ ಇರಲಿಲ್ಲ. ಕೇಂದ್ರ ಸರ್ಕಾರ ನೀಡಿರುವ ವೆಂಟಿಲೇಟರ್ ಗಳು ಧೂಳು ಹಿಡಿದಿವೆ, ಅದರ ನಿರ್ವಹಣೆ ಮಾಡಲು ಸಿಬ್ಬಂದಿ ಇಲ್ಲ. ಇದರಿಂದಾಗಿ ಜನ ಹಾದಿ ಬೀದಿಯಲ್ಲಿ ಪ್ರಾಣ ಬಿಟ್ಟರು. ಸರ್ಕಾರ 38,000 ಜನ ಸತ್ತಿದ್ದಾರೆ ಎಂದು ಸುಳ್ಳು ಲೆಕ್ಕ ಹೇಳಿದೆ, ನನಗಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕನಿಷ್ಠ 4 ಲಕ್ಷ ಜನ ಕೊರೊನಾದಿಂದ ಸತ್ತಿದ್ದಾರೆ. ಸರ್ಕಾರ ಯಾವ ಯಾವ ಆಸ್ಪತ್ರೆಯಲ್ಲಿ ಎಷ್ಟು ಜನ ಸತ್ತಿದ್ದಾರೆ ಎಂಬ ಲೆಕ್ಕ ಕೊಡಲಿ ನೋಡೋಣ ಆಗ ಸತ್ಯ ಬಯಲಾಗುತ್ತೆ ಎಂದರು.
ಕೊವಿಡ್ ನಿಂದ ಮರಣ ಹೊಂದಿದ 27,074 ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ತಲಾ 50,000 ಪರಿಹಾರ ನೀಡಲಾಗಿದೆ. ರಾಜ್ಯ ಸರ್ಕಾರ 13,541 ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ನೀಡಿದೆ. ಇನ್ನುಳಿದ ಕುಟುಂಬಗಳಿಗೆ ಪರಿಹಾರ ಕೊಟ್ಟಿಲ್ಲ. ಕೊರೊನಾ ನಿರ್ವಹಣೆ ಯಶಸ್ವಿಯಾಗಿ ಮಾಡಿದ್ದೇವೆ ಎನ್ನುವ ಸರ್ಕಾರ ಸತ್ತವರ ಶವವನ್ನು ಕೂಡ ಸರಿಯಾಗಿ ಅಂತ್ಯಕ್ರಿಯೆ ಮಾಡದೆ, ಸಾಮೂಹಿಕವಾಗಿ ಶವ ಹೂಳಲಾಯಿತು. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕೊರೊನಾ ಸಂದರ್ಭದಲ್ಲಿ ಉಂಟಾದ ನಿರುದ್ಯೋಗ ಸಮಸ್ಯೆಯಿಂದಾಗಿ 1.57 ಲಕ್ಷ ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎನ್.ಸಿ.ಆರ್.ಬಿ ವರದಿ ಹೇಳಿದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಪ್ರವಾಹದಲ್ಲಿ ನಷ್ಟ ಅನುಭವಿಸಿದ ರೈತರಿಗೆ ಎನ್.ಡಿ.ಆರ್.ಎಫ್ ನಿಯಮಗಳಿಗಿಂತ ಮೂರು ಪಟ್ಟು ಹೆಚ್ಚು ಪರಿಹಾರ ನೀಡುವಂತೆ ಸದನದಲ್ಲಿ ನಾನು ಒತ್ತಾಯ ಮಾಡಿದ್ದೆ, ಕೊನೆಗೆ ಎರಡು ಪಟ್ಟು ಮಾಡಿದ್ರು, ಆದರೆ ಇವತ್ತಿನವರೆಗೆ ಒಂದು ರೂಪಾಯಿ ಹಣವನ್ನೂ ಬಿಡುಗಡೆ ಮಾಡಿಲ್ಲ ಎಂದರು.

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತೇವೆ ಎನ್ನುತ್ತಾರೆ, ನಮ್ಮ ಸರ್ಕಾರದ ವಿದ್ಯಾಸಿರಿ, ಅರಿವು ಯೋಜನೆಯನ್ನು ನಿಲ್ಲಿಸಿದ್ದಾರೆ. ಇವರು ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ. ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು.
ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದು ಹೇಳಿ ಎಂಟು ವರ್ಷ ಆಯ್ತು, ಇವತ್ತಿನವರೆಗೆ ಆದಾಯ ದುಪ್ಪಟ್ಟಾಗಲೇ ಇಲ್ಲ. ಇದನ್ನು ಮಾಡೋದು ಬಿಟ್ಟು ರೈತರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತಂದರು, ಸುಮಾರು 700 ಕ್ಕೂ ಹೆಚ್ಚು ರೈತರು ಸತ್ತ ಮೇಲೆ ವಾಪಾಸು ಪಡೆದಿದ್ದಾರೆ ಎಂದು ಟಿಕೀಸಿದ ಅವರು, ಕನಿಷ್ಠ ಬೆಂಬಲ ಬೆಲೆ ನೀಡಿ ಬೆಳಗಳ ಖರೀದಿ ಮಾಡುತ್ತಿಲ್ಲ. 2020-21 ರಲ್ಲಿ 12 ಲಕ್ಷ ಟನ್ ಭತ್ತ ಖರೀದಿ ಮಾಡಬೇಕೆಂದು ನಿರ್ಧಾರ ಮಾಡಿದ್ದರು ಅದು ಆಗಿಲ್ಲ ಎಂದರು.

ಮಾತೆತ್ತಿದ್ದರೆ ಆತ್ಮನಿರ್ಭರ್, ಮೇಕ್ ಇನ್ ಇಂಡಿಯಾ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ 7.5 ಲಕ್ಷ ಕೋಟಿ ಮೌಲ್ಯದ ಪದಾರ್ಥಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದ್ದಾರೆ, 1.5 ಲಕ್ಷ ಕೋಟಿಯ ಉತ್ಪನ್ನಗಳನ್ನು ರಫ್ತು ಮಾಡಿದ್ದಾರೆ. ಕೊರೊನಾ ಕಾಲದಲ್ಲಿ ಕಾರ್ಪೊರೇಟ್ ಕಂಪನಿಗಳು 12.5 ಲಕ್ಷ ಕೋಟಿ ಲಾಭ ಗಳಿಸಿವೆ. ಅವರ ಮೇಲೆ ಈ ಹಿಂದೆ ಇದ್ದ 30% ತೆರಿಗೆಯನ್ನು 22.5% ಗೆ ಇಳಿಸಲಾಗಿದೆ ಎಂದು ಟಿಕೀಸಿದರು.
ಈ ಸರ್ಕಾರದ ಸಾಧನೆ ಎಂದರೆ ಭ್ರಷ್ಟಾಚಾರ ಮಾತ್ರ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ತಗೊಳ್ತಿದೆ ಎಂದು ದೂರು ನೀಡಿದ್ದಾರೆ. ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಳ್ಳುವ ಪ್ರಧಾನಿ ಮೋದಿಯವರು ಇದನ್ನು ನೋಡಿಯೂ ಸುಮ್ಮನಿದ್ದಾರೆ ಎಂದು ಟಿಕೀಸಿದರು.




