ಹೆಣ್ಣು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ ರಾಷ್ಟ್ರ ರಕ್ಷಣೆಗೂ ಸೈ: ಗೃಹ ಸಚಿವ ಆರಗ ಜ್ಞಾನೇಂದ್ರ

ಮೈಸೂರು : ಹೆಣ್ಣು ಅಬಲೆಯಲ್ಲ, ಹಾಗೂ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ, ರಾಷ್ಟ್ರ ಹಾಗೂ ಸಮಾಜ ರಕ್ಷಣೆಗೂ ಸಿದ್ದ ಎಂದು, ಮಹಿಳೆಯರು ಯಶಸ್ವಿಯಾಗಿ ನಿರೂಪಿಸಿದ್ದಾರೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರರವರು ಇಂದು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡಮಿಯಲ್ಲಿ ನಡೆದ ೪೫ನೇ ತಂಡದ ಆರಕ್ಷಕ ಉಪನಿರೀಕ್ಷಕರ (ಸಿವಿಲ್) ಪ್ರಶಿಕ್ಷಣಾರ್ಥಿ ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಇಂದು ಮಾತನಾಡುತ್ತಿದ್ದರು.
ಸುಮಾರು ೨೨೮ ಪ್ರಶಿಕ್ಷಣಾರ್ಥಿಗಳು ಇಂದು ತರಬೇತಿ ಮುಗಿಸಿ ಸೇವೆಗೆ ಸಜ್ಜಾಗಿದ್ದು, ಅವರುಗಳಲ್ಲಿ ೪೫ ಮಂದಿ ಮಹಿಳೆಯರು, ಪುರುಷ ಪ್ರಶಿಕ್ಷಣಾರ್ಥಿ ಗಳಿಗೆ ಸರಿಸಾಟಿಯಾಗಿ, ತರಬೇತಿ ಮುಗಿಸಿ, ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.

ತರಬೇತಿ ಮುಗಿಸಿ ಸೇವೆಗೆ ತೆರಳುತ್ತಿರುವ ತಾವುಗಳು, ಸಮಾಜವಿರೋಧಿ ಶಕ್ತಿಗಳಿಗೆ ಭಯ ಹುಟ್ಟಿಸಬೇಕು, ಅದೇ ಸಮಯದಲ್ಲಿ ಕಾನೂನು ಗೌರವಿಸುವ ನಾಗರಿಕರಿಗೆ, ಅಭಯ ನೀಡುವ ಕೆಲಸ ಮಾಡಬೇಕು ಎಂದು, ಕಿವಿಮಾತು ಹೇಳಿದರು. ಪಿ ಹರಿಶೇಖರನ್, ADGP (ತರಬೇತಿ), ವಿಪುಲ್ ಕುಮಾರ್, ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡಮಿ, ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳೂ ಉಪಸ್ಥಿತರಿದ್ದರು.
ಟೋಯಿಂಗ್‌ನಿಂದ ಸಾರ್ವಜನಿಕರಿಗೆ ಸಮಸ್ಯೆ
ಎಲ್ಲಿಯವರೆಗೂ ಸಾರ್ವಜನಿಕರು ಹೊಣೆಗಾರಿಕೆ ಅರಿಯುವುದಿಲ್ಲವೊ ಅಲ್ಲಿಯವರೆಗೂ ಪೊಲೀಸರಿಂದ ಕಾನೂನಾತ್ಮಕ ಕ್ರಮ ಅನಿವಾರ್ಯ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಖಾಸಗಿಯಾವರಿಂದ ಟೋಯಿಂಗ್ ವಿಚಾರದಲ್ಲಿ ಜನರಿಗೆ ಸಮಸ್ಯೆಯಾಗುತ್ತಿದ್ದು, ಹೆಚ್ಚಿನ ಕಮಿಷನ್‌ಗಾಗಿ ಜನರಿಗೆ ತೊಂದರೆ ಕೊಟ್ಟಿರುವುದು ಸತ್ಯ, ಸದ್ಯಕ್ಕೆ ಟೋಯಿಂಗ್ ನಿಲ್ಲಿಸಲಾಗಿದೆ, ಇಂದು ಸಂಜೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಅವರ ವಿರುದ್ದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ, ಯಾರು ಬೇಕಾದರೂ ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು, ಬಂದ ದೂರಿನ ಆಧಾರದಲ್ಲಿ ತನಿಖೆ ಶುರುವಾಗಿದೆ ಎಂದು ಹೇಳಿದರು.
ಅವರ ವರ್ಗಾವಣೆ ಆಡಳಿತಾತ್ಮಕ ನಿರ್ಧಾರ ಅಷ್ಟೇ, ಅದು ಶಿಕ್ಷೆ ಅಥವಾ ಬೇರೆ ಇನ್ನೇನೋ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸದ್ಯ ವರ್ಗಾವಣೆ ತಡೆ ವಿಚಾರ ಆ ರೀತಿ ಯಾವುದು ಇಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

More News