CM BOMMAI: ಸಿಎಂ ಬೊಮ್ಮಾಯಿಗೆ ತಪ್ಪದ ಸಂಪುಟ ಸಂಕಟ.. ಪ್ರಬಲ ಸ್ಥಾನಕ್ಕಾಗಿ ಸಾಹುಕಾರ್ ಮಹಾ ತಂತ್ರ!

ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಬಲ ಖಾತೆಗಳನ್ನು ಪಡೆಯಲು ಸಚಿವಾಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಒಂದು ಕಡೆ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವುದು ಸಿಎಂ ಬಸವರಾಜ ಬೊಮ್ಮಾಯಿಗೆ ದೊಡ್ಡ ತಲೆ ನೋವಾಗಿದೆ. ಮತ್ತೊಂದೆಡೆ ಸಚಿವಾಕಾಂಕ್ಷಿಗಳು ಹೇಗಾದ್ರೂ ಮಾಡಿ ಸಂಪುಟದಲ್ಲಿ ಮಂತ್ರಿಗಿರಿಯನ್ನು ಪಡೆಯಲೇಬೇಕೆಂದು ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿದ್ದಾರೆ.
ಮಂತ್ರಿಗಿರಿಗಾಗಿ ಗುರುವಿನ ಮೊರೆ ಹೋದ ರಮೇಶ್ ಜಾರಕಿಹೊಳಿ!
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಪ್ರಬಲ ಖಾತೆಯನ್ನ ಹೊಂದಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಳಿಕ ಮಂತ್ರಿಗಿರಿಗೆ ರಾಜೀನಾಮೆ ನೀಡಿದ್ದರು. ಈಗ ಹೇಗಾದ್ರೂ ಮಾಡಿ ಮತ್ತೆ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಪ್ರಬಲ ಖಾತೆಯನ್ನ ಪಡೆಯಲೇಬೇಕು ಎಂದು ಬೆಳಗಾವಿ ಸಾಹುಕಾರ ರಾಜಕೀಯ ಗುರುವಿನ ಮೊರೆ ಹೋಗಿದ್ದಾರೆ.
ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರೋ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ಅವರನ್ನ ಭೇಟಿ ಮಾಡಿದ್ದಾರೆ. ಈಗಾಗಲೇ ಗೋವಾದ ಕೆಲ ಕ್ಷೇತ್ರಗಳಲ್ಲಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇಂದು ಗೋವಾದ ಪಣಜಿಯ ಖಾಸಗಿ ಹೋಟೆಲ್‌ನಲ್ಲಿ ದೇವೇಂದ್ರ ಫಡ್ನಾವೀಸ್ ಅವರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ ಪ್ರಸ್ತುತ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಅಲ್ಲದೆ, ತಮ್ಮ ರಾಜಕೀಯ ಗುರುವಾದ ದೇವೇಂದ್ರ ಫಡ್ನಾವೀಸ್ ಮೂಲಕ ಈ ಹಿಂದೆ ಬಿಎಸ್‌ವೈ ಕ್ಯಾಬಿನೆಟ್‌ನಲ್ಲಿ ಪ್ರಬಲ ಸಚಿವ ಸ್ಥಾನ ಪಡೆದಿದ್ದ ರಮೇಶ್ ಜಾರಕಿಹೊಳಿ, ಇದೀಗ ಮತ್ತೆ ಪ್ರಬಲ ಖಾತೆಯಾದ ಜಲ ಸಂಪನ್ಮೂಲ ಸಚಿವ ಸ್ಥಾನಕ್ಕಾಗಿ ಭಾರಿ ಲಾಬಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಾಹುಕಾರ್ ಮಾಸ್ಟರ್ ಪ್ಲಾನ್ ಗೆ ಬಿಜೆಪಿ ಹೈಕಮಾಂಡ್ ಒಪ್ಪುತ್ತಾ?
ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ಪ್ರಭಾವ ಮತ್ತು ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಬೆಳಗಾವಿ ಸಾಹುಕಾರ್ ಮಾಸ್ಟರ್‌ಪ್ಲಾನ್ ರೂಪಿಸುತ್ತಿದ್ದಾರೆ. ತಮ್ಮ ರಾಜಕೀಯ ಗುರುವಿನ ಮೂಲಕ ಹೇಗಾದ್ರೂ ಮಾಡಿ ಬೊಮ್ಮಾಯಿ ಸಂಪುಟದಲ್ಲಿ ಪ್ರಬಲ ಖಾತೆಯನ್ನು ಪಡೆಯಲೇಬೇಕು ಎಂದು ರಮೇಶ್ ಜಾರಕಿಹೊಳಿ ಏನೋ ಹಠಕ್ಕೆ ಬಿದ್ದಂತೆ ಕಸರತ್ತು ನಡೆಸುತ್ತಿದ್ದಾರೆ.

ಆದರೆ, ರಮೇಶ್ ಜಾರಕಿಹೊಳಿ ಅವರ ಈ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕುತ್ತಾ..? ಇಲ್ಲವಾ..? ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

More News

You cannot copy content of this page