ಹಿಜಾಬ್ ವಿವಾದ: ಮುಸ್ಲಿಂ ಸಂಘಟನೆಗಳು ಹುಟ್ಟು ಹಾಕಿವೆ, ಕಾಂಗ್ರೆಸ್ ನಾಯಕರು ಪೋಷಿಸುತ್ತಿದ್ದಾರೆ : ಸುನೀಲ್ ಕುಮಾರ್ ಆರೋಪ

ಬೆಂಗಳೂರು : ಯಾವುದೇ ಕಾರಣಕ್ಕೂ ಕ್ಯಾಂಪಸ್ ನಲ್ಲಿ ಧಾರ್ಮಿಕ ಆಚರಣೆಗಳಿಗೆ ಅವಕಾಶ ಇಲ್ಲ ಎಂದು ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ, ಸರ್ಕಾರ ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಹಿಜಾಬ್ ವಿವಾದದ ಹಿಂದೆ ದೊಡ್ಡದಾದ ರಾಜಕೀಯ ಹುನ್ನಾರವಿದೆ ಎಂದು ತಿಳಿಸಿದ ಅವರು, ಇಲ್ಲಿ ನಡೆಯುವ ಈ ವಿಚಾರಕ್ಕೆ ದೇಶದ ಮತ್ತೊಂದು ಮೂಲೆಯಲ್ಲಿರುವವರು ಪ್ರತಿಕ್ರಿಯೆ ನೀಡಿದ್ದಾರೆ, ಹೀಗಾಗಿ ಇದರ ಹಿಂದಿನ ಹಿಡನ್ ಅಜೆಂಡಾ ಏನು ಅಂತ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಈ ವಿವಾದವನ್ನು ಮುಸ್ಲಿಂ ಸಂಘಟನೆಗಳು ಹುಟ್ಟು ಹಾಕಿವೆ, ಇದಕ್ಕೆ ಕಾಂಗ್ರೆಸ್ ನಾಯಕರು ನೀರೆರೆದು ಪೋಷಿಸುತ್ತಿದ್ದಾರೆ, ಹುಜಾಬ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ಗೇಟ್ ನಿಂದ ಹೊರಗೆ ನಿಲ್ಲಿಸಿದ ಪ್ರಾಂಶುಪಾಲರ ನಡೆಯನ್ನು ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದ ಸುನೀಲ್ ಕುಮಾರ್, ಇದಕ್ಕೊಂದು ತಾರ್ತಿಕ ಅಂತ್ಯ ಕಾಣಿಸುವ ಅಗತ್ಯವಿದೆ ಎಂದರು. ಶೀಘ್ರದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ತಿಳಿಸಿದರು.

More News