ವೈ ಜಿ ಅಶೋಕ್ ಕುಮಾರ್, ಹಿರಿಯ ಪತ್ರಕರ್ತರು
ಹೊಳೆನರಸಿಪುರದ ಶಾಲೆಯಿಂದ ಸಿನಿಮಾ ನೋಡಲು ರೈಲ್ವೇ ಹಳಿ ಮೇಲೆ ನಡೆಯುತ್ತ, ಹಾಸನ ತಲುಪಿ ಗುರಿ ಸ್ಪಷ್ಟವಿಲ್ಲದ ಈ ಕುಮಾರಸ್ವಾಮಿ ಎಂಬ ದೇವೇಗೌಡರಿಗೆ ಬೇಡದ ಹುಡುಗ. ಹೆಮ್ಮರವಾಗಿ ಬೆಳೆದು ದೇವೇಗೌಡರು ಕಟ್ಟಿ ಬೆಳೆಸಿದ ಆಲದ ಮರದ ಬೀಳಲುಗಳನ್ನು ಒಂದೊಂದಾಗಿ ಕತ್ತರಿಸುತ್ತಿರುವ ಸೋಜಿಗವ ನೋಡಣ್ಣ…
ಹೊಳೆನರಸಿಪುರದಲ್ಲಿ ಮಿಲ್ ಕಟ್ಟಲು ಇಟ್ಟಿದ್ದ ಜಾಗದಲ್ಲಿ, ಸಿನಿಮಾ ಮಂದಿರ ಕಟ್ಟಿ ಬೆಳೆಸಿದ ಅದಕ್ಕೆ ಚೆನ್ನಾಮ್ಮಾಜಿಯ ಹೆಸರಿಟ್ಟು ಅವರದೇ ಹೆಸರಿನಲ್ಲಿ ಫಿಲಂ ಡಿಸ್ಟ್ರಿಬ್ಯೂಷನ್ ಸಂಸ್ಥೆಯನ್ನು ಮೈಸೂರು, ಬೆಂಗಳೂರಿನಲ್ಲಿ ನಡೆಸುತ್ತಾ ಕಾರ್ಪೋರೇಶನ್ ಕಸ ಕಂಟ್ರಾಕ್ಟ್ ಕೂಡಾ ಬಿಡದೇ ಬಿಸಿನೆಸ್ ಬುದ್ದಿಯ ಕುಮಾರಣ್ಣ ಎರೆಡೆರಡು ಸಲ ಮುಖ್ಯಮಂತ್ರಿಯಾದ ಪರಿಯ ನೋಡಿರಣ್ಣ…
1994 ರಲ್ಲಿ ಸಿ ಎಂ ಇಬ್ರಾಹಿಮ್ ಜನತಾ ದಳದ ಅಧ್ಯಕ್ಷರು, ಕುಮಾರಸ್ವಾಮಿ ಸಂಘಟನಾ ಕಾರ್ಯದರ್ಶಿ; ಗೌಡರಿಗೆ ಹೀಗೊಬ್ಬ ಮಗ ಇದಾನೆ ಎಂದು ಲೋಕಕ್ಕೆ ಗೊತ್ತಾಗುವ ಮೊದಲೇ ಗೌಡರು ಮುಖ್ಯಮಂತ್ರಿಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುವ ಸವಾಲು ಬಂದೇ ಬಿಡ್ತು. ಕೇಂದ್ರ ನಾಯಕರ ಸೂಚನೆಯಂತೆ ಗೌಡರ ಸಂಪುಟದ ಕೆಲವು ಮಂತ್ರಿಗಳು ಲೋಕಸಭೆ ಚುನಾವಣೆಯ ಅಖಾಡಕ್ಕಿಳಿಸುವ ಪ್ರಯೋಗ ನಡೆಯಿತು.
ಬಾಗಲಕೋಟೆಯಲ್ಲಿ ಹೆಚ್ ವೈ ಮೇಟಿ, ಚಿಕ್ಕಮಗಳೂರು ಶಂಕರ್, ಕೋಲಾರದಲ್ಲಿ ಜಾಲಪ್ಪ, ಗುಲ್ಬರ್ಗಾದಿಂದ ಖಮರುಲ್ ಇಸ್ಲಾಂ, ಕನಕಪುರದಿಂದ ಪಿ ಜಿ ಆರ್ ಸಿಂಧ್ಯಾ ಚುನಾವಣೆಗೆ ಸ್ಪರ್ಧಿಸಲು ಸೂಚಿಸಲಾಯಿತು.
ಗೌಡರ ಸಂಪುಟದ ಗೃಹ ಮಂತ್ರಿ
ಮಾನಸಪುತ್ರ ಪಾಂಡುರಂಗರಾವ್ ಗಣೇಶ್ ರಾವ್ ಸಿಂಧ್ಯಾ ಮುಂದಿನ ಮುಖ್ಯಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿರುವಾಗಲೇ, ಕನಕಪುರದ ಆಗಿನ ಸಿಂಧ್ಯಾ ಡಿಕೆಶಿ ಜೋಡಿ ಪ್ಲಾನ್ ಮಾಡಿ ಕುಮಾರಸ್ವಾಮಿ ಚುನಾವಣೆಗೆ ಇಳಿಯುವಂತೆ ಮಾಡುತ್ತಾರೆ.
“ಒರು ಕಲ್ಲು ರಂಡು ಮಾಂಗಾ”
ಒಂದೇ ಕಲ್ಲಲಿ ಎರಡು ಹಕ್ಕಿ ಹೊಡೆಯುವುದಲ್ಲಿ ಈ ಗಣಿ ಧಣಿಗಳು ಎಕ್ಸ್ ಪರ್ಟ್
ಪಕ್ಷದ ಸಂಘಟನಾ ಕಾರ್ಯದರ್ಶಿ ಹೆಚ್ ಡಿ ಕುಮಾರಸ್ವಾಮಿ ಎಂಬ ಹೆಸರಿನ ಮುಖ್ಯಮಂತ್ರಿ ದೇವೇಗೌಡರಿಗೆ ಹೀಗೂ ಮತ್ತೊಬ್ಬ ಮಗ ಇದ್ದಾರೆ ಎಂದು ಅವರ ಪ್ರವರವನ್ನೆಲ್ಲಾ ಹೇಳಿ ಪತ್ರಕರ್ತರನ್ನು ಕುತೂಹಲದ ಘಟ್ಟಕ್ಕೆ ತಂದಿಟ್ಟು ಮೊದಲ ಮೀಟ್ ದ ಪ್ರೆಸ್ ಪ್ರೆಸ್ ಕ್ಲಬ್ ನಲ್ಲಿ ನಡೆಯುತ್ತದೆ. ಆಗ ಕುಮಾರಸ್ವಾಮಿಯ ಬಾಲ ಹಿಡಿದು ಬರುವಾತನೇ ದರಿದ್ರ ನಾರಾಯಣ ಜಮೀಲು…
ಕನಕಪುರಲ್ಲಿ ಮರಿಲಿಂಗೇಗೌಡ
ಡಿ ಎಂ ವಿಶ್ವನಾಥ್, ನಾರಾಯಣಗೌಡ ಮುಂತಾದವರನ್ನು ತೆಕ್ಕೆಗೆ ತೆಗೆದುಕೊಂಡು ಲೋಕಸಭಾ ಚುನಾವಣೆ ಗೆದ್ದು ಪ್ರದಾನಿಯಾದ ಅಣ್ಣಾ ದೇವೇಗೌಡರ ಬಲಭಾಗದಲ್ಲಿ ನಿಂತು ದೆಹಲಿಯ ಮಾಯಾ ರಾಜಕಾರಣದ ಒಳಸುಳಿಗಳನ್ನು ಅರಿಯುವ ಪ್ರಯತ್ನದಲ್ಲಿ ಇಬ್ರಾಹಿಮ್ ಮಾರ್ಗದರ್ಶಕರಾಗುತ್ತಾರೆ.
80 ಫೀಟ್ ರೋಡ್ ರಾಜ್ ಕುಮಾರ್ ರಸ್ತೆಯ ಟಿಯಾಂಕ ಕಛೇರಿಯಲ್ಲಿ ಕುಳಿತ ರಾಜ್ ಕುಮಾರ್ ಅಭಿಮಾನಿ ಕುಮಾರಸ್ವಾಮಿ ಗೆದ್ದು ಸೋತು ಮತ್ತೆ ವಿಧಾನಸಭೆಗೆ ರಾಮನಗರ ಕ್ಷೇತ್ರದಿಂದ ಪ್ರವೇಶ ಮಾಡುತ್ತಾರೆ. ಅಂಬರೀಷ್ ಅವರಿಗೆ ಕ್ಷೇತ್ರ ಧಾರೆ ಎರೆದಿದ್ದ ಗೌಡರ ಮರ್ಯಾದೆಯನ್ನು ಸೋಲಿಸಿ ಸಿ ಎಂ ಲಿಂಗಪ್ಪ ಆಯ್ಕೆಯಾಗಿರುತ್ತಾರೆ.
ಮುಖ್ಯಮಂತ್ರಿ, ಪ್ರದಾನಿ ಆದ ರಾಮನಗರ ಕ್ಷೇತ್ರ ಕೈ ತಪ್ಪಿದ್ದನ್ನು 2004 ರಲ್ಲಿ ಕುಮಾರಸ್ವಾಮಿ ಮತ್ತೆ ಪಡೆದು ಕೊಂಡು ಸ್ವಕ್ಷೇತ್ರ ಮಾಡಿಕೊಳ್ಳುತ್ತಾರೆ. ಅಲ್ಲಿಂದಲೇ ಮುಖ್ಯಮಂತ್ರಿಯೂ ಆಗುತ್ತಾರೆ.
ಮತ್ತದೇ ಪ್ರೆಸ್ ಕ್ಲಬ್ ಮೀಟ್ ದ ಪ್ರೆಸ್ ನಲ್ಲಿ ಬಿಜೆಪಿಯ ಜತೆ ಕೂಡಿಕೆ ಮಾಡಿಕೊಂಡು ಮುಖ್ಯಮಂತ್ರಿಯಾದವರನ್ನು ಜಾತ್ಯಾತೀತದ ಪ್ರಶ್ನೆಯನ್ನು ಒಂದೇ ಮಾತಿನಲ್ಲಿ ಹೊಡೆದು ಉರುಳಿಸಿ ಗೌಡರ ಎದೆಗೆ ಚೂರಿಯಿಂದ ಹಿರಿಯುತ್ತಾರೆ.
ಅಹಿಂದ ಸಭೆಗಳಲ್ಲಿ ಭಾಗವಹಿಸಿ ಸಿದ್ದರಾಮಣ್ಣ ಅಧಿಕಾರ ಕಳೆದುಕೊಂಡು ಹಳ್ಳಿ ಹಕ್ಕಿಯ ಮೂಲಕ ಕಾಂಗ್ರೆಸ್ ಪ್ರವೇಶಿಸಿ ಪ್ರಯಾಸದ ಗೆಲುವು ಸಾಧಿಸಲು ಇದೇ ಕುಮಾರಸ್ವಾಮಿ ಚಾಮುಂಡೇಶ್ವರಿಯಲ್ಲಿ ಕುಳಿತು ಸಿದ್ದರಾಮಣ್ಣನ ಎಡೆಮುರಿ ಕಟ್ಟುತ್ತಾರೆ.
ಸಿದ್ದರಾಮಣ್ಣ ಮುಂದೆ ಎರಡನೇ ಸಲ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯನ್ನು ಬುಗುರಿ ಆಡಿಸಿ ಅಧಿಕಾರದಿಂದ ಕೆಡುವುತ್ತಾರೆ. ಕುಮಾರಸ್ವಾಮಿ ಮತ್ತು ನಲ್ವತ್ತು ಶಾಸಕರು ಬಿಜೆಪಿ ಜತೆಗೆ ಸೇರಿ ಟ್ವೆಂಟಿ ಅಧಿಕಾರ ಅನುಭವಿಸಿ ಯಡೂರಪ್ಪ ಅವರನ್ನು ಅಧಿಕಾರದಲ್ಲಿ ಮುಂದುವರೆಯದಂತೆ ನೋಡಿಕೊಳ್ಳುತ್ತಾರೆ.
ರೊಚ್ಚಿಗೆದ್ದ ರಾಜಾಹುಲಿ ಮತ್ತೆ ಚುನಾವಣೆಗೆ ಹೋಗಿ 108 ಗೆದ್ದು ಸಿದ್ದರಾಮಣ್ಣ ನೆರವಿನಿಂದ ಪಕ್ಷೇತರರನ್ನು ಸೇರಿಸಿ ಮುಖ್ಯಮಂತ್ರಿಯಾಗಿ ರೆಡ್ಡಿ ಬ್ರದರ್ಸ್ ಮೂಲಕ ಆಪರೇಶನ್ ಕಮಲಕ್ಕೆ ನಾಂದಿ ಹಾಡುತ್ತಾರೆ.
ಕುಮಾರಣ್ಣನೊಂದಿಗಿದ್ದ ಚೆಲುವಣ್ಣ, ಜಮೀಲಣ್ಣ, ಬಾಲಣ್ಣ, ಪುಟ್ಟಣ್ಣನಂತ ಅಣ್ಣ ತಮ್ಮಂದಿರನ್ನೆಲ್ಲಾ ಒಡೆದು ಸಿದ್ದರಾಮಣ್ಣ ರಾಜ್ಯಸಭೆಗೆ ರಾಮಮೂರ್ತಿಯನ್ನು ಕಳಿಸುತ್ತಾರೆ. ಜೆಡಿಎಸ್ ನಲ್ಲಿ ರಾಜ್ಯಸಭೆ ಮೇಲ್ಮನೆಯ ದ್ರವ್ಯಗಳು ಶಾಸಕರ ತಿಜೋರಿಗೆ ಬರುವುದಿಲ್ಲ.
ಅದೇನಿದ್ದರೂ ಪಾರ್ಟಿ ಫಂಡ್ ಗೆ ಹೋಗುತ್ತದೆ. ಮೊದಲ ಸಲ ರಾಮಮೂರ್ತಿಯವರ ಹಣ ಅಣ್ಣಂದಿರ ತಿಜೋರಿಗೆ ಹರಿಯುತ್ತದೆ. ಮತ್ತೆ ಮುಖ್ಯಮಂತ್ರಿಯಾದಾಗ ಬರುವ ಲೋಕಸಭಾ ಚುನಾವಣೆಗೆ ಮಂಡ್ಯದ ಫಲವತ್ತಾದ ನೆಲದಲ್ಲಿ ಸಿನಿಮಾ ಜೋಡೆತ್ತುಗಳು ರಾಜಕಾರಣದ ಜೋಡೆತ್ತುಗಳನ್ನು ಕೊಟ್ಟಿಗೆಗೆ ಕಟ್ಟಿ ಎಲ್ಲಿದ್ದೀರಪ್ಪ ಅಂತ ಹುಡುಕುವಂತಾಗುತ್ತದೆ.
ಅದರ ಕರಿನೆರಳು ಇನ್ನೂ ಕುಮಾರಣ್ಣನನ್ನು ಭಾಧಿಸುತ್ತಲೇ ಇದೆ. ಅದೇ ಸುಮಲತಾ ಅಂಬರೀಷ್ ತೇಜೋವಧೆ ಕಾರ್ಯಕ್ರಮ. ಮಳವಳ್ಳಿ ಹುಚ್ಚೇಗೌಡರ ಸೊಸೆ, ಅಂಬರೀಷ್ ಧರ್ಮಪತ್ನಿ ಅಭಿಶೇಕನ ಅಮ್ಮಾ ಈಗ ಮಂಡ್ಯ ದಲ್ಲಿ ಶಾಶ್ವತವಾಗಿ ನೆಲಸಲು ಗುದ್ದಲಿ ಪೊಜೆ ಮಾಡಿದ್ದಾರೆ.
ಇತ್ತ ಮೈಸೂರಿನಲ್ಲಿ ಮರ್ಯಾದೆ ಮಹೇಶಣ್ಣನನ್ನು ಕಟ್ಟಿಕೊಂಡು ವಿಶ್ವನಾಥ್, ಜಿಟಿ ದೇವೇಗೌಡರನ್ನು ಹಳಿಯುವ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಗಿಸಲು ಅವರೇ ಮುಹೂರ್ತ ಇಟ್ಟುಕೊಂಡಿದ್ದಾರೆ. ನಿಜ ಮುಹೂರ್ತದ ರೇವಣ್ಣ ಹಾಸನದಲ್ಲಿ ಪ್ರೀತಂ ಕೆಡವಲು ಮುಹೂರ್ತ ಇಡುವುದರಲ್ಲೇ ಬಿಜಿಯಾಗಿದ್ದಾರೆ.
ಚಕ್ರವ್ಯೂಹ ಚಿತ್ರದ ಮುಂದಿನ ಭಾಗವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವೆಲ್ಲ ವೀಕ್ಷಿಸಿ ಆನಂದಿಸಬಹುದು. ಸುಮಲತಾ ಅಂಬರೀಷ್ ತಮ್ಮ ಕ್ಯಾಂಡಿಡೇಟ್ ಗಳನ್ನು ಅಖಾಡಕ್ಕೆ ಇಳಿಸಲಿದ್ದಾರೆ, ಅವರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಮುಕ್ತ ಬೆಂಬಲವಿದೆ.
ಮತ್ತೊಮ್ಮೆ ದೇವೇಗೌಡರನ್ನು ಬಿಟ್ಟು ಆಟ ಕಟ್ಟುವ ಕುಮಾರಸ್ವಾಮಿ ಮಣ್ಣಿನ ಮಕ್ಕಳ ಮಂಡ್ಯದಲ್ಲಿ ಠೇವಣಿ ಕಳೆದುಕೊಂಡು ಹಲಬುವುದನ್ನು ನಿವಾರಿಸುವ ಶಕ್ತಿ ಇರುವುದು ದೇವೇಗೌಡರಿಗೆ ಮಾತ್ರ. ಅದರೆ ಕುಮಾರಸ್ವಾಮಿಯ ಆಚಾರವಿಲ್ಲದ ನಾಲಿಗೆ ಏನೇನು ನುಡಿಯುತ್ತದೆ ಎಂಬುದರ ಮೇಲೆ ಮಂಡ್ಯ ದಳಪತಿಗಳ ಭವಿಷ್ಯ ಅಡಗಿದೆ ನನಗಂತೂ ಅದು ಮಸುಕು ಮಸುಕಾಗಿ ಕಾಣಿಸುತ್ತಿದೆ…