ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 600 ಕೋಟಿ ರೂ ಅನುದಾನ ಬಿಡುಗಡೆ : : ಸಭಾಪತಿ

ಬೆಂಗಳೂರು :ವಿಧಾನ ಪರಿಷತ್ತಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 600 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ಇಂದು ವಿಧಾನಸೌಧದಲ್ಲಿ ವಿಧಾನ ಪರಿಷತ್ತಿನ ಸಭಾಪತಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಶಾಸಕರ ಸ್ಥಳೀಯ ಪ್ರದೇಶಾಭಿವೃ ದ್ಧಿ ಅನುದಾನವನ್ನು ಕಡಿತ ಮಾಡುವ ಬಗ್ಗೆ ಮತ್ತು ಬಯಲು ಸೀಮೆ ವ್ಯಾಪ್ತಿಗೆ ಬರುವ ವಿಧಾನ ಸಭೆ ಕ್ಷೇತ್ರಗಳ ಅಭಿವೃದ್ಧಿಗೆ ಘೋಷಿಸಿದ್ದ ಅನುದಾನ ಬಿಡುಗಡೆಯಾಗದಿರುವ ಕುರಿತು ರಚಿಸಲಾಗಿದ್ದ ಐವರು ಸದಸ್ಯರ ಅಂತಿಮ ಸಭೆಯ ಅಧ್ಯಕ್ಷತೆ ವಹಿಸಿ ನಂತರ ಮಾತನಾಡಿದ ಅವರು ಶಾಸಕರ ಅನುದಾನ ಬಿಡುಗಡೆ ವಿಳಂಬ ಕುರಿತು ಇದ್ದ ಅಡೆತಡೆ ನಿವಾರಿಸುವ ಸಲುವಾಗಿ ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರನ್ನೊಳಗೊಂಡ 5 ಜನರ ಸಮಿತಿ ರಚಿಸಲಾಗಿತ್ತು ಎಂದು ಅವರು ಹೇಳಿದರು.

ಆ ಸಮಿತಿಯ ಸಭೆಯನ್ನು ಸಹ ಸೆ 13 ರಂದು ನಡೆಸಲಾಯಿತು.ಆರ್ಥಿಕ ಹಾಗೂ ಯೋಜನಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಇದ್ದ ಆತಂಕಗಳ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎರಡೂ ಸಭೆಗಳು ಯಶಸ್ವಿ ಯಾಗಿದ್ದು,ಅದರ ಫಲಶ್ರುತಿಯಾಗಿ ಬಿಡುಗಡೆಗೆ ಬಾಕಿ ಇದ್ದ ಅನುದಾನ ಸುಮಾರು 600ಕೋಟಿ ಬಿಡುಗಡೆಯಾಗಿದೆ.ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಿಡುಗಡೆಗೆ ಇದ್ದ ನೀತಿ ನಿಯಮಗಳನ್ನು ಸರಳೀಕರಣಗೊಳಿಸಿ ಪರಿಷ್ಕರಿಸಲಾದ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಕಾರ್ಯ ಪ್ರವೃತ್ತರಾಗಿರುವುದು ಸಂತಸದ ಸಂಗತಿ.2021-22ನೇ ಸಾಲಿನ ಮೊದಲ ಕಂತು ಸುಮಾರು 150 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು ಜಿಲ್ಲಾಧಿಕಾರಿಗಳ ಖಾತೆಗೆ ಜಮೆಯಾಗಿದೆ.ಸಭೆಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಬಾಕಿ ಇದ್ದ 2018-19,2019-20, 2020-21 ನೇ ಸಾಲಿನ ಅನುದಾನವನ್ನು ಬಾಕಿ ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದು ಅವರು ವಿವರಿಸಿದರು.

2021-22ನೇ ಸಾಲಿಗೆ 1 ಕೋಟಿ ರೂಪಾಯಿ ಅನುದಾನ ಬದಲು 2ಕೋಟಿ ರೂ ಅನುದಾನ ಮಂಜೂರು ಮಾಡುವ ಬಗ್ಗೆ ನಿರ್ದೇಶನ ನೀಡಲಾಗಿದೆ.ಅದರಂತೆ ಕೂಡಲೇ ಎಲ್ಲಾ ಶಾಸಕರಿಗೆ 2021-22ನೇ ಸಾಲಿಗೆ ಕ್ರಿಯಾ ಯೋಜನೆ ರೂಪಿಸಲು ಅನುಮತಿ ನೀಡಿ ಎಲ್ಲಾ ಜಿಲ್ಲಾಧಿಕಾರಿಗಳು ಎರಡು ಕೋಟಿ ರೂಗಳಿಗೆ ಕ್ರಿಯಾ ಯೋಜನೆ ರೂಪಿಸಲು ಅನುಮೋದನೆ ನೀಡಲಾಯಿತು.ಮಾರ್ಗಸೂಚಿಗಳ ಪ್ರಕಾರ ಪ್ರತಿ ವರ್ಷ ಜೂನ್ ಅಂತ್ಯದೊಳಗಾಗಿ ಕ್ರಿಯಾ ಯೋಜನೆ ಅಂತಿಮಗೊಳಿಸಿ ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡುವ ಕುರಿತು ಒಪ್ಪಿಗೆ ಸೂಚಿಸಲಾಗಿದೆ.ಇನ್ನು ಮುಂದೆ ಯೋಜನಾ ಇಲಾಖೆಯು ಅನುದಾನವನ್ನು ಕ್ಷೇತ್ರವಾರು ಬಿಡುಗಡೆ ಮಾಡುವ ಬದಲು ಜಿಲ್ಲಾವಾರು ಬಿಡುಗಡೆ ಮಾಡಲು ಆದೇಶ ನೀಡಲಾಗಿದೆ.ಲಭ್ಯವಿರುವ ಅನುದಾನವನ್ನು ಸ್ಥಳೀಯ ಜಿಲ್ಲಾಧಿಕಾರಿಗಳು ಪ್ರತಿ ಕ್ಷೇತ್ರಕ್ಕೆ 2 ಕೋಟಿ ರೂಗಳ ಮಿತಿಯಲ್ಲಿ ಪ್ರಗತಿಯಾಧರಿಸಿ ಹಣ ಪಾವತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶಸಲಾಗಿದೆ ಎಂದು ಅವರು ನುಡಿದರು.

2020-21 ನೇ ಸಾಲಿನಲ್ಲಿ ಪ್ರತಿ ಕ್ಷೇತ್ರಕ್ಕೆ 1ಕೋಟಿ ರೂ. ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾ ಗಿತ್ತು.ಹೆಚ್ಚುವರಿಯಾಗಿ ಬಿಡುಗಡೆಯಾಗಿರುವ ಅನುದಾನ ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂಪಾಯಿಗಳನ್ನು 2019-20ನೇ ಸಾಲಿಗೆ ವರ್ಗಾಯಿಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

2018-19ನೇ ಸಾಲಿಗೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರಕ್ಕೆ ಬಿಡುಗಡೆಗೆ ಬಾಕಿ ಇರುವ 127.67 ಕೋಟಿಯನ್ನು ಬಿಡುಗಡೆಗೊಳಿಸಲು ಪ್ರಸ್ತುತ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು.

ವಿಧಾನಪರಿಷತ್ತಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 600 ಕೋಟಿ ರೂ ಅನುದಾನ ಬಿಡುಗಡೆಯಾಗಿರುವುದು ಶ್ಲಾಘನೀಯವಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಕೆ.ಸಿ.ಕೊಂಡಯ್ಯ, ಹನುಮಂತ ನಿರಾಣಿ ಹಾಗೂ ಅಪ್ಪಾಜಿಗೌಡ ಅವರು ಸಭಾಪತಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.

More News

You cannot copy content of this page