ಯಾರ ಕೈಗೂ ಸಿಗದ ನವಿಲು : ಲಿಂಗಾಯತ ಮಾಜಿ ಮುಖ್ಯಮಂತ್ರಿ ಅವರ ಸುಪುತ್ರ ಈಗ ಸಿಎಂ

ವೈ ಜಿ ಅಶೋಕ್ ಕುಮಾರ್ , ಹಿರಿಯ ಪತ್ರಕರ್ತರು                                                  

ದೇವರಾಜ ಅರಸರ ಕಾಲದಿಂದಲೂ ಯಾರೇ ಮುಖ್ಯಮಂತ್ರಿಯಾಗಲಿ ಅವರ ಸುಪುತ್ರರು ಅಳಿಯಂದಿರು ಶಕ್ತಿ ಕೇಂದ್ರದಲ್ಲಿ ಕಾಣಿಸಿಕೊಳ್ಳುವುದು ಸಹಜ. ಸೋಮಪ್ಪ ರಾಯಪ್ಪ ಬೊಮ್ಮಾಯಿಯವರನ್ನು ಹೆಗಡೆ ಮತ್ತು ದೇವೇಗೌಡರು ಸಂಕಷ್ಟ ಸಮಯದಲ್ಲಿ ತಮ್ಮ ದಾಳವನ್ನಾಗಿ ಬಳಸಿಕೊಂಡ ಪರಿಣಾಮ ಬೊಮ್ಮಾಯಿ ಯಾವುದಾದರೊಂದು ಹುದ್ದೆ ಸ್ಥಾನಮಾನದಲ್ಲಿರುತ್ತಿದ್ದರು.

ಜೆ ಹೆಚ್ ಪಟೇಲರು ‘ಯಾರ ಕೈಗೂ ಸಿಗದ ನವಿಲು ‘ ಆಗಿದ್ದರಿಂದ ಇಬ್ಬರೂ ನಾಯಕರು ತಮ್ಮ ರಾಜಕೀಯ ನಡೆಯನ್ನು ಬೊಮ್ಮಾಯಿ ಮೂಲಕ ನಡೆಸುತ್ತಿದ್ದರು. ಹೆಗಡೆ ಗೌಡರ ನಡುವೆ ಮೂರನೆಯ ಆಯಾಮವಾಗಿದ್ದರು. ಹಾಗಾಗಿ ಹೆಗಡೆ ನಂತರವಾದರೂ ಒಲಿಯಬೇಕಾಗಿದ್ದ  ಮುಖ್ಯಮಂತ್ರಿ ಸ್ಥಾನ ಗೌಡರಿಗೆ ದಕ್ಕದೇ ಬೊಮ್ಮಾಯಿ ಪಾಲಾಯಿತು. (ಈಗಲೂ ಅದೇ ಆಗಿದೆ).

ಗೌಡರು ಬಿ ರಾಚಯ್ಯನವರ ಬೆಂಬಲಕ್ಕೆ ನಿಂತರಾದರೂ ಬಹಿರಂಗವಾಗಿ ಘೋಷಿಸಲು ಹಿಂಜರಿದ ಸಂದರ್ಭವೇ ಬೊಮ್ಮಾಯಿ ಆಯ್ಕೆ ಸುಗಮವಾಗಲು ಬಹು ಮುಖ್ಯ ಕಾರಣ. ಆದರೆ ಆ ಅಧಿಕಾರವೂ ಪೂರ್ಣವಾಗಿ ಉಳಿಯಲಿಲ್ಲ. ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನದ ಆಶಯದಂತೆ ಬೊಮ್ಮಾಯಿ ಯಾವತ್ತೂ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ  ಜೀವಂತವಾಗಿರುತ್ತಾರೆ.

“ಮುಖ್ಯಮಂತ್ರಿ ಆಯ್ಕೆ  ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆಯಬೇಕು ಮತ್ತು ವಿಶ್ವಾಸಮತ ಅಸೆಂಬ್ಲಿಯಲ್ಲಿ ಗಳಿಸಬೇಕು ಹೊರತು ರಾಜ್ಯಪಾಲರ ಮನೆಯ ಅಂಗಳದಲ್ಲಿ ತಲೆ ಎಣಿಸುವ ಮೂಲಕ ಅಲ್ಲ” ಎಂಬ ಮಹತ್ವದ ಶಾಸನ ರೂಪುಗೊಳ್ಳಲು ಅಧಿಕಾರ ವಂಚಿತ ಬೊಮ್ಮಾಯಿಯವರ ಶಕ್ತಿಯೇ ಮೂಲ ಕಾರಣ…

ಆ ಸಮಯದಲ್ಲಿ ಪತ್ರಕರ್ತರಿಗೆ ಪರಿಚಯವಾದ ‘ಬಸು’ (28.1.1960)  ಇವತ್ತಿನ ಮುಖ್ಯಮಂತ್ರಿ ಆಯ್ಕೆಯ ಬಸವರಾಜ ಬೊಮ್ಮಾಯಿ. 28 ರಂದು ಜನಿಸಿದ ಬೊಮ್ಮಾಯಿ 28 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ಸೀಕರಿಸುತ್ತಿದ್ದಾರೆ. ( most of all other leaders born in 1.10.19.28).

ಈಗಿನ ಮುಖ್ಯಮಂತ್ರಿಗೆ ಹಲವು ಗುರುಗಳು, ಸ್ವತಃ ತಂದೆ ಸೇರಿದಂತೆ ಹೆಗಡೆ, ಪಟೇಲ್ ಪ್ರಕಾಶ್, ಸಿದ್ದರಾಮಯ್ಯ ದೇವೇಗೌಡರ ಜತೆಗೆ ಮಗನಂತೆ ಅಧಿಕಾರ ಹಸ್ತಾಂತರಿಸಿದ ಯಡಿಯೂರಪ್ಪ. ಆದರೆ ಬಹುತೇಕರು ಭಾವಿಸಿಕೊಂಡಂತಲ್ಲ. ಈ ನವಿಲು ಕೂಡಾ ಯಾರ ಜಪ್ತಿಗೂ ಸಿಗುವುದಿಲ್ಲ.

ನೀವು ನೋಡ ನೋಡುತ್ತಿದ್ದಂತೆ ಪ್ರದಾನಿ ಸೇರಿದಂತೆ ಹಲವು ದೆಹಲಿ ಮುಖಂಡರ ಒಲವು ಗಳಿಸಿ ತನ್ನದೇ ಸಾಮ್ರಾಜ್ಯ ವಿಸ್ತರಿಸುವುದು ಸತ್ಯ. ಮುಂದಿನ ಚುನಾವಣೆಗೂ ಇವರ ನೇತೃತ್ವ ಅಂತಾ ವರಿಷ್ಠರು ಹೇಳಿರುವುದು ಅನೇಕರಲ್ಲಿ  ಆಶ್ಚರ್ಯವನ್ನುಂಟು ಮಾಡಿದೆ.

 ಈ ಅಸೆಂಬ್ಲಿ ಸೇರಿದಾಗ ನಿಮಗೊಂದು ವಿಹಂಗಮ ನೋಟ ಕಾಣುವುದಾದರೆ ವಿಧಾನಸಭೆಯ ಕಾನೂನು ನಡವಳಿಕೆ ಪ್ರಕಾರ ನಿಮ್ಮ ಕಣ್ಣಿಗೆ ಮುಖ್ಯವಾದ ಮೂರು ಸ್ಥಾನಗಳಲ್ಲೂ ಜನತಾ ಪರಿವಾರದ ನಾಯಕರೇ ಕಾಣಸಿಗುತ್ತಾರೆ. ಆಡಳಿತ ಪಕ್ಷದ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ. ಇದೊಂದು ಅಪರೂಪದ ಸಂದರ್ಭ

ಮುಖ್ಯಮಂತ್ರಿ ಯಡಿಯೂರಪ್ಪನವರ ಮಾನಸ ಪುತ್ರನಂತೆ ಓಡಾಡುತ್ತಾ, ಗೃಹ ಮಂತ್ರಿಯಾಗಿ ನಂತರ ಸಂದಿಗ್ಧ ಪರಿಸ್ಥಿತಿಯನ್ನು ನಿವಾರಿಸುವ ಸಂಸದೀಯ ಸಚಿವ ನಾಗಿ ಬಸವರಾಜ ಬೊಮ್ಮಾಯಿ,  ಬಿಜೆಪಿ ಸರ್ಕಾರದ ಪಾಲಿಗೆ ಆಪತ್ಬಾಂಧವರಾದರು.  ಮಾಧು ಸ್ವಾಮಿಯವರ ತಕಥೈ ತದಿಗಿಣಥೂಂ ಮಿತಿ ಮೀರಿದಾಗ ಆ ಜಾಗಕ್ಕೆ ಬೊಮ್ಮಾಯಿಯವರನ್ನು ನಿಲ್ಲಿಸಲಾಯಿತು.

ಕಾನೂನು ಮತ್ತು ಸಂಸದೀಯ ಸಚಿವರು ವಿಧಾನಸಭೆಯಲ್ಲಿ ಕೂರುವುದಕ್ಕಿಂತ ನಿಲ್ಲುವುದೇ ಹೆಚ್ಚು. ಜೆ ಹೆಚ್ ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿ, ಜಲಸಂಪನ್ಮೂಲ, ಗೃಹ ಮಂತ್ರಿಯಾಗಿ ಅನುಭವವಿದೆ.  ಜಲ ವಿವಾದಗಳು ಮತ್ತು ಹಣಕಾಸು ಇಲಾಖೆಯ ಜ್ಞಾನ ಇರೋದರಿಂದ ಹಣಕಾಸು ಖಾತೆಯನ್ನು ನಿಭಾಯಿಸಬಲ್ಲರು. ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಪ್ರಮುಖ ಸಮಸ್ಯೆ ವರಿಷ್ಟರನ್ನು ಒಲಿಸಲು ಬೇಕಿದ್ದ ಸಂಪರ್ಕದ ಕೊರತೆ. ಇಂಗ್ಲಿಷ್, ಹಿಂದಿ ಹಾಗಾಗಿ ಅಲ್ಲಿ ಅನಂತ್ ಕುಮಾರ್ ಯಶಸ್ಸು ಸಾಧಿಸಿದ್ದರು.

ಆಗಲೇ ಯಡಿಯೂರಪ್ಪನವರ ದೂರ ಆಲೋಚನೆ,  ಮುತ್ಸದ್ದಿತನ ಕೆಲಸ ಮಾಡಿತ್ತು. ವರಿಷ್ಠರ ಮುಂದೆ ಯಡಿಯೂರಪ್ಪ ವಿರುದ್ಧ ದೂರು ಬಂದಾಗಲೂ ಸ್ಥಾನ ತ್ಯಜಿಸುವುದೇ ಆದರೆ ನನ್ನ ಆಯ್ಕೆ ಬಸವರಾಜ ಬೊಮ್ಮಾಯಿ ಎಂದು ಒಂದೇ ಏಟಿಗೆ ಹೇಳಿದ್ದರು. ವಿಜಯೇಂದ್ರ ಜತೆಗೆ ವರಿಷ್ಟರನ್ನು ಮೇ ತಿಂಗಳಲ್ಲಿ ಭೇಟಿ ಮಾಡಿದಾಗ ಮುಖ್ಯಮಂತ್ರಿಯಾಗುವ ಸುಳಿವು ದೊರೆತಿತ್ತು ಎಲ್ಲೂ ಬಾಯಿ ಬಿಡದಂತೆ ಸೂಚಿಸಿದ್ದರು ಹಾಗಾಗಿ ಇವೆಲ್ಲವೂ ಪೂರ್ವ ನಿಯೋಜಿತ.

ಹಾಗಾಗಿಯೆ ಯಡಿಯೂರಪ್ಪ 25 ರಂದು ವರಿಷ್ಟರ ಸೂಚನೆ ಬರುತ್ತೆ ಕಾಯಿರಿ ಎಂದು ಪಕ್ಷದ ಇತರ ಮುಖಂಡರು ಮತ್ತು ಮೀಡಿಯಾಗಳ ದಾರಿ ತಪ್ಪಿಸಿದರು .ಈ ಹಿಂದೆ ಸದಾನಂದಗೌಡ, ಜಗದೀಶ್ ಶೆಟ್ಟರ್ ಕಲಿಸಿದ ಪಾಠ ಈಗ ವಾಸ್ತವವಾಗಿತ್ತು. ಎಲ್ಲಾ ಜವಾಬ್ದಾರಿಗಳನ್ನು ವರಿಷ್ಟರಿಗೆ ಒಪ್ಪಿಸಿದಂತೆ ಅಧಿಕಾರ ಬಿಡುವ ಮಾತಾಡಿದರು.

ಅತ್ತರು; ನಕ್ಕರು, ಮಿಕ್ಕ ಮಿಕಗಳು ಬೇಸ್ತು ಬಿದ್ದರು. ಹಾಗಾಗಿ ಬೊಮ್ಮಾಯಿ ಯಾರ ಜಪ್ತಿಗೂ ಸಿಗುವುದಿಲ್ಲ, ಯಡಿಯೂರಪ್ಪ ರಾಜೀನಾಮೆ ವಿಳಂಬ ಮತ್ತು ಎರಡು ವರ್ಷಗಳು ಪೂರೈಸಿದ ಲೆಕ್ಕಕ್ಕೆ ಕಾಯಬೇಕಿತ್ತಷ್ಟೇ, ಇಲ್ಲದಿದ್ದರೆ ಮೇ ತಿಂಗಳಲ್ಲಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುತ್ತಿದ್ದರು.

ಈಗ ರಾಜಕಾರಣದ ಆಷಾಢದ ಸಿಹಿ ಗಾಳಿಯನ್ನು ಅನುಭವಿಸುತ್ತಿದ್ದಾರೆ. ಇವತ್ತು ಮುಖ್ಯಮಂತ್ರಿ ವಿಧಾನಸಭೆಯನ್ನು ಆರಾಮ ಶಾಲೆಯಂತೆ ನಡೆಸಬಲ್ಲರು. ಅದಕ್ಕೆ ಬೇಕಾದ ತಾಲೀಮು ಆಗಿದೆ. ಆದರೆ ಜನತಾ ಪರಿವಾರದ ಬಹುತೇಕರಿಗೆ ಇರುವ ವೀಕ್ನೆಸ್ ಗಳು ಭಾಜಪ ಮಂತ್ರಿಗಳ ಸಿ ಡಿ ಕೇಸುಗಳಿಗೆ ಒಳಗಾಗದಿದ್ದರೆ ಬಸು ಎಂಬ ಬೊಮ್ಮಾಯಿ ಸ್ಥಾನ ಮಾನ ಬಹಳ ಕಾಲ ನಡೆಯಬಲ್ಲದು. ಇಲ್ಲದಿದ್ದರೆ ಬ್ಲಾಕ್ ಮೇಲ್ ಗೆ ತುತ್ತಾಗಿಬಿಡಬಲ್ಲರು. ಟೇಕ್ ಕೇರ್…

ಇಲ್ಲಿ ಹೇಳಲೇಬೇಕಾದ ಪ್ರಮುಖ ಅಂಶವೆಂದರೆ ಹಲವರು ಲಿಂಗಾಯತ ಮುಖ್ಯಮಂತ್ರಿಗಳು ಆಗಿ ಹೋದರು. ಆದರೆ ಅವರ ಮಕ್ಕಳ್ಯಾರು ಆ ಸ್ಥಾನಕ್ಕೆ ಬರಲಾಗಲಿಲ್ಲ. ಅಂತಹ ಅದೃಷ್ಟವಂತ ಸುಪುತ್ರ ಬಸವರಾಜ ಬೊಮ್ಮಾಯಿ ಅವರ ಜಾತಕದಲ್ಲೂ ಯೋಗವಿದೆಯಂತೆ. ಕ್ರೆಡಿಟ್ ಗೋಸ್ಟೂ ರಾಜಾಹುಲಿ !

More News

You cannot copy content of this page