ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಬಹಿರಂಗ ಚರ್ಚೆಗೆ ಬನ್ನಿ : ಮಾಜಿ ಸಂಸದ ಉಗ್ರಪ್ಪ ಬಿಜೆಪಿಗೆ ಪಂಥಾಹ್ವಾನ

ಬೆಂಗಳೂರು : ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಗೆ ಕಾಂಗ್ರೆಸ್ ನೀಡಿದ ತೈಲ ಬಾಂಡ್ ಗಳೇ ಕಾರಣ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ, ಇಂತಹ ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿಯವರ ಜತೆ ಬಹಿರಂಗ ಚರ್ಚೆಗೆ  ಸಿದ್ಧ  ಎಂದು ಸಂಸದ ವಿ ಎಸ್ ಉಗ್ರಪ್ಪ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾರೆಲ್ ಕಚ್ಚಾತೈಲ ಬೆಲೆ 120-130 ಡಾಲರ್ ಇದ್ದಾಗ ಜನರಿಗೆ ಹೊರೆ ಹೆಚ್ಚಾಗಬಾರದು ಎಂದು ಸಬ್ಸಿಡಿ ಮೂಲಕ ಹೊರೆ ಇಳಿಸಲು ಕಾಂಗ್ರೆಸ್ ಸರ್ಕಾರ 1.34 ಲಕ್ಷ ಕೋಟಿಯಷ್ಟು ತೈಲ ಬಾಂಡ್ ನೀಡಿದ್ದು ನಿಜ. ನಾವು ಜನರ ಒತ್ತಡ ಕಡಿಮೆ ಮಾಡಲು ಇದನ್ನು ಜಾರಿಗೆ ತಂದಿದ್ದೆವೆಯೇ ಹೊರತು ಕಿಕ್ ಬ್ಯಾಕ್ ಪಡೆಯಲು ಅಲ್ಲ ಎಂದು ಸ್ಪಷ್ಟಪಡಿಸಿದರು.

ಈ ವರ್ಷ 10 ಸಾವಿರ ಕೋಟಿಯಷ್ಟು ಹಣವನ್ನು ಈ ತೈಲ ಬಾಂಡ್ ಗೆ ಪಾವತಿ ಮಾಡಬೇಕಾಗಿದೆ. ಆದರೆ ಈ ವರ್ಷ ಏಪ್ರಿಲ್- ಜುಲೈ ಅವಧಿಯಲ್ಲಿ ಕೇಂದ್ರ ಸರ್ಕಾರ ತೆರಿಗೆ  ಮೂಲಕ 32,492 ಕೋಟಿಯಷ್ಟು ಹಣ ಸಂಗ್ರಹಿಸಿದೆ ಎಂದು ವಿವರಿಸಿದರು.

ಬಿಜೆಪಿ ಸರ್ಕಾರ ಕಳೆದ 7 ವರ್ಷಗಳಲ್ಲಿ ಈ ಇಂಧನಗಳ ಮೇಲಿನ ತೆರಿಗೆಯಿಂದ 23 ಲಕ್ಷ ಕೋಟಿಯಷ್ಟು ಹಣ ಲೂಟಿ ಮಾಡಿದೆ, ಕಷ್ಟದ ಸಮಯದಲ್ಲಿ ನಾವು ಬಾಂಡ್ ಮೂಲಕ ಹಣ ಸಂಗ್ರಹಿಸಿ ಜನರ ಮೇಲೆ ಹೊರೆ ಇಳಿಸಲು ಕಾಂಗ್ರೆಸ್ ಪ್ರಯತ್ನಿಸಿದರೆ, ಬಿಜೆಪಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಅದರ ಪ್ರಯೋಜನ ಜನರಿಗೆ ಸಿಗದಂತೆ ಮಾಡಿದೆ ಎಂದು ಆರೋಪಿಸಿದರು.

ಜಾಗತಿಕ ಸಂಸ್ಥೆಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದ ಭಾರತವನ್ನು ಕೈಬಿಟ್ಟಿವೆ. ದೇಶದ ಜಿಡಿಪಿ ಋಣಾತ್ಮಕವಾಗಿ ಸಾಗಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದು, ಇದು ದೇಶಕ್ಕೆ ಆಗಿರುವ ಅಪಮಾನ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದುರಾಡಳಿತವೇ ಕಾರಣ ಎಂದು ಆರೋಪಿಸಿದರು.  

ಇತ್ತೀಚೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಸ್ವಚ್ಛ ಭಾರತ, ಪಿಎಂಜಿಎಸ್, ಪಿಎಂ ಅವಾಸ್ ಯೋಜನೆ, ರಾಷ್ಟ್ರೀಯ ಸುಸ್ಥಿರ ಕೃಷಿ, ಪ್ರಧಾನಮಂತ್ರಿ ಕೃಷಿ ಸಂಚಯ್ ಯೋಜನೆ, ವಿದ್ಯಾರ್ಥಿ ವೇತನ ಸೇರಿದಂತೆ ಪ್ರಮುಖ ಯೋಜನಗೆಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಯಾಪೈಸೆ ಅನುದಾನ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ ಎಂದರು.

ಕೇಂದ್ರದ ಪ್ರಮುಖ ವಲಯಗಳಾದ ಗ್ರಾಮೀಣಾಭಿವೃದ್ಧಿ, ವಸತಿ, ಕೃಷಿ ಸೇರಿದಂತೆ ಇತರೆ ವಲಯಗಳಿಗೆ 3,890 ಕೋಟಿ ರೂ. ಅನುದಾನ ಬೇಕಾಗಿದೆ. ಅದರಲ್ಲಿ ಕೇಂದ್ರದ ಪಾಲು 2,410 ಕೋಟಿ ರೂ., ರಾಜ್ಯದ ಪಾಲು 1,479 ಕೋಟಿ ರೂ. ಇದೆ. ಇದರಲ್ಲಿ ಕೇಂದ್ರದಿಂದ ಒಂದು ಪೈಸೆಯೂ ಕೇಂದ್ರ ಸರ್ಕಾರದಿಂದ ನೀಡುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದ ಜನರಿಗೆ ತೆರಿಗೆ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಮತ್ತೊಂದೆಡೆ ನಮ್ಮ ಜಿಎಸ್ ಟಿ ಪಾಲು ನೀಡುತ್ತಿಲ್ಲ. ಈ ಪ್ರಧಾನಿಯನ್ನು ಏನೆಂದು ಕರೆಯಬೇಕು? ಈ ದೇಶ ಕಂಡ ಅತ್ಯಂತ ಸುಳ್ಳುಗಾರ, ಜನರ ದಾರಿ ತಪ್ಪಿಸುವ ಪ್ರಧಾನಿ ಎಂದರೆ ಅದು ಮೋದಿ. ಈ ದೇಶ ಕಂಡ ಅತ್ಯಂತ ಭ್ರಷ್ಟ ಪ್ರಧಾನಿ ಮೋದಿ ಎಂದು ಉಗ್ರಪ್ಪ ಆರೋಪಿಸಿದರು.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ  ಚುನಾವಣೆಯಲ್ಲಿ 269 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ ಆಡಳಿತ ಪಕ್ಷ ಬಿಜೆಪಿಯ ಹಣ, ಅಧಿಕಾರ ದುರ್ಬಳಕೆ ಮಾಡಿದ ಹೊರತಾಗಿಯೂ 114 ಸ್ಥಾನ ಸಿಕ್ಕಿದೆ, ವಿರೋಧ ಪಕ್ಷಸ್ಥಾನದಲ್ಲಿರುವ ಕಾಂಗ್ರೆಸ್ ಕೋವಿಡ್ ಹಿನ್ನೆಲೆಯಲ್ಲಿ ಸರಿಯಾಗಿ ಪ್ರಚಾರ ಮಾಡಲಾಗದಿದ್ದರೂ 100 ಸ್ಥಾನದಲ್ಲಿ ಗೆದ್ದಿದೆ. ನಮಗೂ ಹಾಗೂ ಬಿಜೆಪಿಗೂ ಇರುವ ಅಂತರ ಕೇವಲ 14 ಸ್ಥಾನ ಮಾತ್ರ ಎಂದು ವಿವರಿಸಿದರು.

More News

You cannot copy content of this page