ಬೆಂಗಳೂರು : 2023ರ ಚುನಾವಣೆಯಲ್ಲಿ ಯಾರು ಯಾವ ಹಡಗನ್ನು ಮುಳುಗಿಸುತ್ತಾರೋ ಅಂತಾ ಕಾದು ನೋಡೋಣ, ಅಲ್ಲಿಯವರೆಗೆ ಈಗಿರುವ ಬಿಜೆಪಿ ಉಸ್ತುವಾರಿಯನ್ನೇ ಮುಂದುವರಿಸಿ ಅಂತಾ ಕೇಂದ್ರ ಬಿಜೆಪಿ ಮುಖಂಡರಲ್ಲಿ ಮನವಿ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ೬೦ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಏಳು ಬೀಳು ಎಲ್ಲಾ ನೋಡಿದ್ದಾರೆ, ಹಡಗುಗಳು ಮುಳುಗಿದಾಗ ಸಬ್ ಮೆರೀನ್ ಗಳು ಕೆಲಸ ಮಾಡುತ್ತವೆ, ಅದೇ ರೀತಿ ನಮ್ಮ ಜೆಡಿಎಸ್ ಪಕ್ಷ ಕೂಡಾ ಒಂದು, ಹಡಗು ಮುಳುಗಿದರೂ ಕೆಲಸ ಮಾಡುವ ಮೆಷಿನರಿಯನ್ನು ಪಕ್ಷದಲ್ಲಿ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.
ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡಿಲ್ಲ ಅಂತಾ ಹೇಳಿದ್ದಾರೆ, ಎರಡು ವರ್ಷ ಏನು ದ್ವೇಷದ ರಾಜಕಾರಣ ಮಾಡಿದ್ದಾರೆ ಅಂತಾ ಅಸೆಂಬ್ಲಿಯಲ್ಲಿ ಹೇಳುತ್ತೇನೆ, ರಾಜ್ಯದ ಸಿಎಂ ಸೌಜನ್ಯದಿಂದ ದೇವೇಗೌಡರನ್ನು ನೋಡಲು ಬಂದಿದ್ದರು, ಗೌರವ ಕೊಟ್ಟಿದ್ದೇವೆ, ನಾವೇನಾದರೂ ಬಿಜೆಪಿ ಜೊತೆ ಸೇರುತ್ತೇವೆ ಅರ್ಜಿ ಹಾಕಿದ್ದೇವಾ ಎಂದು ಟೀಕಿಸಿದರು.
ಕಲ್ಬುರ್ಗಿ ಪಾಲಿಕೆ ಅಧಿಕಾರ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಸಮಕಾಲೀನರು, ದೇವೇಗೌಡರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ, ಅದಕ್ಕೆ ನಾವು ಬದ್ಧ ಎಂದು ರೇವಣ್ಣ ತಿಳಿಸಿದರು.