ಬೆಂಗಳೂರು : ಪೆಟ್ರೋಲ್, ಡೀಸಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ರಾಜ್ಯ ಘಟಕದ ಮುಖಂಡರು, ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರತಿಭಟನಾಕಾರರಿಗಿಂತ ಪೊಲೀಸರ ಸಂಖ್ಯೆ ಹೆಚ್ಚಾಗಿದ್ದು ಕಂಡುಬಂದಿತ್ತು.
ನಗರದ ಮೌರ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲಾ ಆಸ್ತಿಗಳನ್ನ ಮಾರಾಟಕ್ಕಿಟ್ಟಿದೆ, ಒಂದೆಡೆ ಉದ್ಯೋಗವಿಲ್ಲ, ನಿರುದ್ಯೋಗ ಹೆಚ್ಚಾಗಿದೆ, ತೈಲ ಬೆಲೆ ಏರಿಕೆಯಾಗುತ್ತಲೇ ಇದೆ, ಕಣ ಕಣದಲ್ಲೂ ಬಿಜೆಪಿಯವರಲ್ಲಿ ಸುಳ್ಳೇ ತುಂಬಿದೆ, ಬರೀ ಅಪಪ್ರಚಾರ ಮಾಡುವುದೇ ಕೆಲಸವಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಂಬಾನಿ ಏಜೆಂಟ್ ಆಗಿದ್ದಾರೆ, ಈ ಏಜೆಂಟ್ ಗಿರಿ ತಪ್ಪಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ, ದೇಶದ ಜನ ಇವರ ವಿರುದ್ಧ ತಿರುಗಿಬೀಳಬೇಕು ಎಂದು ಶಾಸಕ ರಿಜ್ವಾನ್ ಅರ್ಷದ್ ಕರೆನೀಡಿದರು. ೨೪೦೦ ಕೋಟಿ ಅಂಬಾನಿ, ಅದಾನಿ ಆದಾಯ ಹೆಚ್ಚಳವಾಗಿದೆ. ೨೫ ಏರ್ಪೋರ್ಟ್ ಗಳನ್ನ ಮಾರಾಟ ಮಾಡಿದ್ದಾರೆ, ಜನಸಾಮಾನ್ಯರಿಗೆ ಬೆಲೆ ಏರಿಕೆ ಬರೆ ಎಳೆದಿದ್ದಾರೆ ಎಂದು ಅರ್ಷದ್ ಆರೋಪಿಸಿದರು.

೨೧೦ ಕೋಟಿ ರೈತರ ಹಣ ಬಿ.ಸಿ.ಪಾಟೀಲ್ ಲೂಟಿ ಮಾಡಿದ್ದಾರೆ, ಇದೇ ಅಲ್ಲವೇ ಇವರ ಹಿಂದುತ್ವ, ಬದುಕಿರುವಾಗಲೇ ನರೇಂದ್ರ ಮೋದಿ ಸ್ಟೇಡಿಯಂಗೆ ನಾಮಕರಣ ಮಾಡಲಾಗಿದೆ ಎಂದು ಬಿಜೆಪಿ ವಿರುದ್ಧ ರಿಜ್ವಾನ್ ಅರ್ಷದ್ ಆಕ್ರೋಶ ವ್ಯಕ್ತಪಡಿಸಿದರು.
ಎಂಎಲ್ ಸಿ ಯು.ಬಿ.ವೆಂಕಟೇಶ್ ಮಾತನಾಡಿ, ಪೆಟ್ರೋಲ್ ಬೆಲೆ ಖಂಡಿಸಿ ಜನ ಬೀದಿಗೆ ಬಂದಿಲ್ಲ, ಕಾಂಗ್ರೆಸ್ ನವರು ಪ್ರತಿಭಟನೆ ಮಾಡುತ್ತಿದ್ದಾರೆ, ಹೀಗಂತ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ, ಬಿಜೆಪಿ ನಾಯಕರಿಗೆ ಜನರ ಬಗ್ಗೆ ಕಾಳಜಿ ಇಲ್ಲ, ಇಂತಹ ಹೇಳಿಕೆ ಕೊಡೋದ್ರಲ್ಲಿ ನಿಸ್ಸೀಮರು, ಬರಿದುಡ್ಡು ಹೊಡೆಯೋದಷ್ಟೇ ಅವರ ಕೆಲಸವಾಗಿದೆ ಎಂದು ಟಿಕೀಸಿದರು.
ಸಂಸ್ಕಾರವಿಲ್ಲದ ಶಾಸಕ ಅರಗ ಜ್ಙಾನೇಂದ್ರ ಗೃಹ ಸಚಿವರಾಗಿದ್ದಾರೆ, ಹೆಣ್ಣುಮಕ್ಕಳ ಬಗ್ಗೆ ಅವಹೇಳನ ಹೇಳಿಕೆ ನೀಡುತ್ತಾರೆ, ನಾಚಿಕೆಯಾಗಬೇಕು ಇಂತ ಗೃಹಸಚಿವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯಿಂದ ಜನರಿಗೆ ಒಳ್ಳೆಯದಾಗಲ್ಲ, ಯಾವಾಗ ಅಧಿಕಾರಕ್ಕೆ ಬಂದ್ರೂ ಜನರಿಗೆ ಕಷ್ಟ, ಬಿಜೆಪಿ ಆಸ್ತಿ ಅಂದರೆ ಅದು ಸುಳ್ಳು ಮಾತ್ರ ಎಂದು ಎಂಎಲ್ ಸಿ ಯು.ಬಿ.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೆ.ಜೆ.ಜಾರ್ಜ್, ಎಂಎಲ್ ಸಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.