ಬೆಂಗಳೂರು :ಕಳೆದ ಆರು ತಿಂಗಳ ನಂತರ ಇದೇ 13 ರಿಂದ ಅಧಿವೇಶನ ಆರಂಭವಾಗಲಿದೆ. ಯಾರೊಬ್ಬ ಶಾಸಕ,ಸಚಿವರು ಗೈರು ಹಾಜರಾಗದಂತೆ ಸದನದಲ್ಲಿ ಭಾಗವಹಿಸಲು ಕೋರಲಾಗಿದೆ ಎಂದು ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರೋಬ್ಬರಿ 10 ದಿನಗಳ ಕಾಲ ನಡೆಯಲಿರುವ ಅ ಅಧಿವೇಶನದಲ್ಲಿ 18 ಬಿಲ್ ಗಳು ಸರ್ಕಾರದಿಂದ ಬಂದಿದೆ ಎಂದು ತಿಳಿಸಿದರು. ಉತ್ತರ ಹೇಳಲು ಸಚಿವರು, ಪ್ರಶ್ನೆ ಕೇಳಲು ಸದಸ್ಯರು ಸದನದಲ್ಲಿ ಹಾಜರಾಗಬೇಕು, ಜನರ ಅಪೇಕ್ಷೆಗೆ ತಕ್ಕಂತೆ, ಗೌರವವಾಗಿ ಸದನ ನಡೆಸೋಣ ಎಂದು ಸಭಾಧ್ಯಕ್ಷರು ವಿವರಿಸಿದರು.
24 ರ ಕೊನೆಯ ದಿನ ಶುಕ್ರವಾರ ಅರ್ಧ ದಿನ ಅಧಿವೇಶನವಿರುತ್ತೆ, ಉಳಿದ ಅರ್ಧ ದಿನ ಸಂಸದೀಯ ಮೌಲ್ಯಗಳು ಕುರಿತಾಗಿ ಜಂಟಿ ಅದಿವೇಶನ ನಡೆಯಲಿದೆ. ಲೋಕಸಭೆಯ ಸ್ವೀಕರ್ ಓಂ ಬಿರ್ಲಾರವರು ಅಂದು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಸಂಸತ್ ಅಧಿವೇಶನ, ವಿವಿಧ ರಾಜ್ಯಗಳ ಅಧಿವೇಶನ ಏನಾಯ್ತು ಎಂದು ಎಲ್ಲರಿಗೂ ತಿಳಿದಿದೆ, ನಾವು ನಮ್ಮ ಜವಾಬ್ದಾರಿಯನ್ನ ಹೆಚ್ಚಿಸಿಕೊಳ್ಳಬೇಕಿದೆ ಎಂದರು. ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡಲು ತೀರ್ಮಾನ ಮಾಡಲಾಗಿದೆ, ಅಧಿವೇಶನದ ಕೊನೆಯ ದಿನ ಪ್ರಶಸ್ತಿ ನೀಡಲಾಗುವುದು ಎಂದು ವಿವರಿಸಿದರು.
ಈ ಬಾರಿ ಸಾರ್ವಜನಿಕರಿಗೆ ಅಧಿವೇಶನ ವೀಕ್ಷಣೆಗೆ ಅವಕಾಶ ನೀಡಲಾಗಿದೆ, ಈ ಸಂದರ್ಭದಲ್ಲಿ ಶಾಲಾ ಮಕ್ಕಳನ್ನ ಕರೆದುಕೊಂಡು ಬರೋದು ಬೇಡ ಎಂದು ಸ್ಪೀಕರ್ ಮನವಿ ಮಾಡಿದರು. 75ವರ್ಷ ಗಳ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದೇವೆ, ಸಭಾಧ್ಯಕ್ಷ, ಸಭಾಪತಿ, ಸಚಿವರಿಗೆ ನಿಗದಿತ ನಿವಾಸವನ್ನು ನೀಡಲು ಸರ್ಕಾರಕ್ಕೆ ಕೇಳಲಾಗಿದೆ ಎಂದರು. ಸರ್ಕಾರ ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.