ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸೆ.13ರಂದು ಗಜಪಯಣಕ್ಕೆ ಚಾಲನೆ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಸೆ. 13 ರಂದು ಗಜಪಯಣಕ್ಕೆ ಹುಣಸೂರಿನ ವೀರನ ಹೊಸಹಳ್ಳಿಯಲ್ಲಿ ಚಾಲನೆ ನೀಡಲಾಗುವುದು.8 ಆನೆಗಳು ಈ ಬಾರಿ ದಸರೆಗೆ ಬರಲಿವೆ ಎಂದು ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಅರಮನೆ ಮಂಡಳಿ ಸಭಾಂಗಣದಲ್ಲಿ ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ-2021ರ ದಸರಾ ಕಾರ್ಯ ಕಾರಿ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸೆ.16 ರಂದು ಮೈಸೂರು ಅರಮನೆಗೆ ಗಜಪಡೆ ಆಗಮಿಸಲಿದೆ.ಆನೆಗಳ ಪೋಷಣೆಗೆ 50 ಲಕ್ಷ ರೂ.ಮೀಸಲಿಡಲಾಗಿದೆ.ಅರಮನೆ ಆವರಣದಲ್ಲಿ 7 ದಿನವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಅ.7 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನಡೆಯಲಿದೆ.ಉದ್ಘಾಟಕರ ಆಯ್ಕೆಯನ್ನು ಮುಖ್ಯಮಂತ್ರಿ ಅವರಿಗೆ ಬಿಡಲಾಗಿದೆ.ಅರಮನೆ ಆವರಣದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಅಕ್ಟೋಬರ್ 15ರ ಸಂಜೆ 4.36 ರಿಂದ 4.44ರ ವೇಳೆಗೆ ನಂದಿ ಪೂಜೆ,ಬಳಿಕ ಸಂಜೆ 5 ರಿಂದ 5.36ರ ವರೆಗೆ ಜಂಬೂ ಸವಾರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ನಗರದ ಒಳಗೆ 100 ಕಿ.ಮೀ.ವಿದ್ಯುತ್ ದೀಪಾಲಂಕಾರ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.3 ಸ್ಥಬ್ದಚಿತ್ರಗಳಿಗೆ ಈ ಬಾರಿ ಅವಕಾಶ ನೀಡಲಾಗಿದೆ.ಅರಮನೆ ಆವರಣದಲ್ಲಿ ದಸರಾ ವೀಕ್ಷಣೆಗೆ ಎಷ್ಟು ಜನ ರಿಗೆ ಅವಕಾಶ ನೀಡಬೇಕು ಎಂಬುದನ್ನು ಸೆ.25ರ ಬಳಿಕ‌ ನಿರ್ಧರಿಸಲಾಗುವುದು.ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ನೋಡಿಕೊಂಡು ಎಷ್ಟು ಜನರಿಗೆ ಅವಕಾಶ ನೀಡಬೇಕು ಎಂದು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗು ವುದು.ಅಕ್ಟೋಬರ್ 17 ರಂದು ಗಜಪಡೆಗೆ  ಬೀಳ್ಕೊಡುಗೆ ಎಂದು ವಿವರಿಸಿದರು.

ಸಭೆಯಲ್ಲಿ ಸಂಸದ ಪ್ರತಾಪ್‌ಸಿಂಹ,ಶಾಸಕರಾದ ಎಸ್.ಎ.ರಾಮದಾಸ್,ಜಿ.ಟಿ.ದೇವೆಗೌಡ,ಕೆ.ಟಿ.ಶ್ರೀಕಂಠೇ ಗೌಡ,ನಿರಂಜನ್ ಕುಮಾರ್,ಎಲ್.ನಾಗೇಂದ್ರ,ಹರ್ಷವರ್ಧನ್,ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ  ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

More News

You cannot copy content of this page